ADVERTISEMENT

ವಿಜಯಪುರ: ‘ಪ್ರಜಾವಾಣಿ’ ಅಮೃತ ಸಾಹಿತ್ಯೋತ್ಸವಕ್ಕೆ ಕ್ಷಣ ಗಣನೆ

ವಿಭೂತಿಹಳ್ಳಿಯಲ್ಲಿ ಸಾಹಿತಿ, ಕವಿ, ವಿದ್ವಾಂಸರ ಸಮಾಗಮಕ್ಕೆ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2023, 13:52 IST
Last Updated 15 ಫೆಬ್ರುವರಿ 2023, 13:52 IST
ಪ್ರಜಾವಾಣಿ ಅಮೃತ ಮಹೋತ್ಸವ
ಪ್ರಜಾವಾಣಿ ಅಮೃತ ಮಹೋತ್ಸವ   

ವಿಜಯಪುರ: ನಾಡಿನ ವಿಶ್ವಾಸರ್ಹ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಪ್ರಜಾವಾಣಿ’ಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ನಾಡಿನಾದ್ಯಂತ ಹತ್ತು ಹಲವು ಮೌಲಿಕ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಂಘ, ಸಂಸ್ಥೆಗಳ ಒಡಗೂಡಿ ವರ್ಷಪೂರ್ತಿ ಆಯೋಜಿಸುತ್ತಿದ್ದು, ಇದರ ಭಾಗವಾಗಿ ಫೆಬ್ರುವರಿ 16ರಂದು ಕಡಣಿಯ ‘ಬೆರಗು’ ಪ್ರಕಾಶನದ ಸಹಯೋಗದೊಂದಿಗೆ ಆಲಮೇಲ ತಾಲ್ಲೂಕಿನ ವಿಭೂತಿಹಳ್ಳಿಯಲ್ಲಿ ‘ಅಮೃತ ಸಾಹಿತ್ಯೋತ್ಸವ’ ಹಮ್ಮಿಕೊಳ್ಳಲಾಗಿದೆ.

ವಿಭೂತಿಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ವೇದಿಕೆಯಲ್ಲಿ ದಿನಪೂರ್ತಿ ಸಾಹಿತ್ಯಿಕ ಕಾರ್ಯಕ್ರಮ ನಡೆಯಲಿದ್ದು, ನಾಡಿನ ಖ್ಯಾತ ಸಾಹಿತಿ, ವಿದ್ವಾಂಸರು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ.ವೀರಭದ್ರಪ್ಪ ‘ಅಮೃತ ಸಾಹಿತ್ಯೋತ್ಸವ’ಕ್ಕೆ ಚಾಲನೆ ನೀಡಲಿದ್ದಾರೆ. ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಸಾಹಿತ್ಯೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಆಲಮೇಲ ಶ್ರೀಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ.

ADVERTISEMENT

‘ಬೆರಗು’ ಪ್ರಕಾಶನ ಹೊರತಂದಿರುವ 12 ಪುಸ್ತಕಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಬಿಡುಗಡೆ ಮಾಡಲಿದ್ದಾರೆ.

‘ಸಾವಿರದ ಸಂತ ಶ್ರೀ ಸಿದ್ದೇಶ್ವರರು’ ರಾಜ್ಯಮಟ್ಟದ ಕಾವ್ಯಸ್ಪರ್ಧೆಯ ವಿಜೇತರಿಗೆ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಹುಮಾನ ವಿತರಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ‘ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಲಿದ್ದಾರೆ.

‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯೂರೊ ಮುಖ್ಯಸ್ಥರಾದ ರಶ್ಮಿ ಎಸ್‌. ಆಶಯ ಮಾತುಗಳನ್ನಾಡಲಿದ್ದಾರೆ. ಕೆ.ಪಿ.ಆರ್‌.ಶುಗರ್ಸ್‌ ಸ್ಥಾನಿಕ ನಿರ್ದೇಶಕ ಮಲ್ಲಿಕಾರ್ಜುನ ಜೋಗೂರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಸಮಾರೋಪ:

ಸಂಜೆ 4ಕ್ಕೆ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಡಾ. ರಾಮಕೃಷ್ಣ ಮರಾಠೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಡಗಂಚಿ ಕೇಂದ್ರೀಯ ವಿವಿ ಕುಲಸಚಿವ ಡಾ. ಬಸವರಾಜ ಡೋಣೂರ ಸಮಾರೋಪ ನುಡಿಗಳನ್ನಾಡಲಿದ್ದಾರೆ.

