ADVERTISEMENT

ಬಸವನಬಾಗೇವಾಡಿ | ಈರುಳ್ಳಿ ಬೆಲೆ ಕುಸಿತ: ರೈತರ ಪ್ರತಿಭಟನೆ

ಎಪಿಎಂಸಿಯಲ್ಲಿ ಹರಾಜು ಬಂದ್ ಮಾಡಿ ರಸ್ತೆಗೆ ಈರುಳ್ಳಿ ಸುರಿದು ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:57 IST
Last Updated 28 ನವೆಂಬರ್ 2025, 5:57 IST
ಉಳ್ಳಾಗಡ್ಡಿ ಧಾರಣೆ ಕುಸಿತದಿಂದ‌ ಆಕ್ರೋಶಗೊಂಡ ನೂರಾರು ರೈತರು ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಸವಾಲ್‌ ಬಂದ್ ಮಾಡಿಸಿ ರಸ್ತೆಗೆ ಉಳ್ಳಾಗಡ್ಡಿ ಸುರಿದು ಪ್ರತಿಭಟಿಸಿದರು.
ಉಳ್ಳಾಗಡ್ಡಿ ಧಾರಣೆ ಕುಸಿತದಿಂದ‌ ಆಕ್ರೋಶಗೊಂಡ ನೂರಾರು ರೈತರು ಬಸವನಬಾಗೇವಾಡಿ ಎಪಿಎಂಸಿಯಲ್ಲಿ ಸವಾಲ್‌ ಬಂದ್ ಮಾಡಿಸಿ ರಸ್ತೆಗೆ ಉಳ್ಳಾಗಡ್ಡಿ ಸುರಿದು ಪ್ರತಿಭಟಿಸಿದರು.   

ಬಸವನಬಾಗೇವಾಡಿ: ಬೆಂಗಳೂರಿನಲ್ಲಿ ಎಪಿಎಂಸಿಯಲ್ಲಿ ಕನಿಷ್ಠ ₹1000 ದರ ನೀಡುವ ಉಳ್ಳಾಗಡ್ಡಿ ಮಾಲಿಗೆ ಎಪಿಎಂಸಿ ಸಚಿವರು ಪ್ರತಿನಿಧಿಸುವ ಬಸವನಬಾಗೇವಾಡಿ ಪಟ್ಟಣದ ಎಪಿಎಂಸಿಯಲ್ಲಿ ಮಧ್ಯವರ್ತಿಗಳು, ವರ್ತಕರು ₹200, ₹400 ದರಕ್ಕೆ ಕೇಳುತ್ತಿದ್ದು, ಉಳ್ಳಾಗಡ್ಡಿ ಚೀಲ ತುಂಬುವ ಕೂಲಿಯೂ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡ ನೂರಾರು ರೈತರು ಗುರುವಾರ ಎಪಿಎಂಸಿಯಲ್ಲಿ ಹರಾಜು ಪ್ರಕ್ರಿಯೆ ಬಂದ್ ಮಾಡಿ ಆವರಣದ ರಸ್ತೆಯಲ್ಲಿ ಈರುಳ್ಳಿ ಸುರಿದು ದಿಢೀರ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾನಿರತ ರೈತರಾದ ಬಸಪ್ಪ ಅವಟಿ, ಮಲಕಪ್ಪ ಸಾಸನೂರ ಹಾಗೂ ಬಸವರಾಜ ಕಾಡದ ಮಾತನಾಡಿ, ಬೆಂಗಳೂರಿನಲ್ಲಿ ಸಾವಿರ ರೂಪಾಯಿ ಸಿಗುವ ಉಳ್ಳಾಗಡ್ಡಿ ಮಾಲಿಗೆ ಬಸವನಬಾಗೇವಾಡಿ ಮಾರುಕಟ್ಟೆಯಲ್ಲಿ ಕೇವಲ ₹200, ₹400ಕ್ಕೆ ಕೇಳುತ್ತಿದ್ದಾರೆ. ಎರಡು ಚೀಲ ಉಳ್ಳಾಗಡ್ಡಿ ಸೋಸಿ ತುಂಬಲು ₹500 ಕೂಲಿ ಇದೆ. ಚೀಲಕ್ಕೆ ₹8 ದರವಿದ್ದರೆ ಒಂದು ಚೀಲ‌ ಉಳ್ಳಾಗಡ್ಡಿ ಎಪಿಎಂಸಿಗೆ ತರಲು ₹50 ಬಾಡಿಗೆ ಇದೆ. ಈಗಾಗಲೇ ತೀವ್ರ ಮಳೆಯಿಂದ ಉಳ್ಳಾಗಡ್ಡಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದೇವೆ. ಅಳಿದುಳಿದ ಬೆಳೆಗಾದರೂ ಉತ್ತಮ ಬೆಲೆ ಸಿಗುತ್ತದೆ ಎಂಬ ಆಶಾಭಾವದಲ್ಲಿ ಇಲ್ಲಿನ ಎಪಿಎಂಸಿಗೆ ಬಂದರೆ ಒಂದೇ ಗುಣಮಟ್ಟದ ಮಾಲಿಗೆ ಇಬ್ಬಗೆಯ ದರ ನೀಡಿ ದಲ್ಲಾಳ್ಳಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಕ್ವಿಂಟಾಲ್‌ಗೆ ₹1000 ದರ ಸಿಕ್ಕರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆ. ಇಲ್ಲದಿದ್ದರೆ ಈರುಳ್ಳಿ ವರ್ತಕರ ಮಳಿಗೆಗಳನ್ನು ಬಂದ್ ಮಾಡಿ ಉಗ್ರವಾಗಿ ಪ್ರತಿಭಟಿಸುತ್ತೇವೆ ಎಂದು ಧರಣಿನಿರತ ರೈತರು ಆಕ್ರೋಶಗೊಂಡು ಎಚ್ಚರಿಕೆ ನೀಡಿದರು.

