ADVERTISEMENT

ವೈದ್ಯಕೀಯ ಕಾಲೇಜು|ವಿಜಯಪುರ, ಧಾರವಾಡ, ಮೈಸೂರಿನಲ್ಲೂ ಪ್ರತಿಭಟನೆ, ವ್ಯಾಪಕ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 3:10 IST
Last Updated 4 ಜನವರಿ 2026, 3:10 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಹೋರಾಟ ನಿರತರ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಜೈಲಿಗೆ ಅಟ್ಟಿರುವ ಸರ್ಕಾರದ ನಡೆಗೆ ಜಿಲ್ಲೆ ಸೇರಿದಂತೆ ಮೈಸೂರು, ಧಾರವಾಡದಲ್ಲೂ ಶನಿವಾರ ಪ್ರತಿಭಟನೆ ನಡೆದಿವೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ನಲ್ಲೂ ಸರ್ಕಾರದ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜಿಲ್ಲೆಯ ಸಚಿವರು, ಶಾಸಕರ ಜನ ವಿರೋಧಿ, ಜಿಲ್ಲೆಯ ಅಭಿವೃದ್ಧಿ ವಿರೋಧಿ ನಿಲುವಿಗೆ ಹಾಗೂ ಹೋರಾಟವನ್ನು ಹತ್ತಿಕ್ಕಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ರಕ್ಷಣೆ ನೀಡಲು ಆಗ್ರಹ:

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಬಂಧಿಸಿ, ಜೈಲಿಗೆ ಹಾಕಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಶನಿವಾರ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದಲಿತ ಸ್ವರಾಜ್ಯ ಸೇನೆ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು, ಹೋರಾಟಗಾರರಿಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನಾ ವಿರೋಧಿಗಳಿಂದ ಪ್ರಾಣ ಬೆದರಿಕೆ ಇದ್ದು, ಕೂಡಲೇ ಸೂಕ್ತ ರಕ್ಷಣೆ ಒದಗಿಸಬೇಕು. ಹೋರಾಟಗಾರರು ಹಾಗೂ ಅವರ ಕುಟುಂಬಸ್ಥರಿಗೆ ಪ್ರಾಣಕ್ಕೆ ಏನಾದರೂ ಹಾನಿಯಾದರೇ  ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು  ಸತೀಶ ಪಾಟೀಲ, ಪ್ರಕಾಶ ಸಬರದ, ಗುರುರಾಜ ಬಿರಾದಾರ, ಸುಭಾಶ್ಚಂದ್ರ ಹೊನ್ನಕಂಠಿ, ಸಂಜು ಶೆಟಗಾರ ಆಗ್ರಹಿಸಿದರು.

ಹುಣಶ್ಯಾಳದ ಸಂಗನಬಸವ ಸ್ವಾಮೀಜಿ ಸೇರಿದಂತೆ ಎಲ್ಲ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ನಡೆ ಖಂಡನೀಯ ಕೂಡಲೇ ಬಂಧಿಸಿರುವ ಹೋರಾಟಗಾರರನ್ನು ಬೇಷರತ್ತು ಬಿಡುಗಡೆಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಖೇಡ, ಉಪಾಧ್ಯಕ್ಷ ಎಂ.ಬಿ. ಉಮರಾಣಿ, ಅಶೋಕ ಚುಳಕೆ, ಸಂತೋಷ ಕಲಗುಡಿ, ಅಂಬಣ್ಣ ಗುನ್ನಾಪುರ, ರಾಜು ಕುಮಟಗಿ, ಸುನೀಲ ಪವಾರ, ಸೋಮಶೇಖರ ಮೆಂಡೇಗಾರ ಆಗ್ರಹಿಸಿದರು.

ಹೋರಾಟದ ಎಚ್ಚರಿಕೆ:

ಕೂಡಲೇ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಾಜ ಸೇವಕ ದುಂಡಪ್ಪ ವಾಘಮೋರೆ ಎಚ್ಚರಿಕೆ ನೀಡಿದ್ದಾರೆ.

