ADVERTISEMENT

ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಪ್ರಯಾಣಿಕರು ಕೈಜೋಡಿಸಿ: ನಾರಾಯಣಪ್ಪ ಕುರುಬರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 13:17 IST
Last Updated 7 ಜೂನ್ 2025, 13:17 IST
ನಾರಾಯಣಪ್ಪ ಕುರುಬರ
ನಾರಾಯಣಪ್ಪ ಕುರುಬರ   

ವಿಜಯಪುರ: ಜಿಲ್ಲಾ ಕೇಂದ್ರ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ಬಸ್ ನಿಲ್ದಾಣ ಸೇರಿದಂತೆ  ಜಿಲ್ಲೆಯಲ್ಲಿರುವ ಒಟ್ಟು 26 ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಮತ್ತಷ್ಟು ಆದ್ಯತೆ ನೀಡಿ ಕ್ರಮವಹಿಸಲಾಗುತ್ತಿದ್ದು, ನಿಲ್ದಾಣದ ಸ್ವಚ್ಛತೆ ಕಾಪಾಡುವಲ್ಲಿ ಪ್ರಯಾಣಿಕರು ಕೈಜೋಡಿಸುವಂತೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ತಿಳಿಸಿದ್ದಾರೆ.

ಎಲ್ಲ ಬಸ್ ನಿಲ್ದಾಣಗಳ ಸ್ವಚ್ಛತೆ ಹಾಗೂ ಪ್ರಯಾಣಿಕ ಸ್ನೇಹಿ ಶೌಚಾಲಯ ನಿರ್ವಹಣೆಗಾಗಿ ಕಾರ್ಮಿಕ ಇಲಾಖೆಯಡಿ ನೋಂದಾಯಿತ ಗುತ್ತಿಗೆದಾರರಿಗೆ ಇ-ಟೆಂಡರ್ ಮೂಲಕ ಆಯ್ಕೆಮಾಡಿ ಪರವಾನಗಿ ನೀಡಲಾಗಿದೆ ಎಂದರು.

ಪರವಾನಗಿದಾರರು ಪ್ರತಿನಿತ್ಯ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವುದನ್ನು ಪರಿಶೀಲಿಸಲು ಬಸ್ ನಿಲ್ದಾಣಗಳ ಸ್ವಚ್ಛತೆ ವಿಜಯಪುರ ವಿಭಾಗ ಎಂಬ ವಾಟ್ಸ್-ಅಪ್ ಗ್ರೂಪ್ ರಚಿಸಿಕೊಂಡು ಅಲ್ಲಿ ಪ್ರತಿ ದಿನ  3 ಬಾರಿ ಬಸ್ ನಿಲ್ದಾಣ ಸ್ವಚ್ಛಗೊಳಿಸಿರುವ ಕುರಿತಾಗಿ ಜಿ.ಪಿ.ಎಸ್ ಫೋಟೊ ಅಪ್‌ಲೋಡ್ ಮಾಡಲು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಸೂಚನೆಯಂತೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸ್ವಚ್ಛತಾ ಕಾರ್ಮಿಕ ಸಿಬ್ಬಂದಿ ಪ್ರತಿದಿನ ಅಪ್‌ ಲೋಡ್ ಮಾಡಿದ ಫೋಟೊಗಳನ್ನು ಪರಿಶೀಲಿಸಿ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡಲು ಕ್ರಮ ಕೈಕೊಳ್ಳಲಾಗುತ್ತಿದೆ. ಬಸ್ ನಿಲ್ದಾಣದ ಪರಿವೀಕ್ಷಣಾ ಸಮಯದಲ್ಲಿ ಸ್ವಚ್ಛತೆಯ ಬಗ್ಗೆ ನ್ಯೂನತೆಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಸ್ವಚ್ಛತಾ ಪರವಾನಗಿದಾರರಿಗೆ ನೋಟಿಸ್ ಜಾರಿ ಮಾಡುವುದಲ್ಲದೇ ದಂಡ ಸಹ ವಿಧಿಸಲು ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ, ತೀವ್ರ ಬಿಸಲಿನಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಇಂಡಸ್ಟ್ರೀಯಲ್ ಫ್ಯಾನ್‌ಗಳನ್ನು ಹಾಗೂ ಘನತ್ಯಾಜ್ಯ ವಿಲೇವಾರಿಗಾಗಿ ಡಸ್ಟ್‌ಬಿನ್‌ಗಳನ್ನು ಅಳವಡಿಸಲಾಗಿದೆ ಎಂದರು.

ಮಹಿಳಾ ವಿಶ್ರಾಂತಿ ಕೊಠಡಿ ಸೌಲಭ್ಯ ಹಾಗೂ ತಾಯಂದಿಯರ ಅನುಕೂಲಕ್ಕಾಗಿ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮೊಬೈಲ್ ಚಾರ್ಜರ್ ಪಾಯಿಂಟ್ ಅಳವಡಿಸಲಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ವಿಭಾಗದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ವಿಶೇಷ ಸ್ವಚ್ಛತಾ ಅಭಿಯಾನ ಸಹ ಹಮ್ಮಿಕೊಳ್ಳಲಾಗಿದೆ. ಬಸ್ ನಿಲ್ದಾಣವನ್ನು ಸ್ವಚ್ಛ ಮತ್ತು ಸುಂದರವಾಗಿ ನಿರ್ವಹಿಸಲು ಯೋಜನೆ ಸಿದ್ಧಪಡಿಸಿಕೊಂಡು ಆ ದಿಸೆಯಲ್ಲಿ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಡುವ ದಿಸೆಯಲ್ಲಿ ಪ್ರಯಾಣಿಕರು ಸಹ ಕೈಜೋಡಿಸಬೇಕು. ತ್ಯಾಜ್ಯಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಬಿಸಾಕದೇ ಬಸ್ ನಿಲ್ದಾಣದಲ್ಲಿ ತ್ಯಾಜ್ಯ ವಿಲೇವಾರಿಗಾಗಿರುವ ಡಸ್ಟ್‌ಬಿನ್ ಬಳಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.