ADVERTISEMENT

ಪತ್ರಕರ್ತರ ಸಮ್ಮೇಳನ | ಸುದ್ದಿಮನೆಯಲ್ಲಿ ಪತ್ರಕರ್ತೆಯರ ಸಂಖ್ಯೆ ಇಳಿಕೆ

ಸಮ್ಮೇಳನದ ಗೋಷ್ಠಿಯಲ್ಲಿ ಪತ್ರಕರ್ತೆಯರ ಕಳವಳ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 15:12 IST
Last Updated 5 ಫೆಬ್ರುವರಿ 2023, 15:12 IST
ವಿಜಯಪುರದ ಕಂದಗಲ್  ಹನುಮಂತರಾಯ ರಂಗಮಂದಿರದಲ್ಲಿ ನಡೆದ ಪತ್ರಕರ್ತರ ಸಮ್ಮೇಳನದ ‘ಸುದ್ದಿಮನೆ ಹಾಗೂ ಮಾಧ್ಯಮ’ ವಿಚಾರಗೋಷ್ಠಿಯಲ್ಲಿ ಪತ್ರಕರ್ತೆ ಶಾಂತಲಾ ಧರ್ಮರಾಜ್ ಮಾತನಾಡಿದರು
ವಿಜಯಪುರದ ಕಂದಗಲ್  ಹನುಮಂತರಾಯ ರಂಗಮಂದಿರದಲ್ಲಿ ನಡೆದ ಪತ್ರಕರ್ತರ ಸಮ್ಮೇಳನದ ‘ಸುದ್ದಿಮನೆ ಹಾಗೂ ಮಾಧ್ಯಮ’ ವಿಚಾರಗೋಷ್ಠಿಯಲ್ಲಿ ಪತ್ರಕರ್ತೆ ಶಾಂತಲಾ ಧರ್ಮರಾಜ್ ಮಾತನಾಡಿದರು   

ವಿಜಯಪುರ: ಸುದ್ದಿಮನೆಯಲ್ಲಿ 2015ರಲ್ಲಿ ಶೇ 43 ರಷ್ಟಿದ್ದ ಪತ್ರಕರ್ತೆಯರ ಪ್ರಾತಿನಿಧ್ಯ ಸದ್ಯ ಶೇ 13 ಕ್ಕೆ ಇಳಿದಿರುವುದು ಆತಂಕಕಾರಿ ಸಂಗತಿ ಎಂದು ಪತ್ರಕರ್ತೆ ಶಾಂತಲಾ ಧರ್ಮರಾಜ್ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ‘ಸುದ್ದಿಮನೆ ಹಾಗೂ ಮಹಿಳೆಯರು’ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲಗಳನ್ನು ಉನ್ನತೀಕರಿಸಿಕೊಂಡಾಗ ಮಾತ್ರ ವೃತ್ತಿಯಲ್ಲಿ ಅಸ್ಥಿತ್ವ ಕಾಯ್ದುಕೊಳ್ಳಲು ಸಾಧ್ಯ ಎಂದರು.

ADVERTISEMENT

ಕೋವಿಡ್ ನಂತರ ಕಾಲಘಟ್ಟದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುವಂತಾಯಿತು. ಮದುವೆ, ಹೆರಿಗೆ ಮೊದಲಾದ ವಿಷಯಕ್ಕೆ ರಜೆ ಕೊಡಬೇಕಲ್ಲ ಎಂಬ ಮನೋಭಾವದಿಂದ ಅನೇಕ ಸಂಸ್ಥೆಗಳು ಮಹಿಳೆಯರಿಗೆ ಉದ್ಯೋಗಕ್ಕೆ ಸೇರ್ಪಡೆ ಮಾಡಿಕೊಳ್ಳುವುದೇ ಕಡಿಮೆ, ಸುದ್ದಿಮನೆ ಸಹ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದರು.

ಸುದ್ದಿಮನೆಯಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಮಹಿಳೆ ಉನ್ನತ ತಂತ್ರಜ್ಞಾನ ನೆರವು ಪಡೆದುಕೊಂಡು ಕೌಶಲವನ್ನು ಉನ್ನತೀಕರಿಸಿಕೊಂಡು ಮುನ್ನಡೆಯಬೇಕು. ಕೇವಲ ಡೆಸ್ಕ್‌ನಲ್ಲಿ ಟೈಪ್ ಮಾಡುವ, ಮೈಕ್ ಹಿಡಿಯುವ ಕಾರ್ಯಕ್ಕೆ ಸೀಮಿತವಾದರೆ ಅಸ್ಥಿತ್ವಕ್ಕೆ ಖಂಡಿತವಾಗಿಯೂ ಧಕ್ಕೆ ಬರುತ್ತದೆ, ಪತ್ರಕರ್ತರ ಸ್ಥಾನವನ್ನು ಮೌನವಾಗಿಯೇ ಯೂಟ್ಯೂಬರ್‌ಗಳು ಆಕ್ರಮಿಸಿಕೊಂಡಾಗಿದೆ. ಈ ಹಿನ್ನೆಲೆಯಲ್ಲಿ ಕೌಶಲ ವೃದ್ಧಿಯೇ ಒಂದು ದಿವ್ಯ ಹೆಜ್ಜೆಯಾಗಿದೆ ಎಂದರು.

