
ಮುದ್ದೇಬಿಹಾಳ: ಕೇವಲ 15 ವಿದ್ಯಾರ್ಥಿಗಳಿಂದ ಆರಂಭವಾದ ನಮ್ಮ ಸಂಸ್ಥೆಯಲ್ಲಿ ಇಂದು ಐದು ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರೆ ಅದು ನಮ್ಮ ನಿಮ್ಮ ಹೆಮ್ಮೆ ಎಂದು ಆಕ್ಸ್‌ಫರ್ಡ್ ಪಾಟೀಲ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸ್‌ಫರ್ಡ್ ಪಾಟೀಲ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡ 5,8,9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಆಕ್ಸ್‌ಫರ್ಡ್ ಚಾಂಪಿಯನ್ ಅವಾರ್ಡ್ 2026ನೇ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಹೊಸಪೇಟೆ, ಲಿಂಗಸೂರು, ಶಹಾಪುರ, ಬಾಗಲಕೋಟೆಯಲ್ಲಿ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ಮಾಡಿದ್ದೇವೆ. ಅದರಲ್ಲಿ ಮುಖ್ಯವಾಗಿ ಬಾಗಲಕೋಟೆಯಲ್ಲಿ ಮಾಡಿದ ಉದ್ದೇಶ ಅಲ್ಲಿ ಒಂದು ಆಕ್ಸ್‌ಫರ್ಡ್ ಶಾಖೆಯನ್ನು ಆರಂಭ ಮಾಡಿದ್ದೇವೆ. ಇನ್ನೂ ಮುದ್ದೇಬಿಹಾಳ ಶಾಖೆಯಲ್ಲಿ ಪರೀಕ್ಷೆ ಹಮ್ಮಿಕೊಳ್ಳುವ ಉದ್ದೇಶ ಜೆಇಇಗೆ ಪ್ರಾಮುಖ್ಯತೆ ಕೊಡುವುದಾಗಿದೆ ಎಂದರು.
ನಮ್ಮ ನಾಗರಬೆಟ್ಟದ ಶಾಖೆಯು ಡಾಕ್ಟರ್‌ಗಳನ್ನು ಉತ್ಪಾದನೆ ಮಾಡುವ ಕಾರ್ಖಾನೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮಹತ್ವದ ಪರೀಕ್ಷೆ ಬರೆಯಲು ಹೈಸ್ಕೂಲ್ ಹಂತದಿಂದ ಉತ್ತಮ ಶಿಕ್ಷಣ ಕೊಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇಲ್ಲಿ ಶಾಖೆಯನ್ನು ಆರಂಭಿಸಿದ್ದೇವೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಸಂಸ್ಥೆಯ ಇಸ್ಮಾಯಿಲ್ ಮನಿಯಾರ ಮಾತನಾಡಿ, ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಏಕೈಕ ಸಂಸ್ಥೆ ಇದ್ದರೆ ಅದು ಆಕ್ಸ್‌ಫರ್ಡ್ ಪಾಟೀಲ ಶಿಕ್ಷಣ ಸಂಸ್ಥೆ. ಜೆಇಇ, ನೀಟ್, ಎಸ್.ಎಸ್.ಎಲ್.ಸಿ ಫಲಿತಾಂಶ ರಾಜ್ಯದ ಟಾಪ್ ಲಿಸ್ಟ್‌ನಲ್ಲಿ ಬಿಟ್ಟು ಕೊಟ್ಟಿರುವ ಉದಾಹರಣೆ ಇಲ್ಲ ಎಂದರು.
ನಾಗಲಿಂಗಯ್ಯ ಮಠ ಮಾತನಾಡಿ, ಮಕ್ಕಳಿಗೆ ಈ ವಿದ್ಯಾ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.
912 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಪ್ರತಿ ತರಗತಿಯಿಂದ ತಲಾ ಐದು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಪ್ರಶಸ್ತಿಯೊಂದಿಗೆ ಗೌರವಿಸಿದರು.
ಮುದ್ದೇಬಿಹಾಳ ಶಾಖೆಯ ಆಡಳಿತಾಧಿಕಾರಿ ದರ್ಶನಗೌಡ ಪಾಟೀಲ, ತಿಳಗುಳ ಶಿಕ್ಷಕರು, ನಾಗೇಶ ಬಿರಾಜದಾರ, ಸಿದ್ದನಗೌಡ ಕಾಶಿನಕುಂಟಿ, ಪರಶುರಾಮ ಹೂಗಾರ, ಎಸ್.ಎನ್.ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.