
ವಿಜಯಪುರ: ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಒಗಳ ಪಾತ್ರ ಮುಖ್ಯವಾಗಿದ್ದು, ನಿರೀಕ್ಷಿತ ಪ್ರಗತಿಗೆ ಶ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್ ಸೂಚಿಸಿದರು.
ಬಬಲೇಶ್ವರ ತಾಲ್ಲೂಕು ಪಂಚಾಯಿತಿ ಸಭಾಗಂಣದಲ್ಲಿ ನಡೆದ ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಎಲ್ಲಾ ಅಧಿಕಾರಿ, ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗಿ ಇ- ಹಾಜರಾತಿ ಮೂಲಕ ಹಾಜರಾತಿ ಸಲ್ಲಿಸಲು ಸೂಚಿಸಿದರು.
ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಕಟ್ಟಬೇಕು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಂಬಳ ವಿಳಂಬವಿಲ್ಲದೇ ಕಾಲಮಿತಿಯೊಳಗೆ ಪಾವತಿಗೆ ಕ್ರಮವಹಿಸಬೇಕು, ಬೇಸಿಗೆ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ನಿರಂತರ ಕೂಲಿ ಕೆಲಸ ನೀಡಬೇಕು ಎಂದರು.
ಕರ ವಸೂಲಾತಿ ಬಬಲೇಶ್ವರ ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿಗೂ ಉತ್ತಮ ಪ್ರಗತಿ ಕಾಣಬೇಕು. ಸ್ವಚ್ಛತಾ ಅಭಿಯಾನ ಪ್ರತಿ ಮೂರನೇ ಶನಿವಾರ ನಿರ್ಧಿಷ್ಟವಾಗಿ ಅಂಗನವಾಡಿ ಅಥವಾ ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಸ್ವ- ಸಹಾಯ ಸಂಘಗಳು, ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಸೂಚನೆ ನೀಡಿದರು.
ಇ-ಹಾಜರಾತಿ, ನರೇಗಾ, ವಸತಿ, ಎಸ್‌ಬಿಎಂ, ಇ-ಖಾತಾ, ಗ್ರಂಥಾಲಯ, ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿದರು.
ಕಾಖಂಡಕಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿನ ತಪಾಸಣಾ ಕೊಠಡಿ, ಪ್ರಯೋಗಾಲಯ, ಹೆರಿಗೆ ಕೊಠಡಿ, ವಾರ್ಡ್‌ಗಳು, ಲಸಿಕಾ ಕೊಠಡಿಗಳಿಗೆ ಭೇಟಿ ನೀಡಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಸಲಹೆ ನೀಡಿದರು.
ಆಸ್ಪತ್ರೆಗೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು ಎಂದರು.
ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯಕ್ಕೆ ತೆರಳಿ, ವಸತಿ ನಿಲಯದ ಆವರಣ, ಅಡುಗೆ ಕೋಣೆಯ ಆಹಾರ ಸಾಮಗ್ರಿ, ತರಕಾರಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ವವಸ್ಥೆ ಪರಿಶೀಲಿಸಿದರು.
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಶ್ರಮವಹಿಸಬೇಕು, ಮಕ್ಕಳು ಸಹ ವಸತಿನಿಲಯದ ಲಾಭವನ್ನು ಪಡೆದು ಉತ್ತಮ ಪ್ರಜೆಯಾಗಿ ಹೊರ ಹೊಮ್ಮಬೇಕು ಎಂದರು.
ಕಾರಜೋಳ ಗ್ರಾಮಕ್ಕೆ ಭೇಟಿ ನೀಡಿದ ಅವರು, ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯಿತಿ ಕಟ್ಟಡ, ಕಲ್ಯಾಣಿ, ಗೋಡೌನ್‌ಗಳನ್ನು ವೀಕ್ಷಣೆ ಮಾಡಿದರು.
ಬಬಲೇಶ್ವರ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಎಸ್ ಪಠಾಣ, ತಿಕೋಟಾ ಕಾರ್ಯ ನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ಬಸವರಾಜ ಸಂಕಗೊಂಡ ಇದ್ದರು.
ಇ- ಹಾಜರಾತಿ ಸಲ್ಲಿಕೆಗೆ ಸೂಚನೆ ಗ್ರಂಥಾಲಯ ಕರ ನಿಗದಿತ ಸಮಯದೊಳಗೆ ಪಾವತಿಸಿ ಗ್ರಾ.ಪಂ.ಸಿಬ್ಬಂದಿ ಸಂಬಳ ಕಾಲಮಿತಿಯೊಳಗೆ ಪಾವತಿಸಿ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳೊಡನೆ ಅತ್ಯಂತ ಸಹಕಾರ ಮನೋಭಾವದಿಂದ ವರ್ತಿಸಿ ತಾಳ್ಮೆಯಿಂದ ಸಂವಹನ ನಡೆಸಬೇಕು. ಉತ್ತಮ ಚಿಕಿತ್ಸೆ ನೀಡಬೇಕುರಿಷಿ ಆನಂದ್ ಸಿಇಒ ಜಿ.ಪಂ. ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.