ADVERTISEMENT

ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರ| ಸೋಲು–ಗೆಲುವಿನ ಲೆಕ್ಕಾಚಾರ ಜೋರು

ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಫಲಿತಾಂಶ ಇಂದು

ಬಸವರಾಜ ಸಂಪಳ್ಳಿ
Published 14 ಜೂನ್ 2022, 19:30 IST
Last Updated 14 ಜೂನ್ 2022, 19:30 IST
ಅರುಣ ಶಹಾಪೂರ
ಅರುಣ ಶಹಾಪೂರ   

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಗೆ ‘ಸೈಮಿ ಫೈನಲ್‌’ ಎಂದೇ ಬಿಂಬಿತವಾಗಿದ್ದ ಬಹು ನಿರೀಕ್ಷಿತ ವಿಧಾನ ಪರಿಷತ್‌ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ಫಲಿತಾಂಶ ಜೂನ್‌ 15ರಂದು ಬಹಿರಂಗವಾಗಲಿದೆ.

ಆಡಳಿತರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ನಲ್ಲಿ ಸೋಲು–ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಬಿಜೆಪಿ ಲೆಕ್ಕೆಯಲ್ಲಿರುವ ಎರಡು ಸ್ಥಾನಗಳಲ್ಲಿ ಒಂದನ್ನಾದರೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಎಲ್ಲ ಪ್ರಯತ್ನ ನಡೆಸಿದೆ.

ಪದವೀಧರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹನುಮಂತ ನಿರಾಣಿ ಅವರ ಗೆಲುವು ಖಚಿತ ಎಂಬ ವಿಶ್ಲೇಷಣೆ ನಡೆದಿದೆ. ಆದರೆ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಪೂರ ಅವರು ಮೂರನೇ ಬಾರಿಗೆ ಪರಿಷತ್‌ ಪ್ರವೇಶಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ತಡೆವೊಡ್ಡಿದ್ದಾರೆ ಎಂಬುದಕ್ಕಿಂತ ಹೆಚ್ಚಾಗಿ ಬಿಜೆಪಿ ಒಳಹೊಡೆತ ಪರಿಣಾಮ ಬೀರಲಿದೆ ಎಂಬ ಗುಸುಗುಸು ಮಾತು ಬಲವಾಗಿ ಕೇಳಿಬರುತ್ತಿದೆ.

ADVERTISEMENT

ಅರುಣ ಪರವಾಗಿ ಪಕ್ಷದ ಶಾಸಕರು, ಮುಖಂಡರೇ ಕಾರ್ಯನಿರ್ವಹಿಸಿಲ್ಲ ಎಂಬ ಆರೋಪ ಬಲವಾಗಿದೆ. ಶಹಪೂರ ಅವರು ಒಂದು ವೇಳೆ ಜಯಗಳಿಸಿದರೆ ಭವಿಷ್ಯದಲ್ಲಿ ತಮ್ಮ ರಾಜಕೀಯ ಏಳಿಗೆಗೆ ತೊಡಕಾಗಲಿದೆ ಎಂಬ ಲೆಕ್ಕಾಚಾರ ‘ಸ್ಥಳೀಯ’ ಶಾಸಕರದ್ದಾಗಿದೆ ಎನ್ನಲಾಗಿದೆ.

ಶಹಪೂರ ಅವರ ಬೆನ್ನಿಗೆ ಸಂಘ ಪರಿವಾರ ಇರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮರಳಿ ಬಿಜೆಪಿ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಚಿವರಾಗುವ ಸಾಧ್ಯತೆ ಇದೆ. ಆಗ ವಿಜಯಪುರ ಜಿಲ್ಲೆಯ ಬಿಜೆಪಿಯ ಇನ್ನುಳಿದ ಶಾಸಕರಿಗೆ ಸಚಿವರಾಗುವ ಅದೃಷ್ಟ ಕೈತಪ್ಪಬಹುದು ಎಂಬ ದೂರಾಲೋಚನೆ ಹಿನ್ನೆಲೆಯಲ್ಲಿ ಶಹಪೂರ ಅವರ ಮೂರನೇ ಬಾರಿಯ ಗೆಲುವನ್ನು ತಡೆಯುವ ಪ್ರಯತ್ನ ಸ್ವತಃ ಬಿಜೆಪಿ ಶಾಸಕರೇ ನಡೆಸಿದ್ದಾರೆ ಎಂಬ ಮಾತು ಕೇಳಿಬಂದಿದೆ.ಈ ಕಾರಣಕ್ಕೆ ಪ್ರಚಾರದಿಂದ ದೂರ ಉಳಿದಿದ್ದರು ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ‘ಹುಕ್ಕೇರಿ’ ಜಾತ್ರೆ:

ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಅವರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಬಳಿಕ ಮೊದಲ ಚುನಾವಣೆ. ಅದರಲ್ಲೂ ಅವರ ಸ್ವಂತ ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಒಂದು ಸ್ಥಾನವನ್ನಾದರೂ ಗೆಲ್ಲಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ ಶ್ರಮವಹಿಸಿದ್ದು, ಶಾಸಕರು ಕೈಜೋಡಿಸಿದ್ದಾರೆ. ಆದರೆ, ಪಕ್ಷದ ಮುಖಂಡರಿಂದ ಅಷ್ಟೊಂದು ಬೆಂಬಲ ವ್ಯಕ್ತವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಚುನಾವಣೆಯಲ್ಲಿ ಹುಕ್ಕೇರಿ ಅವರು ಮತದಾರರಿಗೆ ಹಣ ಹಂಚಿದ್ದಾರೆ ಎಂಬ ಆರೋಪ ಬಲವಾಗಿದೆ. ಆದರೆ, ಹುಕ್ಕೇರಿ ಅವರು ಮತದಾರರಿಗೆ ಹಂಚಲು ನೀಡಿದ್ದ ಹಣ ಪಕ್ಷದ ಮುಖಂಡರ ಬಳಿಯೇ ಉಳಿದಿದೆ, ಮತದಾರರಿಗೆ ತಲುಪಿಲ್ಲ. ಪಕ್ಷದ ಮುಂಚೂಣಿ ಮುಖಂಡರು, ಕಾರ್ಯಕರ್ತರು ಹುಕ್ಕೇರಿ ಅವರ ಹಣದಲ್ಲಿ ಚುನಾವಣಾ ’ಜಾತ್ರೆ’ ನಡೆಸಿದ್ದಾರೆಎಂಬ ದೂರು ವ್ಯಕ್ತವಾಗಿದೆ.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರವನ್ನು ವಾಯವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಒಳಗೊಂಡಿದ್ದರೂ ಸಹಇಂದು(ಜೂನ್‌ 15) ಬಹಿರಂಗವಾಗಲಿರುವ ಫಲಿತಾಂಶವು ಜಿಲ್ಲೆಯ ಕಾಂಗ್ರೆಸ್‌–ಬಿಜೆಪಿ ಒಳಗಿನ ಬಣರಾಜಕೀಯ ಲೆಕ್ಕಾಚಾರವನ್ನು ಅನಾವರಣಗೊಳಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.