ADVERTISEMENT

ರಾಷ್ಟ್ರಮಟ್ಟದ ಕೊಕ್ಕೊ: ರಜತ ಪದಕ ಪಡೆದ ಕರ್ನಾಟಕ ತಂಡ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 12:47 IST
Last Updated 16 ಜನವರಿ 2025, 12:47 IST
ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಕರ್ನಾಟಕ ಕೊಕ್ಕೊ ತಂಡದ 12 ಜನ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರ ಎನ್.ಬಿ.ದಾಸರ ಅವರನ್ನು ಆಲಮಟ್ಟಿ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬುಧವಾರ ಸನ್ಮಾನಿಸಲಾಯಿತು
ರಾಷ್ಟ್ರ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ಕರ್ನಾಟಕ ಕೊಕ್ಕೊ ತಂಡದ 12 ಜನ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರ ಎನ್.ಬಿ.ದಾಸರ ಅವರನ್ನು ಆಲಮಟ್ಟಿ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಬುಧವಾರ ಸನ್ಮಾನಿಸಲಾಯಿತು   

ಆಲಮಟ್ಟಿ: ‘ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಷ್ಟ್ರದ ನಾನಾ ರಾಜ್ಯಗಳ ಕೊಕ್ಕೊ ತಂಡಗಳನ್ನು ಸೋಲಿಸಿ, ದ್ವಿತೀಯ ಸ್ಥಾನ ಪಡೆದಿದ್ದು ಹೆಮ್ಮೆಯ ವಿಷಯ’ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರಾವದಗಿ ಹೇಳಿದರು.

ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ರಾಷ್ಟ್ರ ಮಟ್ಟದ ಕೊಕ್ಕೊ ಕ್ರೀಡೆಯಲ್ಲಿ ರಜತ ಪದಕ ಪಡೆದ ಕರ್ನಾಟಕ ತಂಡದ ಎಲ್ಲಾ 12 ಕೊಕ್ಕೊ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರ ಎನ್.ಬಿ.ದಾಸರ ಅವರಿಗೆ ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಗ್ರಾಮ ಪಂಚಾಯ್ತಿ, ನಿಡಗುಂದಿ ಪಟ್ಟಣ ಪಂಚಾಯ್ತಿ ಹಾಗೂ ಶಿಕ್ಷಕರ ಸಂಘದ ವತಿಯಿಂದ ಬುಧವಾರ ಜರುಗಿದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿ, ‘ಮುಂದಿನ ಕೆಲ ವರ್ಷಗಳಲ್ಲಿ ರಾಷ್ಟ್ರದ ಮಟ್ಟದ ಕೊಕ್ಕೊ ಮತ್ತು ಕಬಡ್ಡಿ ಪಂದ್ಯವನ್ನು ಸಂಘಟಿಸಲಾಗುವುದು, ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಹಳ್ಳಿ ಹುಡುಗಿಯರು ಯಾವುದೇ ಕಾರಣಕ್ಕೂ ಶಿಕ್ಷಣ ಹಾಗೂ ಕ್ರೀಡೆಯನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಮುಂದೆ ಭಾರತ ಕೊಕ್ಕೊ ತಂಡ ಪ್ರತಿನಿಧಿಸುವಂತಾಗಬೇಕು, ಅದಕ್ಕೆ ಬೇಕಾದ ಎಲ್ಲಾ ಆರ್ಥಿಕ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

ಯುವ ಮುಖಂಡ ಸಂಗಮೇಶ ಬಳಿಗಾರ, ತಾಲ್ಲೂಕು ಪಂಚಾಯ್ತಿ ಇಒ ವೆಂಕಟೇಶ ವಂದಾಲ, ಜಿ.ಸಿ. ಮುತ್ತಲದಿನ್ನಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ ವಂದಾಲ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣ ವಿಭೂತಿ, ಮುನ್ನಾ ಬೆಣ್ಣಿ, ಗ್ಯಾನಪ್ಪಗೌಡ ಬಿರಾದಾರ, ಮೆಹೆಬೂಬ್ ಬಿಳೇಕುದರಿ, ಬಿ.ಎಸ್.ಯರವಿನತೆಲಿಮಠ, ಎಂ.ಆರ್.ಮಕಾನದಾರ್, ರಾಘವೇಂದ್ರ ವಡವಡಗಿ, ಪಿಡಿಒ ಎ.ಎ.ಖೇಜಿ ಇದ್ದರು.

ಸಾರೋಟದಲ್ಲಿ ಮೆರವಣಿಗೆ: ಕೊಕ್ಕೊ ಕ್ರೀಡಾಪಟುಗಳನ್ನು ಹಾಗೂ ತರಬೇತುದಾರರನ್ನು ನಿಡಗುಂದಿ ಪಟ್ಟಣದಿಂದ ಬೇನಾಳ ಆರ್.ಎಸ್. ಗ್ರಾಮದವರೆಗೆ 8 ಕಿ.ಮೀ ವರೆಗೆ ಸಾರೋಟದಲ್ಲಿ ಅದ್ಧೂರಿ ಮೆರವಣಿಗೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.