ADVERTISEMENT

ಸಂತೆ ಜಾಗದಲ್ಲಿ ಪಾಲಿಟೆಕ್ನಿಕ್; ವಿರೋಧ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 13:57 IST
Last Updated 23 ನವೆಂಬರ್ 2019, 13:57 IST

ಕೊಲ್ಹಾರ: ‘ಪಟ್ಟಣದ ಸಂತೆ ಜಾಗದಲ್ಲಿ ಶಾಸಕ ಶಿವಾನಂದ ಪಾಟೀಲ ಅವರು ನ.25 ರಂದು ಪಾಲಿಟೆಕ್ನಿಕ್ ಕಾಲೇಜು ಕಟ್ಟಡಕ್ಕಾಗಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಇದಕ್ಕೆ ನಮ್ಮೆಲ್ಲರ ವಿರೋಧವಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಪಟ್ಟಣದ ಮುಖಂಡರು ಇಲ್ಲಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯರಾದ ವಿರೂಪಾಕ್ಷಿ ಕೊಳಕಾರ, ವಿಕ್ರಮ ಬಾರಸ್ಕಳ, ಕಲ್ಲಪ್ಪ ಸೊನ್ನದ ಮತ್ತು ಪಟ್ಟಣದ ಮುಖಂಡರು, ‘ಕಾಲೇಜು ಸ್ಥಾಪಿಸಲು ವಿರೋಧವಿಲ್ಲ. ಆದರೆ, ಅದನ್ನು ಸಂತೆ ಜಾಗದಲ್ಲಿ ಸ್ಥಾಪಿಸಲು ವಿರೋಧವಿದೆ. ಭೂಮಿಪೂಜೆ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.

‘ಒಂದು ವ್ಯವಸ್ಥೆಯನ್ನು ಹಾಳು ಮಾಡಿ ಬೇರೊಂದು ಅಭಿವೃದ್ಧಿ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಪಟ್ಟಣದಲ್ಲಿರುವ ಸಂತೆ ಜಾಗದಲ್ಲೇ ಸದ್ಯ ತರಕಾರಿ ಹಾಗೂ ಕಾಳುಗಳ ಸಂತೆ, ಜಾನುವಾರುಗಳು, ಕುರಿ, ಕೋಳಿಗಳ ಸಂತೆಗಳನ್ನು ನಡೆಸಲಾಗುತ್ತಿದೆ. ಸಂತೆಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿದರೆ ಹೆಸರಿಗಷ್ಟೇ ಮಾಡಿದಂತಾಗುತ್ತದೆಯೇ ಹೊರತು ಅದರ ಉದ್ದೇಶ ಈಡೇರುವುದಿಲ್ಲ’ ಎಂದರು.

ADVERTISEMENT

‘ಕಾಲೇಜು ಸ್ಥಾಪಿಸಲು ಪಟ್ಟಣ ಪಂಚಾಯಿತಿ ಸದಸ್ಯರು, ಪಟ್ಟಣದ ಹಿರಿಯರು ಹಾಗೂ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಿತ್ತು. ಆದರೆ, ಯಾವುದೇ ಸಭೆ ಮಾಡದೇ, ಸೂಚನೆ ಇಲ್ಲದೇ ತರಾತುರಿಯಲ್ಲಿ ಭೂಮಿಪೂಜೆ ಕಾರ್ಯಕ್ರಮ ಮಾಡುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

‘ಉದ್ದೇಶಿತ ನೂತನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗಾಗಿ ಬೇರೆಡೆ ನಾಲ್ಕು ಎಕರೆ ಜಾಗ ಪಡೆಯಬೇಕು. ಇಷ್ಟಾದರೂ ಸಂತೆ ಜಾಗದಲ್ಲೇ ಕಾಲೇಜು ಸ್ಥಾಪನೆಗೆ ಮುಂದಾದರೆ ಭೂಮಿಪೂಜೆ ಕಾರ್ಯಕ್ರಮ ಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

‘ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರ ಅವಧಿಯಲ್ಲಿ ಪಟ್ಟಣದಲ್ಲಿ ಸ್ಥಾಪನೆಯಾಗಬೇಕಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಪಟ್ಟಣ ಹೊರವಲಯದಲ್ಲಿ ಸ್ಥಾಪಿಸಲಾಗಿದೆ. ಅದರಂತೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ಬೇರೆಡೆ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ವೀರಭದ್ರಪ್ಪ ಬಾಗಿ, ಡೋಂಗ್ರಿ ಕಟಬರ, ಮಲ್ಲಪ್ಪ ಬಾಟಿ, ರಾಚಣ್ಣ ಬಗಲಿ, ಸದಾಶಿವ ಗಣಿ, ನಾಗರಾಜ್ ಬೆಳ್ಳುಬ್ಬಿ, ಮಂಜು ತುಂಬರಮಟ್ಟಿ ಹಾಗೂ ಸುಭಾಷ್ ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.