ಬೆಂಗಳೂರು ಆಕಾಶವಾಣಿಯ ಬಿ.ಕೆ. ಸುಮತಿ ಮಾತನಾಡಿ, ಆಂಗ್ಲ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನವನ್ನು ಮಹಿಳೆ ಅಲಂಕರಿಸಿದ್ದಾಳೆ. ಆದರೆ, ಕನ್ನಡ ಪತ್ರಿಕೋದ್ಯಮದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಉನ್ನತ ಸ್ಥಾನವನ್ನು ಅಲಂಕರಿಸಿ ಮಿಂಚಿ ಮಾಯವಾಗಿದ್ದಾರೆ. ಆಂಗ್ಲ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನದಲ್ಲಿ ಮಹಿಳೆಯರ ಸ್ಥಾನಮಾನ ಸಾಧ್ಯವಾಗಿರುವಾಗ ಕನ್ನಡ ಪತ್ರಿಕೋದ್ಯಮದಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಬ್ಯೂರೊ ಮುಖ್ಯಸ್ಥರು, ಜಿಲ್ಲಾ ವರದಿಗಾರ ಸ್ಥಾನದಲ್ಲಿಯೂ ಮಹಿಳೆಯ ಪ್ರಾತಿನಿಧ್ಯ ತೀರಾ ಕಡಿಮೆ ಎಂದರು.

ಪ್ರತಿಕ್ರಿಯೆ ನೀಡಿದ ಕೆ.ಬಿ. ಶುಭಾ, ಯಾವ ರಂಗದಲ್ಲಿಯೂ ಮಹಿಳೆ ಪ್ರಾತಿನಿಧ್ಯ ಶೇ 50 ದಾಟಿಲ್ಲ, ಮಹಿಳೆ ಕಾರ್ಯನಿಷ್ಠೆ, ಜವಾಬ್ದಾರಿ ಸಮರ್ಥ ನಿರ್ವಹಣೆ ಮಾಡುವರು ಮಹಿಳೆಯರೇ. ಆದರೆ, ಕೌಟುಂಬಿಕ ಜವಾಬ್ದಾರಿ ಮುನ್ನಡೆಸುವ ಹೊಣೆಗಾರಿಕೆಯೂ ಅವಳ ಮೇಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಿದೆ. ಅಪರಾಧ, ರಾಜಕೀಯ ವರದಿಗಾರಿಕೆಯಲ್ಲಿ ಮಹಿಳೆಯರು ಆಸಕ್ತಿ ತೋರುವುದು ಕಡಿಮೆ, ಹೀಗಾಗಿ ಈ ವಲಯಗಳ ವರದಿಗಾರಿಕೆ ಸಂದರ್ಭದಲ್ಲಿ ಮಹಿಳೆ ಶೇ 100 ರಷ್ಟು ಕಾರ್ಯದಕ್ಷತೆ ತೋರಲು ಕಷ್ಟ ಸಾಧ್ಯ ಎಂದು ವಿಶ್ಲೇಷಿಸಿದರು.

ಮಹಿಳಾ ವಿವಿ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ.ಓಂಕಾರ ಕಾಕಡೆ ಮಾತನಾಡಿ, ಪತ್ರಿಕೋದ್ಯಮ ಕೋರ್ಸ್ ಮುಗಿಸಿದ ಮಹಿಳೆಯರು ಸುದ್ದಿಮನೆಯಲ್ಲಿಲ್ಲ, ಮದುವೆ, ಹೆರಿಗೆಯಾದ ತಕ್ಷಣ ಕೆಲಸವನ್ನು ಅರ್ಧಕ್ಕೆ ಬಿಡುವ ಮನೋಭಾವ ತೋರುವುದರಿಂದ ಸಂಸ್ಥೆಗಳು ಮಹಿಳೆಯರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳದಿರಲು ಅಲಿಖಿತ ನಿಯಮ ರೂಪಿಸಿಕೊಂಡಿದ್ದಾರೆ, ಏತನ್ಮಧ್ಯೆಯೂ ಅನೇಕ ಪತ್ರಕರ್ತೆಯರು ಸಮರ್ಥ ಜವಾಬ್ದಾರಿ ನಿರ್ವಹಣೆ ಮಾಡಿದರೂ ಆಂಗ್ಲ ಪತ್ರಿಕೋದ್ಯಮ ಮಾದರಿಯಲ್ಲಿ ಉನ್ನತ ಸ್ಥಾನದಲ್ಲಿರುವ ಮಹಿಳೆಯರ ಸಂಖ್ಯೆ ಕಡಿಮೆ ಎಂದರು.

ಪತ್ರಕರ್ತೆ ಸವಿತಾ ರೈ, ಸುಧಾರಾಣಿ, ಪತ್ರಕರ್ತ ಎಂ.ಆರ್. ಸತ್ಯನಾರಾಯಣ ಮಾತನಾಡಿದರು.

ಶೀಲಾ ಪ್ರತಾಪಸಿಂಹ ತಿವಾರಿ, ಐಯುಡಬ್ಲ್ಯೂಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಕಾನಿಪ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಇದ್ದರು.

***

ವೇತನ ತಾರತಮ್ಯ, ಜವಾಬ್ದಾರಿ ಹಂಚಿಕೆಯಲ್ಲಿ ತಾರತಮ್ಯಗಳಿಂದಾಗಿ ಮಹಿಳೆ ಸುದ್ದಿಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
–ಡಾ.ಓಂಕಾರ ಕಾಕಡೆ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ, ಮಹಿಳಾ ವಿವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.