ಹೋರಾಟಗಾರರ ಮೇಲೆ ದೌರ್ಜನ್ಯ ನಡೆಸಿ ಪ್ರಕರಣ ದಾಖಲಿಸಿರುವುದು ಸರಿಯಲ್ಲ. ಸ್ವಾಮೀಜಿಯರಿಗೆ ಹಲ್ಲೆ ಮಾಡಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸ್ವರಾಜ್ಯ ಸೇನೆ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್‌ಗೆ ಮನವಿ ಸಲ್ಲಿಸಿದರು 
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಅಂಗವಿಕಲರ ಪಾಲಕರ ಒಕ್ಕೂಟದ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್‌ಗೆ ಮನವಿ ಸಲ್ಲಿಸಿದರು
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಬಗ್ಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು. ಬಂಧಿತ ಹೋರಾಟಗಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಪ್ರಕರಣ ರದ್ದು ಗೊಳಿಸಬೇಕು  ಎನ್.
ರವಿಕುಮಾರ್ ವಿಧಾನ ಪರಿಷತ್ ವಿರೋಧ ಪಕ್ಷ ಮುಖ್ಯ ಸಚೇತಕ   
ಹೋರಾಟಗಾರರ ಕೂದಲು ಕೊಂಕಾಗದಂತೆ ನೋಡಿಕೊಳ್ಳಿ ಅವರನ್ನು ತಕ್ಷಣ ಬಿಡುಗಡೆ ಮಾಡಿ ಅವರ ಮೇಲಿನ ಕೇಸು ವಾಪಸ್ಸು ಪಡೆಯಿರಿ. ಇಲ್ಲದಿದ್ದರೆ ಪ್ರತಿಭಟನೆಯ ಕಿಚ್ಚು ವ್ಯಾಪಿಸಲಿದೆ
ಜಿ.ಬಿ.ಪಾಟೀಲ ಜನಪರ ಹೋರಾಟಗಾರ
ಸಂವಿಧಾನ ವಿರೋಧಿ ನಡೆ: ರವಿಕುಮಾರ್
ಬೆಂಗಳೂರು: ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ 107 ದಿನಗಳಿಂದ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ದೂರು ದಾಖಲಿಸಿರುವುದು ಹಾಗೂ ರಾತ್ರೋರಾತ್ರಿ ಪ್ರತಿಭಟನಾ ಸ್ಥಳದ ಪೆಂಡಾಲ್ ತೆಗೆದಿರುವುದು ಖಂಡನೀಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ನ್ಯಾಯಕ್ಕಾಗಿ ಯಾರೂ ಕೂಡ ಪ್ರತಿಭಟನೆ ಮಾಡಬಾರದು ಮಾಡಿದರೆ ಈ ಸರ್ಕಾರ ಅವರನ್ನು ಟಾರ್ಗೆಟ್ ಮಾಡಿ ಅವರ ಮೇಲೆ ದೂರು ದಾಖಲಿಸಿ ಬಂಧಿಸುತ್ತಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಇದು ಪ್ರತಿಭಟನೆಯನ್ನು ಹತ್ತಿಕ್ಕುವ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಬೇಷರತ್‌ ಬಿಡುಗಡೆಗೆ ಸಿಪಿಎಂ ಆಗ್ರಹ

ವಿಜಯಪುರ: ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಸೇರಿದ್ದ ಚಳವಳಿಕಾರರನ್ನು ಬಂಧಿಸಿ ಜೈಲಿಗಟ್ಟಿ ಪ್ರತಿಭಟನೆ ನಡೆಸುತ್ತಿದ್ದ ಟೆಂಟ್ ಅನ್ನು ದೌರ್ಜನ್ಯದಿಂದ ತೆರವುಗೊಳಿಸಿದ ವಿಜಯಪುರ ಪೊಲೀಸರ ಸರ್ವಾಧಿಕಾರಿ ಕ್ರಮ ಖಂಡನೀಯ. ಹೋರಾಟಗಾರರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಸಿಪಿಎಂ ಮುಖಂಡರಾದ ಯು.ಬಸವರಾಜ ಭೀಮರಾಯ ಪೂಜಾರಿ ಸುರೇಖಾ ರಜಪೂತ ಸುರೇಶ್ ಲಕ್ಷ್ಮಣ ಹಂದ್ರಾಳ ಅಣ್ಣಾರಾಯ ಈಳಗೇರ ಭಾರತಿ ವಾಲಿ ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ ಎಂದು ಆಗ್ರಹಿಸಿ ಹೋರಾಟ ನಡೆಸುವುದು ತಪ್ಪೇ? ನಾವೇನು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವಾ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲದ್ದೇವಾ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ಕಳೆದ 107 ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಬೇಡವೆಂಬ ಆಗ್ರಹವನ್ನಿಟ್ಟು ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಸೇರಿ ವಿಜಯಪುರ ನಗರದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಾ ಬಂಧಿರುವುದು ಸರ್ಕಾರಕ್ಕೆ ತಿಳಿದಿದೆ. ಈ ಹೋರಾಟಕ್ಕೆ ಮಣಿದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಸಕಾರಾತ್ಮಕವಾಗಿರುವುದಾಗಿ ಹೇಳಿದ್ದೂ ಇದೆ. ಆದರೆ ಸಚಿವರು ಮತ್ತು ಸರ್ಕಾರ ಮೆಡಿಕಲ್ ಕಾಲೇಜನ್ನು ಖಾಸಗಿ ಸಹಭಾಗಿತ್ವದಲ್ಲಿ ಮಾಡುವುದನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತ ಹೋರಾಟ ಸಮಿತಿಯು ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲು ಕಳೆದ 7-8 ದಿನಗಳ ಹಿಂದೆಯೆ ನಿರ್ಧರಿಸಿ ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಅಥವಾ ಉಸ್ತುವಾರಿ ಸಚಿವರು ಹೋರಾಟ ಸಮಿತಿಯ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಪರಿಹರಿಸಲು ಕ್ರಮವಹಿಸಬೇಕಿತ್ತು. ಆದರೆ ಹಾಗೆ ಮಾಡದೇ ಹೋರಾಟವನ್ನು ಹತ್ತಿಕ್ಕುವ ಸರ್ವಾಧಿಕಾರಿ ಕ್ರಮಕ್ಕೆ ಮುಂದಾಗಿರುವುದು ಅಕ್ಷಮ್ಯ ಎಂದು ಹೇಳಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವಾಗ ಸ್ವಾಮೀಜಿಯವರ ಮೊಬೈಲ್ ಫೋನ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದು ಪರಿಸ್ಥಿತಿ ಬಿಗಡಾಯಿಸುವಂತಾಗಿದೆ. ಮೊಬೈಲ್ ಫೋನ್ ಕಿತ್ತುಕೊಳ್ಳಲು ಯತ್ನಿಸಿದ ಅಧಿಕಾರಿಯ ಮೇಲೆ ಸೂಕ್ತ ಕ್ರಮ ವಹಿಸುವಂತೆ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಸಾರ್ವಜನಿಕ ಆಸ್ತಿ ಕಾಪಾಡುವುದು ಅಪರಾಧವಲ್ಲ’

