ADVERTISEMENT

ಸರ್ವ ಸದಸ್ಯರನ್ನು ತೃಪ್ತಿ ಪಡಿಸಿದ ಬಜೆಟ್‌..!

ವಿಜಯಪುರ ಮಹಾನಗರ ಪಾಲಿಕೆ; 2019–20ನೇ ಸಾಲಿಗೆ ₹ 143 ಕೋಟಿ ಮೊತ್ತದ ಬಜೆಟ್ ಮಂಡನೆ

ಡಿ.ಬಿ, ನಾಗರಾಜ
Published 11 ಫೆಬ್ರುವರಿ 2019, 20:00 IST
Last Updated 11 ಫೆಬ್ರುವರಿ 2019, 20:00 IST
ಬಜೆಟ್‌ ಅಧಿವೇಶನ ಮೊಟಕುಗೊಳಿಸಿ ಹೊರಟ ಉಪ ಮೇಯರ್ ಗೋಪಾಲ ಘಟಕಾಂಬಳೆ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರುಪ್ರಜಾವಾಣಿ ಚಿತ್ರ
ಬಜೆಟ್‌ ಅಧಿವೇಶನ ಮೊಟಕುಗೊಳಿಸಿ ಹೊರಟ ಉಪ ಮೇಯರ್ ಗೋಪಾಲ ಘಟಕಾಂಬಳೆ ಅವರನ್ನು ತರಾಟೆಗೆ ತೆಗೆದುಕೊಂಡ ಸದಸ್ಯರುಪ್ರಜಾವಾಣಿ ಚಿತ್ರ   

ವಿಜಯಪುರ:ಆರು ಶಾಪಿಂಗ್ ಕಾಂಪ್ಲೆಕ್ಸ್‌ಗಳ ನಿರ್ಮಾಣ, ರಾಜಕಾಲುವೆಗಳು, ಕೋಟೆ ಗೋಡೆ ಸುತ್ತಲಿನ ಕಂದಕ, ಮಳೆ ನೀರಿನ ಕಾಲುವೆಗಳ ಅಭಿವೃದ್ಧಿ, ಐತಿಹಾಸಿಕ ಬಾವಡಿಗಳ ನಿರ್ವಹಣೆ...

ಐತಿಹಾಸಿಕ ನಗರಿಗೆ ಭೇಟಿ ನೀಡುವ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ಟಾಂಗಾ ಸಾರಿಗೆ ಅಭಿವೃದ್ಧಿಗಾಗಿ ಒತ್ತು. ನಗರದ ಹಳೆಯ ಮಾರುಕಟ್ಟೆಗಳ ನಿರ್ವಹಣೆಗೆ ಅನುದಾನ, ಕೊಳೆಗೇರಿಗಳ ವಿದ್ಯುತ್‌ ಕಂಬಗಳಲ್ಲಿನ ಹಳೆಯ ತಂತಿ ಬದಲಿಸಿ, ಹೊಸದಾಗಿ ಕೇಬಲ್‌ ಅಳವಡಿಸುವ ಮಹತ್ವದ ನಿರ್ಧಾರ...

ಇದು ವಿಜಯಪುರದ ಹೊರ ವಲಯದಲ್ಲಿನ ಐತಿಹಾಸಿಕ ಭೂತನಾಳ ಕೆರೆಯ ಆವರಣದಲ್ಲಿ ಸೋಮವಾರ ನಡೆದ ಪಾಲಿಕೆಯ ಬಜೆಟ್ ಅಧಿವೇಶನದಲ್ಲಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್‌ ಹೊರ್ತಿ ಮಂಡಿಸಿದ 2019–20ನೇ ಸಾಲಿನ ಆಯವ್ಯಯದ ಪ್ರಮುಖ ಸಾರಾಂಶ.

ADVERTISEMENT

ಗ್ರಂಥಾಲಯ ಅಭಿವೃದ್ಧಿ, ಸಸಿ ನೆಟ್ಟು ಪೋಷಿಸುವಿಕೆ, ಸಂತೆ ಕಟ್ಟೆಯ ನಿರ್ಮಾಣ, ಕಾಯಿಪಲ್ಲೆ ಬಜಾರ್‌ಗಳಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ, ಮಟನ್‌, ಚಿಕನ್‌ ಮಾರುಕಟ್ಟೆ ಅಭಿವೃದ್ಧಿ...

