ADVERTISEMENT

ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹ: ವಿಜಯಪುರದಲ್ಲಿ ಪ್ರತಿಭಟನೆ

ವಿದ್ಯಾರ್ಥಿ, ಕಾರ್ಮಿಕ, ಮಹಿಳಾ, ದಲಿತ, ರೈತ, ವ್ಯಾಪಾರಸ್ಥರ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:47 IST
Last Updated 1 ಡಿಸೆಂಬರ್ 2025, 4:47 IST
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳು ಬೆಂಬಲಿಸಿದರು 
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳು ಬೆಂಬಲಿಸಿದರು    

ವಿಜಯಪುರ: ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಜಿಲ್ಲೆಯ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಡಿ. 1ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ 11ಕ್ಕೆ ಶಿವಾಜಿ ವೃತ್ತದಿಂದ ಆರಂಭವಾಗುವ ಪ್ರತಿಭಟನಾ ಜಾಥಾ ಗಾಂಧಿ ಚೌಕಿ, ಸರಾಫ್‌ ಬಜಾರ್‌, ಅಮೀರ್‌ ಥೇಟರ್‌, ಸಿದ್ದೇಶ್ವರ ದೇವಸ್ಥಾನ, ಗಾಂಧಿ ಚೌಕಿ, ಬಸವೇಶ್ವರ ಚೌಕಿ ಮೂಲಕ ಸಾಗಿ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ.

ಜಿಲ್ಲೆಯ ವಿವಿಧ ವಿದ್ಯಾರ್ಥಿ, ಕಾರ್ಮಿಕ, ಮಹಿಳಾ, ದಲಿತ, ರೈತ, ವ್ಯಾಪರಸ್ಥರ ಸಂಘಟನೆಗಳು, ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಹೋರಾಟ ಸಮಿತಿ ಸದಸ್ಯ ಅನಿಲ ಹೊಸಮನಿ ತಿಳಿಸಿದ್ದಾರೆ.

ADVERTISEMENT

ಹೋರಾಟಕ್ಕೆ ಬೆಂಬಲ:

ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಗಳೂರು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಧರಣಿಗೆ ಬೆಂಬಲಿಸಿದರು.

ವಿದ್ಯಾರ್ಥಿ ರಾಜೇಶ್ ಮಾತನಾಡಿ, ಬಡವರು, ಹಿಂದುಳಿದ, ಕೃಷಿ ಕಾರ್ಮಿಕರ ಮಕ್ಕಳು ಕಲಿಯಲು ಸರ್ಕಾರಿ ವೈದ್ಯಕೀಯ ಕಾಲೇಜು ಅವಶ್ಯಕತೆ ಇದೆ. ಅದಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರವೇ ಆರಂಭಿಸಿಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿನಿ ಪೂಜಾ ಮಾತನಾಡಿ, ಅತಿಹೆಚ್ಚು ಶುಲ್ಕ ಕಟ್ಟಿ ವೈದ್ಯಕೀಯ ಕೋರ್ಸ್‌ ಓದಿಸುವ ಸಾಮರ್ಥ್ಯ ಎಲ್ಲಾ ಪಾಲಕರಿಗೆ ಇರುವುದಿಲ್ಲ. ಕೋಟಿ ಕೊಟ್ಟು ಸೀಟು ಕೊಂಡಕೊಳ್ಳಬೇಕು ಅದಕ್ಕಾಗಿ ಸರ್ಕಾರ ವೈದ್ಯಕೀಯ ಕಾಲೇಜು ಆರಂಬಿಸಿದರೆ ಎಲ್ಲಾ ಮಕ್ಕಳು ಉನ್ನತ ಶಿಕ್ಷಣ ಕಲಿಯಲು ಸಹಾಯವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಾದ ಕನಿಷ್ಕಾ, ಮ್ಯಾಥ್ಯು, ರಂಜಾನ್, ಅನುಶ್ರೀ, ಶೃತಿ, ಜಾಕ್ಸನ್, ದರ್ಶನ, ಅಖಿಲ, ಈಶಾ, ಪೂಜಾ ಮುಂತಾದವರು ಭಾಗವಹಿಸಿದ್ದರು. ಹೋರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡದಂತೆ ಅಡ್ಡಗಾಲು ಹಾಕುತ್ತಿರುವವರು ಯಾರು? ಇದರ ಹಿಂದೆ ಯಾರ ಹಿತಾಶಕ್ತಿ ಅಡಗಿದೆ
ಬಿ.ಭಗವಾನ್‌ ರೆಡ್ಡಿ ಸದಸ್ಯ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ ವಿಜಯಪುರ

‘ಸಚಿವರು ಒತ್ತಡ ಹೇರಲಿ’

‘ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ ಶಿವಾನಂದ ಪಾಟೀಲ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಷಯವಾಗಿ ಒಟ್ಟಿಗೆ ಸೇರಿ ಚರ್ಚಿಸಿ ಸರ್ಕಾರಿ ಕಾಲೇಜು ಸ್ಥಾಪನೆ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಒತ್ತಾಯಿಸಿದರು. ‘ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೋರಾಟಗಾರರ ನಿಯೋಗವು ಭೇಟಿಯಾದಾಗ ಸರಿಯಾಗಿ ಸ್ಪಂದಿಸಬೇಕಿತ್ತು ನಿಯೋಗದ ಜೊತೆ ಕುಳಿತು ಚರ್ಚಿಸಬೇಕಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.