ವಿಜಯಪುರ: ‘ಬಡವರ ಪಾಲಿಗೆ ಆಸರೆಯಾಗಿದ್ದ 150 ಎಕರೆ ವಿಸ್ತೀರ್ಣದ ಸರ್ಕಾರಿ ಆಸ್ಪತ್ರೆಯ ಜಮೀನು ಇಂದು ರಾಜಕಾರಣಿಗಳ ಮತ್ತು ಭೂಮಾಫಿಯಾದ ಕೆಟ್ಟ ಕಣ್ಣಿಗೆ ಬಿದ್ದಿದೆ. ಬ್ರಿಟಿಷರ ಕಾಲದ ಮಹಾತ್ಮರು ಬಡವರಿಗಾಗಿ ದಾನ ನೀಡಿದ ಈ 'ಬಂಗಾರದ ಭೂಮಿ'ಯನ್ನು 'ಪಿಪಿಪಿ' ಎಂಬ ಮುಸುಕಿನಡಿ ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರ ಅಕ್ಷರಶಃ ಜನದ್ರೋಹಿಯಾಗಿದೆ’ ಎಂದು ಹೋರಾಟಗಾರ ಜಿ.ಬಿ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ‘ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಎಂದು ಶಾಂತಿಯುತವಾಗಿ ಧರಣಿ ಕುಳಿತ ನಾಗರಿಕರನ್ನು ಒದ್ದು ಜೈಲಿಗೆ ಹಾಕುವ ವಿಜಯಪುರ ಪೊಲೀಸರ ಕ್ರಮ ತುಘಲಕ್ ಆಡಳಿತವನ್ನು ನೆನಪಿಸುತ್ತಿದೆ’ ಎಂದರು. ‘ಸಾರ್ವಜನಿಕ ಆಸ್ತಿ ಕಾಪಾಡುವುದು ಅಪರಾಧವಲ್ಲ ಅದು ನಮ್ಮ ಹಕ್ಕು. ಸಮಾಜವಾದಿ ಸಿದ್ಧರಾಮಯ್ಯನವರಿಗೆ ಬಡವರ ದ್ವನಿ ಕೇಳುತ್ತಿಲ್ಲವೆ? ಬಡವರ ಆಶಾಕಿರಣವೆಂದು ಬಿಂಬಿತ ಎಂ.ಬಿ.ಪಾಟೀಲರಿಗೆ ಬಡವನ ಕೂಗು ನಿದ್ದೆ ತರಿಸೀತೆ? ಸಾವಿರಾರು ಕೋಟಿ ಮಂಜೂರು ಮಾಡಿ ಆಸ್ಪತ್ರೆಗೆ ಸಂಜೀವಿನಿಯಾಗಿದ್ದ ಮಾಜಿ ಆರೋಗ್ಯ ಸಚಿವರೂ ಇಂದಿನ ಸಕ್ಕರೆ ಸಚಿವರಿಗೆ ಬಡವನ ಆರ್ಥನಾದ ಅರ್ಥವಾಗುತ್ತಿಲ್ಲವೆ? ನಾಡಗೌಡರೆ ಮನಗೂಳಿಯವರೆ ವಿಜಯಪುರ ನಗರ ಶಾಸಕರೆ ಇಂದು ನೀವು ಬಡವರಪರವೆಂದು ಸಿದ್ಧಪಡಿಸುವ ಕಾಲ ಬಂದಿದೆ. ನಾವು ನಿಮ್ಮ ಹಿಂಬಾಲಕರು ನಿಮಗೆ ಮತ ಹಾಕಿದ ಮತದಾರರು. ನೀವು ನಮ್ಮವರೆಂದು ಸುಮ್ಮನಿರಲಾಗದು ಬಂಗಾರದ ಸೂಜಿ ನಮ್ಮದೆಂದು ಕಣ್ಣಿಗೆ ಚುಚ್ಚಿಕೊಳ್ಳಲಾದೀತೆ? ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.