ADVERTISEMENT

ಸಿಂದಗಿ ಪುರಸಭೆ ಅಧ್ಯಕ್ಷರ ವಿರುದ್ದ ಫೆ.23ಕ್ಕೆ ಅವಿಶ್ವಾಸ ಸಭೆ

ಶಾಂತೂ ಹಿರೇಮಠ
Published 19 ಫೆಬ್ರುವರಿ 2023, 13:10 IST
Last Updated 19 ಫೆಬ್ರುವರಿ 2023, 13:10 IST
ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯ
ಸಿಂದಗಿ ಪಟ್ಟಣದ ಪುರಸಭೆ ಕಾರ್ಯಾಲಯ   

ಸಿಂದಗಿ: ಪಟ್ಟಣದ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ವಿರುದ್ಧ ಫೆ.23ರಂದು ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡನೆ ವಿಶೇಷ ಸಭೆ ನಡೆಯಲಿದೆ.

ಪುರಸಭೆ 15 ಜನ ಸದಸ್ಯರು ಅಧ್ಯಕ್ಷ ಮನಗೂಳಿ ವಿರುದ್ಧ ಅವಿಶ್ವಾಸ ಸಭೆ ನಡೆಸಲು ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಡಾ.ಮನಗೂಳಿ ಕಲಬುರ್ಗಿ ಹೈಕೋರ್ಟ್‌ ಪೀಠದಿಂದ ತಡೆಯಾಜ್ಞೆ ತಂದಿದ್ದರು. ಮತ್ತೆ ಸದಸ್ಯರು ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರಿಂದ ಕೋರ್ಟ್ ಫೆ.23 ರಂದು ಅವಿಶ್ವಾಸ ಸಭೆ ಕರೆಯುವಂತೆ ಮುಖ್ಯಾಧಿಕಾರಿಗೆ ಆದೇಶಿಸಿದೆ.

ಹೀಗಾಗಿ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಫೆ.23 ರಂದು ಅವಿಶ್ವಾಸ ವಿಶೇಷ ಸಭೆ ಕರೆದಿದ್ದಾರೆ. ಸಭೆಗೆ ಹಾಜರಾಗಲು 23 ಜನ ಪುರಸಭೆ ಸದಸ್ಯರು, ಸಂಸದ, ಶಾಸಕರಿಗೆ ನೋಟಿಸ್‌ ನೀಡಿದ್ದಾರೆ.

ADVERTISEMENT

ಪುರಸಭೆ ಅಧ್ಯಕ್ಷ ಸ್ಥಾನದ ಅವಧಿ ಉಳಿದಿರುವುದು ಕೇವಲ ಎರಡು ತಿಂಗಳು ಮಾತ್ರ. ಈಗ ಒಂದು ವೇಳೆ ಅವಿಶ್ವಾಸ ಗೊತ್ತುವಳಿ ನಿರ್ಣಯ ಯಶಸ್ವಿಗೊಂಡು ಅಧ್ಯಕ್ಷರು ಸ್ಥಾನದಿಂದ ಕೆಳಗಿಳಿದರೂ ಹೊಸ ಅಧ್ಯಕ್ಷನ ಆಯ್ಕೆಗಾಗಿ ಸಭೆ ಕರೆಯಲು ಕಾಲಾವಕಾಶ ಇದೆಯಾ ಎಂಬ ಪ್ರಶ್ನೆಯೂ ಎದುರಾಗುವ ಸಾಧ್ಯತೆ ಇದೆ.

ಎರಡು ತಿಂಗಳು ಕಾಲಾವಕಾಶ ಹೊಸ ಅಧ್ಯಕ್ಷನ ಆಯ್ಕೆಗೆ ಕಾನೂನು ಅಡೆತಡೆಯಾಗಬಹುದೆಂಬ ಮಾತು ಕೇಳಿ ಬರುತ್ತಿದೆ. ಕನಿಷ್ಠ ಆರು ತಿಂಗಳ ಕಾಲಾವಕಾಶವಾದರೂ ಇರಬೇಕೆಂಬ ನಿಯಮಾವಳಿ ಇದೆ ಎನ್ನಲಾಗುತ್ತಿದೆ. ಇದರಿಂದಾಗಿ ಈಗಿನ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಯಾಗಿ ಹೊಸ ಅಧ್ಯಕ್ಷನ ಆಯ್ಕೆ ಸಭೆ ನಡೆಸಲು ಸಾಧ್ಯವಾಗದೇ ಇದ್ದಾಗ ಮುಂಬರುವ ಎರಡು ತಿಂಗಳ ಅವಧಿಗಾಗಿ ಉಪಾಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗಿ ಆಡಳಿತ ನಡೆಸಬಹುದು ಎಂದು ಕಾನೂನು ತಜ್ಞರಿಂದ ಅಭಿಪ್ರಾಯ ಕೇಳಿ ಬಂದಿದೆ.