ಆಲಮೇಲದ ಕೆ.ಪಿ.ಆರ್‌. ಶುಗರ್ಸ್‌ನ ಪಿ.ಆರ್‌.ಒ ಪಾರ್ಥಿಬನ್‌, ಸಿಂದಗಿ ಪ್ರೆಸ್‌ ಕ್ಲಬ್‌ ಅಧ್ಯಕ್ಷ ಶಾಂತೂ ಹಿರೇಮಠ, ಕಸಾಪ ಆಲಮೇಲ ತಾಲ್ಲೂಕು ಘಟಕದ ಅಧ್ಯಕ್ಷ ಶಿವಶರಣ ಗುಂದಗಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಪ್ರಭಾಕರ ಪಾಟೀಲ, ನಿಲಯ ಪಾಲಕರಾದ ಮಾಲತಿ ತಡ್ಲಗಿ, ಬೆರಗು ಪ್ರಕಾಶನದ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್‌.ಕತ್ತಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬೆರಗು ಪ್ರಕಾಶನದ ಸಂಚಾಲಕ ಡಾ.ರಮೇಶ ಎಸ್‌. ಕತ್ತಿ ತಿಳಿಸಿದ್ದಾರೆ.

***

‘ಪ್ರಜಾವಾಣಿ ಮತ್ತು ಸಾಹಿತ್ಯ’ ವಿಚಾರಗೋಷ್ಠಿ

ಫೆ.16ರಂದು ಮಧ್ಯಾಹ್ನ 12ಕ್ಕೆ ನಡೆಯುವ ‘ಪ್ರಜಾವಾಣಿ ಮತ್ತು ಸಾಹಿತ್ಯ’ ವಿಚಾರಗೋಷ್ಠಿಯಲ್ಲಿ ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ರಾಜಕುಮಾರ ಬಡಿಗೇರ ಆಶಯ ಮಾತುಗಳನ್ನಾಡಲಿದ್ದಾರೆ. ಸಿಂದಗಿಯ ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಅಧ್ಯಕ್ಷೆ ವಹಿಸಲಿದ್ದು, ಕಸಾಪ ಮಹಾರಾಷ್ಟ್ರ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ ಜಮಶೆಟ್ಟಿ(ಅಕ್ಕಲಕೋಟೆ) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

‘ಪ್ರಜಾವಾಣಿ; ಕರ್ನಾಟಕತ್ವ ಮತ್ತು ಕನ್ನಡ ಸಾಹಿತ್ಯ’ ಕುರಿತು ಡಾ. ಶ್ರೀಶೈಲ ನಾಗರಾಳ ಹಾಗೂ ‘ಬರದ ನಾಡಿನ ಶ್ರೀಮಂತ ಸಾಹಿತ್ಯ ಮತ್ತು ಸಂಸ್ಕೃತಿ‘ ವಿಷಯ ಕುರಿತು ಸಿ.ಎಂ.ಬಂಡಗಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕವಿಗೋಷ್ಠಿ:

ಮಧ್ಯಾಹ್ನ 2ಕ್ಕೆ ನಡೆಯುವ ಕವಿಗೋಷ್ಠಿಯನ್ನು ‘ಜಾಜಿ ಮಲ್ಲಿಗೆ’ ಖ್ಯಾತಿಯ ಸಾಹಿತಿ ಡಾ. ಸತ್ಯಾನಂದ ಪಾತ್ರೋಟ ಉದ್ಘಾಟಿಸಲಿದ್ದಾರೆ. ಡಾ.ನಿಂಗಪ್ಪ ಮುದೇನೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಶಂಕರ ಬೈಚಬಾಳ ಆಶಯ ಮಾತುಗಳನ್ನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.