ADVERTISEMENT

ಇದೇ ವೇಳೆ ಒಂದೇ ಗುಣಮಟ್ಟದ ಉಳ್ಳಾಗಡ್ಡಿ ಮಾಲಿಗೆ ಏಕ ದರ ನೀಡುವಲ್ಲಿ ಅನ್ಯಾಯವಾಗುತ್ತಿದ್ದರೂ ನೀವು ಮೌನವಾಗಿರುವುದು ಯಾಕೆ?, ನೀವೇನು ಮಾಡುತ್ತಿದ್ದೀರಿ ? ಎಂದು ಎಪಿಎಂಸಿ ಅಧಿಕಾರಿ ಎಸ್.ಡಿ.ಮನಗೂಳಿ ಅವರನ್ನು ರೈತರು ತಹಶಿಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಸಮ್ಮುಖದಲ್ಲೇ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆಯಿತು.

ಈರುಳ್ಳಿ ರೈತರ ಪ್ರತಿಭಟನೆ ಮಾಹಿತಿ ಅರಿತ ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ್ ಬಿಜಾಪೂರ ತಕ್ಷಣ ಬಸವನಬಾಗೇವಾಡಿ ಎಪಿಎಂಸಿ ಕಚೇರಿಗೆ ಆಗಮಿಸಿ ತಹಶೀಲ್ದಾರ ವೈ.ಎಸ್. ಸೋಮನಕಟ್ಟಿ ಅವರ ಸಮ್ಮುಖದಲ್ಲಿ ಗಂಟೆಗೂ ಹೆಚ್ಚು ಕಾಲ ಈರುಳ್ಳಿ ವರ್ತಕರು, ಮಧ್ಯವರ್ತಿಗಳೊಂದಿಗೆ ಸಭೆ ನಡೆಸಿದರು.

ಸಭೆ ನಂತರ ತಹಶಿಲ್ದಾರ್‌ ವೈ.ಎಸ್.ಸೋಮನಕಟ್ಟಿ ಹಾಗೂ ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪೂರ ಪ್ರತಿಭಟನಾನಿರತ ರೈತರ ಸ್ಥಳಕ್ಕೆ ಬಂದು ಎಪಿಎಂಸಿಯಲ್ಲಿ ಈರುಳ್ಳಿ ರೈತರು ಎದುರಿಸಿದ ಸಮಸ್ಯೆಗಳನ್ನು ಆಲಿಸಿ ವಿವಿಧ ಮಾರುಕಟ್ಟೆಗಳಲ್ಲಿರುವ ಪ್ರಸ್ತುತ ಉಳ್ಳಾಗಡ್ಡಿ ದರದ ಬಗ್ಗೆ ಮಾಹಿತಿ ನೀಡಿದರು, ಉತ್ತಮ ಮಾಲಿಗೆ ಉತ್ತಮ ದರ ನೀಡದಿದ್ದರೆ ವರ್ತಕರ ಮೇಲೆ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ರೈತರ ಎದುರಲ್ಲೇ ಮುಕ್ತವಾಗಿ ಈರುಳ್ಳಿ ಲಿಲಾವು ಮಾಡಿಸುವುದಾಗಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾದರು. ರೈತರ ಸಮ್ಮುಖದಲ್ಲೇ ಈರುಳ್ಳಿ ಲಿಲಾವು ಮಾಡಿಸಿದ ಬಳಿಕ ಲೀಲಾವಿನಲ್ಲಿ ಉಳ್ಳಾಗಡ್ಡಿ ಮಾಲು ₹400-₹2200 ದರದವರೆಗೂ ಮಾರಾಟವಾದ ಪರಿಣಾಮ ರೈತರು ನಿಟ್ಟುಸಿರು ಬಿಟ್ಟು ಪ್ರತಿಭಟನೆ ಕೈಬಿಟ್ಟರು.

ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ಸೂಚನೆಯಂತೆ ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಅವರು ಪ್ರತಿಭಟನಾ ಸ್ಥಳಕ್ಕೆ ತೆರಳಿ, ರೈತರು ಹಾಗೂ ವರ್ತಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈರುಳ್ಳಿ ಖರೀದಿ ಪ್ರಕ್ರಿಯೆ ಸುಗಮವಾಗಿ ಮುಂದುವರೆದಿದೆ. ಈರುಳ್ಳಿ ಬೆಳೆಗಾರರಿಗೆ ದರ ನೀಡಿಕೆಯಲ್ಲಿ ಅನ್ಯಾಯ ಆಗದಂತೆ ಟೆಂಡರ್ ನಡೆಸಿ ಖರೀದಿ ಮಾಡುವಂತೆ ವರ್ತಕರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಗೆ ದರ ಕುಸಿಯದಂತೆ ಹಾಗೂ ರೈತರಿಗೆ ಅನ್ಯಾಯವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೃಷಿ ಮಾರುಕಟ್ಟೆ ಸಚಿವರು ಇಲಾಖೆಯ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆಂದು ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ತನ್ನಿ’

ಪ್ರತಿದಿನ ವರ್ತಕರು, ಮಧ್ಯವರ್ತಿಗಳು ಇದೇ ರೀತಿ ಒಳ್ಳೆಯ ಪದ್ದತಿ ಮುಂದುವರೆಸಿಕೊಂಡು ಹೋಗಬೇಕು. ಉತ್ತಮ ಮಾಲಿಗೆ ಉತ್ತಮ ದರ ನೀಡದಿದ್ದರೆ ಅನಿವಾರ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ. ತೀವ್ರ ಮಳೆಯಾಗಿ ರೈತರ ಬಹುತೇಕ ಉಳ್ಳಾಗಡ್ಡಿ ಮಾಲು ಹಾಳಾಗಿದೆ. ಕೆಲ ರೈತರು ಚೀಲದಲ್ಲಿ ಒಂದೆರಡು ಪದರು ಕೊಳೆತ ಕೆಲ ಈರುಳ್ಳಿ ಮಾಲು ಸಹ ಸೇರಿಸಿ ಮಾರುಕಟ್ಟೆಗೆ ತಂದ ಕಾರಣ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ರೈತರು ಸಹ ಈರುಳ್ಳಿ ಮಾಲನ್ನು ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ತಂದರೆ ₹500ಕ್ಕೆ ಮಾರಾಟವಾಗುವ ಮಾಲು ₹1000 ದರಕ್ಕೆ ಮಾರಾಟವಾಗುತ್ತದೆ

ಅಲ್ಲಾಭಕ್ಷ ಬಿಜಾಪೂರ, ವಿಜಯಪುರ ಎಪಿಎಂಸಿ ಕಾರ್ಯದರ್ಶಿ

ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪೂರ ಹಾಗೂ ತಹಶಿಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಬಸವನಬಾಗೇವಾಡಿಯಲ್ಲಿ ಧರಣಿನಿರತ ಉಳ್ಳಾಗಡ್ಡಿ ರೈತರ ಮನವೊಲಿಸಿ ಅವರ ಸಮ್ಮುಖದಲ್ಲಿ ಉಳ್ಳಾಗಡ್ಡಿ ಲಿಲಾವು ಮಾಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.