ADVERTISEMENT

ವಿದ್ಯುತ್‌ ಉತ್ಪಾದನೆ 113 ಗಿಗಾವಾಟ್‌ಗೆ ಹೆಚ್ಚಿಸಲು ಯೋಜನೆ: ಬಿದ್ಯಾನಂದ್ ಝಾ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 0:04 IST
Last Updated 19 ಜುಲೈ 2025, 0:04 IST
ಬಿದ್ಯಾನಂದ್ ಝಾ
ಬಿದ್ಯಾನಂದ್ ಝಾ   

ವಿಜಯಪುರ: ‘ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ) ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು 2032ರ ವೇಳೆಗೆ ಪ್ರಸ್ತುತ 82 ಗಿಗಾವಾಟ್‌ಗಳಿಂದ 113 ಗಿಗಾವಾಟ್‌ಗಳಿಗೆ ಹೆಚ್ಚಿಸಲು ಯೋಜಿಸಿದೆ’ ಎಂದು ಕೂಡಗಿಯ ಎನ್‌ಟಿಪಿಸಿ ಕಾರ್ಯನಿರ್ವಾಹಕ ನಿರ್ದೇಶಕ ಬಿದ್ಯಾನಂದ್ ಝಾ ಹೇಳಿದರು.

‘ಒಟ್ಟು ಉತ್ಪಾದನೆಯಲ್ಲಿ 60 ಗಿಗಾವಾಟ್ ಸೌರಶಕ್ತಿ ಮತ್ತು ಪವನಶಕ್ತಿ ಸೇರಿ ನವೀಕರಿಸಬಹುದಾದ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೆ ಆದ್ಯತೆ ನೀಡಲಾಗುವುದು’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಕೂಡಗಿ ಎನ್‌ಟಿಪಿಸಿಯಲ್ಲಿ 2,400 ಮೆಗಾವಾಟ್ ವಿದ್ಯುತ್‌ ಉತ್ಪಾದನೆ ಮಾಡುವ ಮೂಲಕ ದೇಶದ ಅತಿದೊಡ್ಡ ಏಕ ಹಂತದ ವಿದ್ಯುತ್ ಕೇಂದ್ರವಾಗಿದೆ. ಫಲಾನುಭವಿ ರಾಜ್ಯಗಳಾದ ಕರ್ನಾಟಕಕ್ಕೆ ಶೇ 50, ಆಂಧ್ರ ಪ್ರದೇಶಕ್ಕೆ ಶೇ 8.37, ತಮಿಳುನಾಡಿಗೆ ಶೇ 12.5, ತೆಲಂಗಾಣಕ್ಕೆ ಶೇ 9.75, ಕೇರಳ ಶೇ 4.37 ಮತ್ತು ಪಂಜಾಬ್‌ಗೆ ಶೇ 15ರಷ್ಟು ಸೇರಿ 12 ರಾಜ್ಯಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ’ ಎಂದರು.

ADVERTISEMENT

‘ಕೂಡಗಿ ಸ್ಥಾವರವು ನವೀಕರಿಸಬಹುದಾದ ಶಕ್ತಿಯ ಮೂಲಕ 3.37 ಮೆಗಾವಾಟ್ ವಿದ್ಯುತ್‌ನ್ನು ಉತ್ಪಾದಿಸುತ್ತಿದೆ. ಇದರಲ್ಲಿ 2018ರಲ್ಲಿ ಕಾರ್ಯಾರಂಭ ಮಾಡಿದ ಭಾರತದ ಮೊದಲ ಹೈಬ್ರಿಡ್ ಸ್ಥಾವರದಿಂದ 2 ಮೆಗಾವಾಟ್ ಪವನ ವಿದ್ಯುತ್‌ ಮತ್ತು 1.37 ಮೆಗಾವಾಟ್ ಸೌರಶಕ್ತಿ ವಿದ್ಯುತ್‌ ಕೂಡ ಸೇರಿದೆ’ ಎಂದರು.

‘ಪರಿಸರ ಮಾಲಿನ್ಯವಾಗದಂತೆ ಎನ್‌ಟಿಪಿಸಿ ಸ್ಥಾವರವು ಸುಧಾರಿತ ತಂತ್ರಜ್ಞಾನಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ 1,580 ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ 9.5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನಡೆಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.