ADVERTISEMENT

ಕೃಷಿ ಕಾಯ್ದೆ: ಮೋದಿ, ಅಮಿತ್‌ ಶಾ ಪ್ರತಿಕೃತಿ ದಹಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 11:29 IST
Last Updated 16 ಅಕ್ಟೋಬರ್ 2021, 11:29 IST
ವಿಜಯಪುರದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು
ವಿಜಯಪುರದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು   

ವಿಜಯಪುರ: ಕೃಷಿ ಕಾಯ್ದೆಗಳು ರದ್ದುಗೊಳಿಸಲು ಆಗ್ರಹಿಸಿ, ಲಖಿಂಪುರ ಖೇರಿ ರೈತರ ಹತ್ಯಾಕಾಂಡ ಖಂಡಿಸಿ ಹಾಗೂ ಬೆಲೆ ಏರಿಕೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಯುಕ್ತ ಹೋರಾಟ ಕರ್ನಾಟಕ (ರೈತ, ಕಾರ್ಮಿಕ, ದಲಿತ,ವಿದ್ಯಾರ್ಥಿ,ಯುವಜನ, ಮಹಿಳಾ, ಅಲ್ಪಸಂಖ್ಯಾತ) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಮಸೂದೆ ರದ್ದಾಗಲಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಯಾಗಲಿ, ಅಡುಗೆ ಅನಿಲ, ಡಿಸೇಲ್, ಪೆಟ್ರೋಲ್ ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ತಗ್ಗಿಸಿ, ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ ಮೊಳಗಿಸಿದರು.

ADVERTISEMENT

ಆರ್. ಕೆ. ಎಸ್. ರೈತ ಸಂಘಟನೆಯ ರಾಜ್ಯ ಅದ್ಯಕ್ಷ ಡಾ.ಟಿ.ಎಸ್. ಸುನೀಲ್‌ಕುಮಾರ್‌, ಕರಾಳ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ 10 ತಿಂಗಳಿಂದ ಲಕ್ಷಾಂತರ ರೈತರು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ದಮನ ಮಾಡಲು ಪ್ರಯತ್ನಿಸುತ್ತಿದೆ. ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್, ಇತ್ಯಾದಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಮಾಡಿ ಹಗಲು ದರೋಡೆ ನಡೆಸುತ್ತಿದೆ ಎಂದು ದೂರಿದರು.

ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ದೇಶದ ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಪ್ರಮುಖ ಅಡ್ಡಿಯಾಗಿರುವ ಕಾರ್ಮಿಕ ವರ್ಗದ ಚಳವಳಿಯನ್ನು ದಮನ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಮಾತ್ರವಲ್ಲ, ನೂರಾರು ವರ್ಷಗಳ ಹೋರಾಟದಿಂದ ಸಾಧಿಸಿದ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕನಿಷ್ಠ ವೇತನ, ಕೆಲಸದ ಭದ್ರತೆ ಮರೀಚಿಕೆಯಾಗುತ್ತಿದೆ ಎಂದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾದ್ಯಕ್ಷ ಬೀಮಶಿ ಕಲಾದಗಿ, ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು, ಮಸಿ ಬಳಿಯಲು ಆರಂಭದಿಂದಲೂ ಎಲ್ಲಾ ರೀತಿಯಿಂದಲೂ ಬಿಜೆಪಿ ಸರ್ಕಾರ ತನ್ನ ಕುತಂತ್ರಿ ಬುದ್ದಿ ತೋರಿಸುತ್ತಿದೆ. ಅದೇ ರೀತಿ ದೇಶದೆಲ್ಲೆಡೆ ಹೊರಾಟಗಾರರ ಮೇಲೆ ದಾಳಿ ನಡೆಸಿ ಕೊಲೆಗೈದು ಪ್ರಜಾತಂತ್ರವನ್ನೇ ಕಗ್ಗೊಲೆ ಮಾಡುತ್ತಿರುವ ಬಿಜೆಪಿಯ ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.

ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಕ್ತಿಕುಮಾರ,ರೈತರ ಹೋರಾಟವನ್ನು ದೇಶದ ಪ್ರತಿಯೊಬ್ಬ ಅನ್ನ ತಿನ್ನುವ ಪ್ರಜೆ ಬೆಂಬಲಿಸಬೇಕು. ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಕೀಳಾಗಿ ಮಾತನಾಡುವ ಪಕ್ಷಗಳಿಗೆ ಹಾಗೂ ಸರ್ಕಾರಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಎಚ್ಚರಿಸಿದರು.

ಮುಖಂಡರಾದ ಎಚ್. ವಿ. ದಿವಾಕರ್, ಅಪ್ಪಾಸಾಬ ಯರನಾಳ, ಬಿ. ಭಗವಾನ್ ರೆಡ್ಡಿ, ಅರವಿಂದ ಕುಲಕರ್ಣಿ, ಬೀಮರಾಯ ಪೂಜಾರಿ, ಸಿದ್ದಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ, ದಸ್ತಗೀರ ಉಕ್ಕಲಿ, ಖಲೀಪಾ, ಆಜಾದ್ ಟೇಲರ್, ಬಸವರಾಜ ಮಾಳಿ, ಸದಾನಂದ ಮೋದಿ, ಸುರೇಖಾ ರಜಪೂತ, ಭರತಕುಮಾರ, ಮಲ್ಲಿಕಾರ್ಜುನ್ ಎಚ್ ಟಿ, ಲಕ್ಷ್ಮಣ ಹಂದ್ರಾಳ, ರಿಜ್ವಾನ್ ಮುಲ್ಲಾ, ಸಂಗಪ್ಪ ಕಪಾಳೆ, ಕಾವೇರಿ ರಜಪುತ, ಸುರೇಖಾ ಕಡಪಟ್ಟಿ, ದೀಪಾ ವಡ್ಡರ, ಮಲ್ಲು ಸಾವುಕಾರ, ಮಹಾದೇವ ಲಿಗಾಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

***

ಕೇವಲ ಕೆಲವು ಬಂಡವಾಳಶಾಹಿ ಕಾರ್ಪೋರೇಟ್ ಮನೆತನಗಳಿಗೆ ಲಾಭ ಮಾಡುವ ಉದ್ದೇಶದಿಂದ ದೇಶದ ಅನ್ನದಾತರನ್ನು ಬಲಿ ಕೊಡುವ ಕೇಂದ್ರ ಸರ್ಕಾರದ ನಡೆ ಅತ್ಯಂತ ಜನ ವಿರೋಧಿಯಾಗಿದೆ

ಬಾಳು ಜೇವೂರ, ಜಿಲ್ಲಾ ಸಂಚಾಲಕ,ಆರ್ ಕೆ ಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.