
ನಿಡಗುಂದಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಜಿಲ್ಲೆಯ ದೊಡ್ಡ ಪಟ್ಟಣ ಹಾಗೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಆಲಮಟ್ಟಿ ಸಮೀಪದ ನಿಡಗುಂದಿ ತಾಲ್ಲೂಕು ಕೇಂದ್ರಕ್ಕೆ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಆಥವಾ ಅಪಘಾತ ಪ್ರಕರಣಗಳಿಗೆ ತುರ್ತು ಚಿಕಿತ್ಸಾ ಸೌಲಭ್ಯ ಹೊಂದಿರುವ ಸರ್ಕಾರಿ ಹೈಟೆಕ್ ಆಸ್ಪತ್ರೆ ಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.
ತಾಲ್ಲೂಕು ಕೇಂದ್ರವಾಗಿರುವ ನಿಡಗುಂದಿ ಪಟ್ಟಣದ ಮೂಲಕ ಸೊಲ್ಲಾಪುರ–ವಿಜಯಪುರ–ಚಿತ್ರದುರ್ಗ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 50 ಹಾಯ್ದು ಹೋಗಿದೆ. ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಆಲಮಟ್ಟಿ ಜಲಾಶಯ ಸಹ ಪಕ್ಕದಲ್ಲೇ ಇದೆ. ನಿಡಗುಂದಿ ನೂತನ ತಾಲ್ಲೂಕು ಆಗಿ ದಶಕವಾಗುತ್ತಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಇನ್ನೂ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಲ್ಲ.
ನಿತ್ಯ ಕನಿಷ್ಠ ನಾಲ್ಕೈದು ಅಪಘಾತ ಪ್ರಕರಣಗಳಂತೆ ತಿಂಗಳಿಗೆ ಅಂದಾಜು 120-130 ಅಪಘಾತ ಪ್ರಕರಣಗಳು ಇಲ್ಲಿನ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತವೆ. ಆದರೆ, ಗಾಯಗೊಂಡವರಿಗೆ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಇಲ್ಲಿ ತೀವ್ರ ನಿಗಾ ಘಟಕ(ಐಸಿಯು), ಎಲುಬು ಮೂಳೆ ತಜ್ಞ ವೈದ್ಯರು, ರೆಡಿಯಾಲಾಜಿಸ್ಟ್ ಹಾಗೂ ಅವಶ್ಯಕ ಸಿಬ್ಬಂದಿ ಕೊರತೆಯಿದ್ದು, ಅವರನ್ನು ಅನಿವಾರ್ಯವಾಗಿ ವಿಜಯಪುರ ಅಥವಾ ನೆರೆಯ ಬಾಗಲಕೋಟೆಯ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಸಮೀಪವೇ ಸುಮಾರು 4 ಎಕರೆ ಜಾಗದಲ್ಲಿರುವ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸದ್ಯ 30 ಹಾಸಿಗೆಗಳ ಸೌಲಭ್ಯ, ಐವರು ತಜ್ಞವೈದ್ಯರು, ನರ್ಸಿಂಗ್ ಸಿಬ್ಬಂದಿ, ಒಂದು ಆಂಬುಲೆನ್ಸ್ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆದರೆ, ಹೆಚ್ಚಾಗಿ ಬರುವ ಅಪಘಾತ ಪ್ರಕರಣಗಳ ರೋಗಿಗಳಿಗೆ ತುರ್ತುಚಿಕಿತ್ಸೆ ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಇಲ್ಲಿ 50 ಹಾಸಿಗೆ ಸೌಲಭ್ಯ, ಸುಸಜ್ಜಿತವಾದ ತೀವ್ರ ನಿಗಾ ಘಟಕ (ಐಸಿಯು), ಒಬ್ಬ ಎಲುಬು ಮೂಳೆತಜ್ಞರು, ಜನರಲ್ ಮೆಡಿಸನ್ ತಜ್ಞರು, ರೇಡಿಯಾಲಾಜಿಸ್ಟ್, ಮೂವರು ನರ್ಸಿಂಗ್ ಸಿಬ್ಬಂದಿ, ಎರಡು ಹೆಚ್ಚುವರಿ ಆಂಬುಲೆನ್ಸ್ ಜೊತೆಗೆ ಅವಶ್ಯಕ ಔಷಧ ಸಂಗ್ರಹ ಬೇಕಾಗುತ್ತದೆ.
