ಬಸವನಬಾಗೇವಾಡಿ : ಪಟ್ಟಣದ ವಾರ್ಡ್ ಗಳಲ್ಲಿ ಸಂಚರಿಸಿದರೆ ಬಹುತೇಕ ಓಣಿಗಳು, ಬಡಾವಣೆಗಳಲ್ಲಿ ತೆರೆದ ಚರಂಡಿಗಳ ದರ್ಶನವಾಗುತ್ತದೆ. ಇದರಿಂದ ಪಟ್ಟಣದ ಕೆಲ ಪ್ರದೇಶಗಳಲ್ಲಿ ದುರ್ನಾತ, ಹಂದಿಗಳ ಕಾಟ ಹಾಗೂ ಸೊಳ್ಳೆಗಳು ಹೆಚ್ಚಾಗಿ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ.
ಸ್ಥಳೀಯ ಪುರಸಭೆ ವ್ಯಾಪ್ತಿಯ 23 ವಾರ್ಡ್ ಗಳ ಪೈಕಿ ಪಟ್ಟಣ ಪ್ರದೇಶದಲ್ಲಿರುವ ಬಹುತೇಕ ಓಣಿಗಳು, ಬಡಾವಣೆಗಳಲ್ಲಿ ರಸ್ತೆಯ ಎರಡು ಬದಿಯ ಕೊಳಚೆ ನೀರಿನ ಚರಂಡಿಗಳು ಮುಚ್ಚದೇ ತೆರೆದುಕೊಂಡಿವೆ. ಇದರಿಂದ ಅಲ್ಲಲ್ಲಿ ಹಂದಿಗಳ ವಾಸಸ್ಥಾನಗಳಾಗಿವೆ, ಹಂದಿಗಳ ಕಾಟ ಹೆಚ್ಚಾಗಿ, ಮನೆಗಳಿಗೆ ನುಗ್ಗುವ, ಮನೆ ಮುಂದೆ ಆಟವಾಡುವ ಮಕ್ಕಳಿಗೆ ತೀವ್ರ ತೊಂದರೆಗಳಾಗುತ್ತಿವೆ. ದುರ್ನಾತ ಹಬ್ಬಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುವ ಆಂತಕ ಆವರಿಸಿದೆ.
ಪಟ್ಟಣದ ಇಂಗಳೇಶ್ವರ ಮುಖ್ಯರಸ್ತೆಯ ಎರಡು ಬದಿಗಳಲ್ಲಿ, ತೆಲಗಿ ಮುಖ್ಯ ರಸ್ತೆಯಲ್ಲಿರುವ ಪೊಲೀಸ್ ಠಾಣೆ ಹಾಗೂ ಬಿಎಸ್ಎನ್ಎಲ್ ಕಚೇರಿಗಳ ಮಧ್ಯಭಾಗದ ಶಾಸಕರ ಮಾದರಿ ಪ್ರಾಥಮಿಕ ಶಾಲೆಗೆ ಹೋಗುವ ಮಾರ್ಗ, ಕೃಷಿ ಇಲಾಖೆ ಕಚೇರಿಗೆ ಹೋಗುವ ಮಾರ್ಗ, ಡಿಸಿಸಿ ಬ್ಯಾಂಕ್ ಪಕ್ಕದ ರಸ್ತೆ ಹೀಗೆ ಕೆಲವು ಮುಖ್ಯ ರಸ್ತೆಗಳ ಬದಿಯ ಕೊಳಚೆ ನೀರಿನ ಚರಂಡಿಗಳನ್ನು ಮುಚ್ಚಿಲ್ಲ. ಇನ್ನು ಜನವಸತಿ ಪ್ರದೇಶಗಳಾದ ಪಟ್ಟಣದ ಗಣಪತಿ ಚೌಕ್ ನ ಸುತ್ತಮುತ್ತಲಿನ ಓಣಿಗಳು, ತೆಲಗಿ ರಸ್ತೆಯ ಬಸವನಗರ, ಎಲ್ಐಸಿ ಕಚೇರಿ ಹಿಂಭಾಗದ ಗಾಂಧಿನಗರ, ವಿಜಯಪುರ ರಸ್ತೆಯ ಓಂ ನಗರ, ಅಂಬಿಗರ ಚೌಡಯ್ಯ ನಗರ ಹೀಗೆ ಪಟ್ಟಣದ ಬಹುತೇಕ ವಾರ್ಡ್ ಗಳಲ್ಲಿನ ಚರಂಡಿಗಳು ತೆರೆದುಕೊಂಡಿದ್ದು, ಅಪಾಯಕ್ಕೆ ಆಹ್ವಾನಿಸುವಂತಿವೆ.