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಬಳಿ ₹ 25 ಲಕ್ಷ ವೆಚ್ಚದಲ್ಲಿ ಮಹಾರಾಣಾ ಪ್ರತಾಪ್‌ ಸಿಂಹ ವೃತ್ತ, ಸಿಂದಗಿ ನಾಕಾದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಭುವನೇಶ್ವರಿ ವೃತ್ತ, ವಾರ್ಡ್‌ ನಂಬರ್‌ 21ರಲ್ಲಿ ₹ 25 ಲಕ್ಷ ವೆಚ್ಚದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ವೃತ್ತ ಹಾಗೂ ಬಬಲೇಶ್ವರ ನಾಕಾ ಬಳಿ ₹ 20 ಲಕ್ಷ ವೆಚ್ಚದಲ್ಲಿ ಆದಿಲ್‌ಶಾಹಿ ವೃತ್ತದ ಅಭಿವೃದ್ಧಿಗೆ ಯೋಜನೆ ರೂಪಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ₹ 20 ಲಕ್ಷ ಮೀಸಲಿಟ್ಟಿರುವುದಕ್ಕೂ ಪ್ರಾಣಿ ಪ್ರಿಯರಿಂದ ಬಜೆಟ್‌ಗೆ ಮುಕ್ತಕಂಠದ ಶ್ಲಾಘನೆ ಸಿಕ್ಕಿದೆ. ಸ್ಮಶಾನ, ಖಬರ್‌ಸ್ತಾನ ಅಭಿವೃದ್ಧಿ, ಮುಕ್ತಿ ವಾಹನ ಖರೀದಿಗೆ ಅನುದಾನ... ಉದ್ಯಾನ, ರಸ್ತೆ ಬದಿ ಹಾಗೂ ಸ್ಮಶಾನದಲ್ಲಿ ಕೂರಲು ಸಿಮೆಂಟ್‌ ಕುರ್ಚಿ ಅಳವಡಿಸುವ ನಿರ್ಧಾರಕ್ಕೂ ಮೆಚ್ಚುಗೆ ಕೇಳಿ ಬಂದಿದೆ.

ಪ್ರತಿ ವರ್ಷ ಬೀದಿ ದೀಪಗಳ ನಿರ್ವಹಣೆ, ವಿದ್ಯುತ್‌ ಶುಲ್ಕ ಪಾವತಿಗಾಗಿ ₹ 10 ಕೋಟಿ ವಿನಿಯೋಗಿಸುತ್ತಿದ್ದ ಜಾಗದಲ್ಲಿ ಮುಂದಿನ ಆರ್ಥಿಕ ವರ್ಷದಿಂದ ₹ 5 ಕೋಟಿಯನ್ನಷ್ಟೇ ಖರ್ಚು ಮಾಡಿ, ಅರ್ಧದಷ್ಟು ಹಣ ಉಳಿಸಲು ಹೊಸ ಯೋಜನೆ ಅಳವಡಿಸಿಕೊಂಡಿರುವುದಕ್ಕೂ ಬಜೆಟ್‌ ಸಭೆಯಲ್ಲೇ ಸದಸ್ಯರಿಂದ ಅಪಾರ ಹರ್ಷ ವ್ಯಕ್ತವಾಯ್ತು.

ಬಜೆಟ್‌ನ ಹೂರಣ

ಕೇಂದ್ರ–ರಾಜ್ಯ ಸರ್ಕಾರದ ಅನುದಾನ, ತೆರಿಗೆ ಸಂಗ್ರಹ, ವಿವಿಧ ಮೂಲಗಳ ವರಮಾನ, ರಾಜಸ್ವ ಸ್ವೀಕೃತಿ, ಬಂಡವಾಳ ಸ್ವೀಕೃತಿ, ಅಸಾಧಾರಣ ಸ್ವೀಕೃತಿ, ಉಳಿದ ಶಿಲ್ಕು ಎಲ್ಲವೂ ಒಳಗೊಂಡ ಒಟ್ಟು ₹ 143 ಕೋಟಿ ಮೊತ್ತದ ಬಜೆಟ್‌ ಮಂಡನೆಯಾಯ್ತು.

