ನಿಡಗುಂದಿ: ಒಂದೇ ಬೆಳೆ ಮೇಲೆ ಅವಲಂಬಿತವಾಗದೇ ಸಮಗ್ರ ಕೃಷಿ ಮಾಡಿ, ವಿಶೇಷವಾಗಿ ಉತ್ತಮ ಲಾಭ ತಂದುಕೊಡುವ ರೇಷ್ಮೆ ಕೃಷಿಗೆ ಹೆಚ್ಚಿನ ಒತ್ತು ನೀಡುವಂತೆ ನಿಡಗುಂದಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ರೈತರಿಗೆ ಸಲಹೆ ನೀಡಿದರು.
ತಾ.ಪಂ ಮತ್ತು ರೇಷ್ಮೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ತಾಲ್ಲೂಕಿನ ಮಾರಡಗಿ ಗ್ರಾಮದ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ರೇಷ್ಮೆ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯಪುರ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಬಿ.ವೈ.ಬಿರಾದಾರ ಮಾತನಾಡಿ, ರೇಷ್ಮೆ ವ್ಯವಸಾಯ ಕೈಗೊಳ್ಳಲು ರೈತರಿಗೆ ಇಲಾಖೆಯಿಂದ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ರೇಷ್ಮೆಗೂಡು, ಹಿಪ್ಪುನೆರಳೆ ನಾಟಿ, ಹನಿ ನೀರಾವರಿ, ಹುಳು ಸಾಕಾಣಿಕೆ ಮನೆ ಮತ್ತು ತಾತ್ಕಾಲಿಕ ಶೆಡ್ ನಿರ್ಮಿಸಿಕೊಳ್ಳಲು, ರೇಷ್ಮೆಗೂಡು ಸಾಗಣೆ ವೆಚ್ಚ ಹೀಗೆ ಎಲ್ಲದಕ್ಕೂ ಇಲಾಖೆಯಿಂದ ನಿರಂತರ ಪ್ರೋತ್ಸಾಹಧನವಿದೆ ಎಂದರು. ರಾಯಪುರ ರೇಷ್ಮೆ ತರಬೇತಿ ಶಾಲೆಯ ಸಹಾಯಕ ನಿರ್ದೇಶಕಿ ಸುನಿತಾ ಅವರು ಮಾತನಾಡಿ, ಸಿಲ್ಕ್ ಸಮಗ್ರ ಯೋಜನೆಯಲ್ಲಿ ರೇಷ್ಮೆ ವ್ಯವಸಾಯ ಮಾಡಲು ಉತ್ಕೃಷ್ಟವಾದ ತರಬೇತಿ ನೀಡಲಾಗುತ್ತಿದ್ದು ರೈತರು ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಬಸವನಬಾಗೇವಾಡಿ ರೇಷ್ಮೆ ವಿಸ್ತರಣಾಧಿಕಾರಿ ಸುರೇಶ ಗೋಲಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿ, ನಿಡಗುಂದಿ ತಾಲ್ಲೂಕಿನಲ್ಲಿ ಗಣಿ ಗ್ರಾಮ ರೇಷ್ಮೆ ಕೃಷಿಗೆ ಒಂದು ಕ್ಲಸ್ಟರ್ ಆಗಿ ಅಭಿವೃದ್ಧಿ ಹೊಂದುತ್ತಿದ್ದು, ಪ್ರತಿ ತಿಂಗಳು ಸುಮಾರು ಒಂದೂವರೇ ಲಕ್ಷ ಆದಾಯ ಗಳಿಸುತ್ತಿರುವ ಪ್ರಗತಿಪರ ರೈತರಾದ ಸೋಮನಿಂಗಪ್ಪ ಜನವಾಡ ಹಾಗೂ ಹುಚ್ಚೇಶ ಜನವಾಡ ಅವರ ಮಾದರಿಯಂತೆ ಇನ್ನಿತರ ರೈತರು ರೇಷ್ಮೆ ಕೃಷಿ ಮಾಡಿ ಆರ್ಥಿಕವಾಗಿ ಸಬಲರಾಗಬೇಕೆಂದು ಸಲಹೆ ನೀಡಿದರು.
ಇದೇ ವೇಳೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಡಗುಂದಿ ತಾಲ್ಲೂಕಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದ್ದು, ಈ ಸಂಬಂಧ ತಾ.ಪಂ ಇಓ ವೆಂಕಟೇಶ ವಂದಾಲ ಅವರನ್ನು ಮತ್ತು ಸಾಧಕ ಪ್ರಗತಿಪರ ರೇಷ್ಮೆ ಬೆಳೆಗಾರರಾದ ಸದಾಶಿವ ಜನವಾಡ, ಸುಭಾಷ್ ಬೋರಣ್ಣನವರ, ಸಿದ್ದಪ್ಪ ಗೂಗಿಹಾಳ, ಹುಚ್ಚೇಶ ಜನವಾಡ, ಹಣಮಂತ ಕುಂಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಗತಿಪರ ಹಿರಿಯ ರೇಷ್ಮೆ ಬೆಳಗಾರರಾದ ಸೋಮಲಿಂಗಪ್ಪ ಜನವಾಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರದ ರೇಷ್ಮೆ ವಿಸ್ತರಣಾಧಿಕಾರಿ ಗಂಗಾಧರ ಜೇವೂರ, ಕೇಂದ್ರ ರೇಷ್ಮೆ ಮಂಡಳಿ ಕೊಪ್ಪಳದ ಹಿರಿಯ ತಾಂತ್ರಿಕ ಸಹಾಯಕಿ ಜೆ. ವಾಸಂತಿ ಸೇರಿದಂತೆ ತಾಲ್ಲೂಕಿನ ರೇಷ್ಮೆ ಬೆಳೆಗಾರರು ಹಾಗೂ ಗ್ರಾಮದ ಪ್ರಮುಖರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.