ಹೀಗಾದರೆ ಪುರಸಭೆ ಅಧ್ಯಕ್ಷ ಆಗಬೇಕೆಂದು ವರ್ಷದುದ್ದಕ್ಕೂ ಪ್ರಯತ್ನ ಪಡುತ್ತಲೆ ಹೊರಟಿದ್ದ ಸದಸ್ಯ ಹಣಮಂತ ಸುಣಗಾರರಿಗೆ ಮತ್ತೆೆ ನಿರಾಸೆ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಅರ್ಜಿ ಸಲ್ಲಿಸಿದ 15 ಜನ ಸದಸ್ಯರು ಹಾಜರಿರಬಹುದಾಗಿದೆ. ಬಿಜೆಪಿ ಮೂವರು ಸದಸ್ಯರು ಶಾಸಕರ ನಿರ್ದೇಶನದ ಮೇರೆಗೆ ಗೈರು ಉಳಿದರೂ ಉಳಿಯಬಹುದು. ಇಬ್ಬರು ಕಾಂಗ್ರೆಸ್ ಸದಸ್ಯರು ಡಾ.ಮನಗೂಳಿ ಪರವಾಗಿರುತ್ತಾರೆ ಎನ್ನಲಾಗುತ್ತಿದೆ. ಒಬ್ಬ ಜೆಡಿಎಸ್ ಸದಸ್ಯೆ, ಇನ್ನೊಬ್ಬ ಕಾಂಗ್ರೆಸ್ ಸದಸ್ಯ ಬೆಂಬಲಿಸುತ್ತಾರೋ ವಿರೋಧಿಸುತ್ತಾರೋ? ಗೊತ್ತಿಲ್ಲ ಎಂದು ಹೇಳಲಾಗುತ್ತಿದೆ.

ಮುಂಬರುವ ಅಧ್ಯಕ್ಷ ಸ್ಥಾನದ ಆಯ್ಕೆಯ ಸಭೆ ನಡೆಸಲು ಅವಕಾಶವಿದ್ದರೆ ಮಾತ್ರ ಈ ಅವಿಶ್ವಾಸ ಸಭೆ ನಡೆಯುತ್ತದೆ. ಇಲ್ಲದಿದ್ದರೆ ಈ ಸಭೆ ನಡೆಯುವುದಿಲ್ಲ ಎಂಬ ಮಾತೂ ಕೆಲ ಸದಸ್ಯರು ಪ್ರತಿಕ್ರಿಯಿಸಿದ್ದಾರೆ.

***

ನನ್ನ ವಿರುದ್ದ 3-4 ಸಲ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಿದ್ದಾರೆ. ನನಗೂ ಸಾಕಾಗಿ ಹೋಗಿದೆ. ಆದಾಗ್ಯೂ ಕೆಲವು ಸದಸ್ಯರು ನನಗೆ ಬೆಂಬಲಿಸುವುದಾಗಿ ತಿಳಿಸುತ್ತಿದ್ದಾರೆ.
-ಡಾ.ಶಾಂತವೀರ ಮನಗೂಳಿ, ಪುರಸಭೆ ಅಧ್ಯಕ್ಷ

***

ಕಾನೂನು ಸಲಹೆ ಪಡೆಯಲಾಗಿದೆ. ಎರಡು ತಿಂಗಳ ಕಾಲಾವಕಾಶ ಇದ್ದರೂ ಅಧ್ಯಕ್ಷ ಆಯ್ಕೆಯ ಸಭೆ ನಡೆಸಬಹುದಾಗಿದೆ ಎಂದು ತಿಳಿಸಿದ್ದಾರೆ
-ಹಣಮಂತ ಸುಣಗಾರ, ಪುರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.