ಇಲ್ಲಿ ಹೆಚ್ಚು ಹೆರಿಗೆಗಳಾಗುತ್ತಿದ್ದು, ಒಂದು ಸುಸಜ್ಜಿತವಾದ ತಾಯಿ ಮಕ್ಕಳ ಆಸ್ಪತ್ರೆ ಸೌಲಭ್ಯವು ಆಗಬೇಕಿದೆ. ಇಲ್ಲಿನ ಪರಿಸ್ಥಿತಿ, ಅವಶ್ಯಕತೆ ಗಮನಿಸಿ ಇಲ್ಲಿಗೆ ಬರುವ ಅಪಘಾತ ಪ್ರಕರಣಗಳ ರೋಗಿಗಳಿಗೆ, ಗರ್ಭಿಣಿಯರಿಗೆ ಸೇರಿದಂತೆ ಎಲ್ಲಾ ರೀತಿಯ ರೋಗಿಗಳಿಗೆ ತುರ್ತು ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ನಿಡಗುಂದಿಗೆ ಸುಸಜ್ಜಿತ ತಾಲ್ಲೂಕು ಆಸ್ಪತ್ರೆ ಅಥವಾ ಒಂದು ಹೈಟೆಕ್ ಆಸ್ಪತ್ರೆ ಆಗಬೇಕು ಎಂದು ಜನರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರದಿಂದ ಅತ್ಯಾಧುನಿಕ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ಈ ನಿಟ್ಟಿನಲ್ಲಿ ಗಮನಹರಿಸಬೇಕು- ಸಂಗಮೇಶ ಕೆಂಭಾವಿ, ತಾಲ್ಲೂಕು ಕಸಾಪ ಅಧ್ಯಕ್ಷ ನಿಡಗುಂದಿ
ನಿಡಗುಂದಿ ಪಟ್ಟಣಕ್ಕೆ ಸರ್ಕಾರಿ ಹೈಟೆಕ್ ಆಸ್ಪತ್ರೆ ಸ್ಥಾಪಿಸಿಬೇಕು. ಇಲ್ಲವೇ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯನ್ನಾಗಿ ಉನ್ನತಿಕರಿಸಬೇಕು- ಶಿವಾನಂದ ಅವಟಿ, ಜಿ.ಪಂ ಮಾಜಿ ಸದಸ್ಯ ನಿಡಗುಂದಿ
ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಐಸಿಯು ಘಟಕ ಹಾಗೂ ಎಲುಬು ಮೂಳೆ ಮತ್ತು ಜನರಲ್ ಮೆಡಿಸಿನ್ ತಜ್ಞವೈದ್ಯರು ರೆಡಿಯಾಲೋಜಿಸ್ಟ್ ಕೊರತೆ ಇದೆ- ಡಾ. ಪ್ರಕಾಶ ಗೋಟಖಂಡ್ಕಿ, ಹಿರಿಯ ಆಡಳಿತ ವೈದ್ಯಾಧಿಕಾರಿ ಸಮುದಾಯ ಆರೋಗ್ಯ ಕೇಂದ್ರ ನಿಡಗುಂದಿ
ಸಚಿವ ಶಿವಾನಂದ ಪಾಟೀಲರ ಸೂಚನೆಯಂತೆ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೇಗೇರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ- ಡಾ.ಸಂಪತ್ ಗುಣಾರಿ, ಜಿಲ್ಲಾ ಆರೋಗ್ಯಾಧಿಕಾರಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.