ADVERTISEMENT

ವಿಜಯಪುರ | ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಆನ್‌ಲೈನ್‌ ಪ್ರತಿಭಟನೆ

ಕೇಂದ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 13:01 IST
Last Updated 24 ಆಗಸ್ಟ್ 2020, 13:01 IST
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಸೋಮವಾರ ವಿಜಯಪುರದಲ್ಲಿ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು 
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ಸೋಮವಾರ ವಿಜಯಪುರದಲ್ಲಿ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು    

ವಿಜಯಪುರ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ನೇತೃತ್ವದಲ್ಲಿ ಸೋಮವಾರ ಜಿಲ್ಲೆಯಲ್ಲಿ ಆನ್‌ಲೈನ್‌ ಪ್ರತಿಭಟನೆ ನಡೆಸಲಾಯಿತು.

ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಾಸ್ಟೇಲ್ ಸಿಬ್ಬಂದಿ ಆನ್‌ಲೈನ್‌ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಜನವಿರೋಧಿಯಾಗಿದ್ದು, ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು, ದೇಶವು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯ ದುರುಪಯೋಗ ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದ ಮೇಲೆ ಹೇರಲು ಹೊರಟಿದೆ ಎಂದು ಆರೋಪಿಸಿದರು.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಇಡೀ ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿ, ಸರಕು ಮಾಡುತ್ತದೆ. ಸಾರ್ವಜನಿಕ ಶಿಕ್ಷಣ, ತರಬೇತಿ, ಸಂಶೋಧನೆ ಸಂಸ್ಥೆಗಳನ್ನು ಲಾಭ ಮಾಡಿಕೊಳ್ಳುವ ಕಾರ್ಪೊರೇಟ್ ಮನೆತನಗಳಿಗೆ ಒಪ್ಪಿಸಲಾಗುತ್ತದೆ ಎಂದು ದೂರಿದರು.

ನವೋದಯದ ಹರಿಕಾರರು, ಸ್ವಾತಂತ್ರ ಹೋರಾಟಗಾರರು ಎತ್ತಿಹಿಡಿದ ಜನತಾಂತ್ರಿಕ, ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ತತ್ವಗಳನ್ನು ಗಾಳಿಗೆ ತೂರಿ ಶಿಕ್ಷಣವನ್ನು ಖಾಸಗಿಕರಣ, ವ್ಯಾಪಾರಿಕರಣ ಹಾಗೂ ಕೋಮುವಾದಿಕರಣಗೊಳಿಸುವ ಪಿತೂರಿ ನಡೆಸಿದೆ ಎಂದು ಆರೋಪಿಸಿದರು.

ಈ ನೀತಿಯು ಬಡ, ದುಡಿಯುವ ಜನರ ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದಷ್ಟು ದುಬಾರಿಗೊಳಿಸುವ, ಕೇವಲ ಕೈಗಾರಿಕೆ, ಕಚೇರಿಗಳಲ್ಲಿ ದುಡಿಯಲು ಬೇಕಾಗುವಷ್ಟು ವೃತ್ತಿ ಶಿಕ್ಷಣ ನೀಡುವ, ಫಿಟ್ಟರ್, ಹೆಲ್ಪರ್ ಗಳಂತಗಹ ಚಾಕರಿ ಮಾಡುವ ವಿದ್ಯೆ ಮಾತ್ರ ನೀಡಲು ಉದ್ದೇಶಿಸಿದೆ ಎಂದು ದೂರಿದರು.

ಹಳೆಯ ಮೌಢ್ಯ ಬಿತ್ತುವ, ಕೋಮುವಾದಿ ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಿ, ಕುರುಡು ರಾಷ್ಟ್ರಭಕ್ತಿ ಮೂಡಿಸಿ, ಯಂತ್ರ ಮಾನವರನ್ನಾಗಿ ಮಾಡುವ ಹುನ್ನಾರ ಇದರಲ್ಲಿದೆ ಎಂದು ಆರೋಪಿಸಿದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್. ಟಿ, ಕಾರ್ಯದರ್ಶಿ ಸುನಿಲ ಸಿದ್ರಾಮಶೆಟ್ಟಿ, ಸದಸ್ಯರಾದ ಮಹಾದೇವಿ ಧರ್ಮಶೆಟ್ಟಿ, ಕಾಸಿಬಾಯಿ ಜನಗೊಂಡ, ಲಕ್ಷ್ಮೀ ಲಕ್ಷಟ್ಟಿ, ನಿಂಗಮ್ಮ ಮಠ, ಭಾರತಿ ದೇವಕತೆ, ಅಂಬಿಕಾ ಒಳಸಂಗ, ಕಾಸಿಬಾಯಿ ಜಿ. ಟಿ.ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.