ಸಾಮಾನ್ಯ ಆಡಳಿತದ ರಾಜಸ್ವ ಪಾವತಿ ₹ 30 ಕೋಟಿ, ರಸ್ತೆ ಕಲ್ಲು ಹಾಸುಗಳು, ನಿರ್ವಹಣೆ ಪಕ್ಕದ ಚರಂಡಿಗಳಿಗಾಗಿ ₹ 3.24 ಕೋಟಿ, ಬೀದಿ ದೀಪಗಳ ನಿರ್ವಹಣೆಗಾಗಿ ₹ 17.25 ಕೋಟಿ, ನೈರ್ಮಲ್ಯ, ಘನತ್ಯಾಜ್ಯ ನಿರ್ವಹಣೆಗಾಗಿ ₹ 15.57 ಕೋಟಿ, ನಾಗರಿಕ ಸೌಕರ್ಯ–ಒಳಚರಂಡಿಗಾಗಿ ₹ 1.05 ಕೋಟಿ, ಸ್ಮಶಾನ ಅಭಿವೃದ್ಧಿಗಾಗಿ ₹ 1.50 ಕೋಟಿ, ನೀರು ಸರಬರಾಜಾಗಾಗಿ ₹ 1 ಕೋಟಿ, ನ್ಯಾಯಾಲಯಕ್ಕಾಗಿಯೇ ₹ 3 ಕೋಟಿ ವೆಚ್ಚದ ಮೀಸಲಿಡಲಾಗಿದೆ.

ಬಂಡವಾಳ ಪಾವತಿಯಲ್ಲಿ ಸಾಮಾನ್ಯ ಆಡಳಿತಕ್ಕೆ ₹ 4.72 ಕೋಟಿ, ರಸ್ತೆ ಕಲ್ಲು ಹಾಸು, ಪಕ್ಕದ ಚರಂಡಿಗಳಿಗಾಗಿ ₹ 4.10 ಕೋಟಿ, ಬೀದಿ ದೀಪಗಳಿಗಾಗಿ ₹ 1.20 ಕೋಟಿ, ಮಳೆ ನೀರಿನ ಚರಂಡಿಗಳಿಗಾಗಿ ₹ 3.50 ಕೋಟಿ, ಉದ್ಯಾನಗಳಿಗಾಗಿ ₹ 1.50 ಕೋಟಿ ಸೇರಿದಂತೆ ವಿವಿಧ ಬಾಬ್ತುಗಳಿಗಾಗಿ ₹ 127.66 ಕೋಟಿ ವೆಚ್ಚ ಮಾಡುವುದಾಗಿ ಪಾಲಿಕೆ ಆಡಳಿತ ಬಜೆಟ್‌ನಲ್ಲಿ ತಿಳಿಸಿದೆ.

ಸಭೆ ಮೊಟಕುಗೊಳಿಸಿದ್ದಕ್ಕೆ ಆಕ್ರೋಶ

ಬಜೆಟ್‌ ಮಂಡನೆ ಬಳಿಕ ಒಂದೆರೆಡು ವಿಷಯಗಳ ಮೇಲೆ ಚರ್ಚೆ ನಡೆಯುತ್ತಿದ್ದಂತೆ, ಮೇಯರ್‌ ಶ್ರೀದೇವಿ ಲೋಗಾವಿ ಸಭೆ ಮೊಟಕುಗೊಳಿಸಿದರು. ಇದಕ್ಕೆ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯ್ತು. ನಂತರ ಮತ್ತೆ ಸಭೆ ಮುಂದುವರೆಯಿತು.