ದುರಸ್ತಿಗಾಗಿ ಚರಂಡಿಗಳನ್ನು ತೆರೆದಿದ್ದರೂ, ಜನರ ಆರೋಗ್ಯ ಹಾಗೂ ಸಾರ್ವಜನಿಕರು, ಪಾದಚಾರಿಗಳು, ವಾಹನ ಸವಾರರ ಸುರಕ್ಷತೆ ಹಿತದೃಷ್ಟಿಯಿಂದ ಅವುಗಳನ್ನು ಸ್ಲ್ಯಾಬ್ ಗಳಿಂದ ಮುಚ್ಚಿ ನಿರ್ವಹಿಸುವ ಕೆಲಸವಾಗಬೇಕು. ಕೋಟ್ಯಂತರ ಅನುದಾನ ತಂದು ರಸ್ತೆ ಅಭಿವೃದ್ಧಿಪಡಿಸುವಾಗ ರಸ್ತೆ ಬದಿಯ ಚರಂಡಿಗಳನ್ನು ಮುಚ್ಚಿ ಜನರಿಗೆ ಅನುಕೂಲ ಮಾಡಿಕೊಡುವ ಕೆಲಸವನ್ನು ಪುರಸಭೆ ಚುನಾಯಿತ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕೆಂಬುದು ಸಾರ್ವಜನಿಕರ ಒಕ್ಕೊರಲಿನ ಆಗ್ರಹವಾಗಿದೆ.
ಪಟ್ಟಣದಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿದ್ದರಿಂದ ಎಲ್ಲೆಂದರಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿ ಪಟ್ಟಣ ನಿವಾಸಿಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಪುರಸಭೆಯ ಚುನಾಯಿತ ಸದಸ್ಯರು ಅಧಿಕಾರಿಗಳು ಹಂದಿಗಳ ಹಾವಳಿ ನಿಯಂತ್ರಿಸಲು ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಿ ಮುಚ್ಚಲು ಕ್ರಮ ಕೈಗೊಂಡು ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು.- ಶಂಕರಗೌಡ ಬಿರಾದಾರ ಸಂಸ್ಥಾಪಕ ಅಧ್ಯಕ್ಷ ರಾಷ್ಟ್ರೀಯ ಬಸವಸೈನ್ಯ ಬಸವನಬಾಗೇವಾಡಿ
ಬಸವನಬಾಗೇವಾಡಿ ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿರುವುದು ಅದರಿಂದ ಹಂದಿಗಳ ಕಾಟ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ವಾರ್ಡ್ ಗಳಲ್ಲಿ ಈಗಾಗಲೇ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ. ಅನುದಾನ ಬಂದ ಬಳಿಕ ಎಲ್ಲಾ ವಾರ್ಡ್ ಗಳಲ್ಲಿನ ತೆರೆದ ಚರಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ.-ಜಗದೇವಿ ಮುತ್ತಪ್ಪ ಗುಂಡಳ್ಳಿ ಅಧ್ಯಕ್ಷೆ ಬಸವನಬಾಗೇವಾಡಿ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.