‘ಪಾಲಿಕೆಯ ಪ್ರಥಮ ಅವಧಿಯ ಆಡಳಿತ ಮಂಡಳಿಯ ಐದು ಬಜೆಟ್‌ಗಳಲ್ಲಿ ಒಂದನ್ನು ಯಾವೊಬ್ಬ ಮೇಯರ್‌ ಮಂಡಿಸಲಿಲ್ಲ. ಹಿಂದಿನ ಅವಧಿಯಲ್ಲಿ ಅಧಿಕಾರಿಗಳೇ ಮಂಡಿಸಿದ್ದರು. ಪಾಲಿಕೆಯ ಚುಕ್ಕಾಣಿ ಹಿಡಿದ ಇದೂವರೆಗಿನ ಯಾವೊಬ್ಬ ಮೇಯರ್‌ಗೆ ಕನ್ನಡ ಓದಲು ಬಾರದಿರುವುದರಿಂದಲೇ ಬಜೆಟ್‌ ಮಂಡಿಸಿಲ್ಲ’ ಎಂದು ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಿಗೆ ಮುಂದಾದ ಸದಸ್ಯರು; ತಪ್ಪೊಪ್ಪಿಕೊಂಡ ಅಧಿಕಾರಿಗಳು..!

14ನೇ ಹಣಕಾಸು ಆಯೋಗದ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಮೆಟ್ಟಿಲೇರಿರುವ ಸದಸ್ಯರು ಹಾಗೂ ಉಳಿದ ಸದಸ್ಯರ ನಡುವೆ ಸಭೆಯಲ್ಲೇ ವಾಕ್ಸಮರ ನಡೆಯಿತು. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ–ವಿರೋಧಿ ಸದಸ್ಯರು ಮಾತಿನ ಚಕಮಕಿ ನಡೆಸಿದರು.

‘ನಮ್ಮ ಅಧಿಕಾರದ ಅವಧಿ ನಾಲ್ಕೈದು ತಿಂಗಳಷ್ಟೇ ಇದೆ. ವಿನಾಃ ಕಾರಣ ಜಟಾಪಟಿ ಬೇಡ. ಶಾಸಕರಿಂದ ಉಳಿತಾಯ ಮೊತ್ತದ ಯೋಜನೆಗಳಿಗೆ ಸಹಿ ಹಾಕಿಸುತ್ತೇವೆ. ಎಲ್ಲರೂ ಒಟ್ಟಿಗೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳೋಣ. ಹೈಕೋರ್ಟ್‌ನಲ್ಲಿರುವ ಪ್ರಕರಣವನ್ನು ಹಿಂಪಡೆಯೋಣ’ ಎಂದು ಪರಸ್ಪರರೇ ರಾಜಿಯಾದರು.

ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ವಿಜಯಪುರ ಉಪವಿಭಾಗ ಕಚೇರಿ–1ನ್ನು ಸ್ಥಳಾಂತರಗೊಳಿಸಿದ ವಿಷಯದ ಕುರಿತಂತೆ ಸದಸ್ಯರು ಸಂಬಂಧಿಸಿದ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಂಡಳಿಯ ಎಇಇ ಅಶೋಕ ಮಾಡ್ಯಾಳ ತಪ್ಪೊಪ್ಪಿಕೊಂಡರು. ಈ ಕಚೇರಿ ಸ್ಥಳಾಂತರದ ಕುರಿತು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿದ್ದನ್ನು ಇಲ್ಲಿ ದಾಖಲಿಸಬಹುದು.

ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಸಂದರ್ಭ, ಆಯುಕ್ತರು ಪೌರ ಕಾರ್ಮಿಕರ ಹಳೆಯ ಪ್ರಕರಣವೊಂದರಲ್ಲಿ ಜೈಲು ಪಾಲಾಗಬೇಕಿತ್ತು. ನಿಮ್ಮ ಸಹಕಾರದಿಂದ ಅದು ತಪ್ಪಿತು ಎಂದು ಔದ್ರಾಮ್‌ ಹೇಳಿದರು. ಇದಕ್ಕೆ ರಜಪೂತ ಆಕ್ಷೇಪ ವ್ಯಕ್ತಪಡಿಸಿ ನಿಮ್ಮ ತಪ್ಪದು. ನಮಗದು ಸಂಬಂಧಿಸಿಲ್ಲ ಎಂದಿದ್ದಕ್ಕೆ ಔದ್ರಾಮ್‌ ಹೌದು ಅದು ನಮ್ಮ ತಪ್ಪೇ ಎಂದು ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.