ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ (ಜೆಸಿಟಿಯು) ಸಮಿತಿ ಕರೆಯ ಮೇರೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಮಂಗಳವಾರ ಬೃಹತ್ ಪ್ರತಿಭಟನಾ ಜಾಥಾ ನಡೆಯಿತು.
ಜಾಥಾದಲ್ಲಿ ಭಾಗವಹಿಸಿದ್ದ ಬ್ಯಾಂಕ್ ನೌಕರರು, ಬಿ.ಎಸ್.ಎನ್.ಎಲ್. ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರು, ಗ್ರಾಮ ಪಂಚಾಯಿತಿ ನೌಕರರು, ಆಲಮಟ್ಟಿ ಗಾರ್ಡನ್ ಕಾರ್ಮಿಕರು, ಔಷಧ ವಿತರಕರು, ವಸತಿ ನಿಲಯ ಸಿಬ್ಬಂದಿ ಸೇರಿದಂತೆ ಸಾವಿರಾರು ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಜೆಸಿಟಿಯು ಜಿಲ್ಲಾ ಸಂಚಾಲಕ ಅಣ್ಣಾರಾಯ ಈಳಗೇರ, ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ನಾಲ್ಕು ಸಂಹಿತೆಗಳನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಸಾರ್ವಜನಿಕ ವಲಯದ ಉದ್ಯಮಗಳು, ಸರ್ಕಾರಿ ಇಲಾಖೆಗಳ ಖಾಸಗೀಕರಣವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.
ಎಐಟಿಯುಸಿ ಮತ್ತು ಬ್ಯಾಂಕ್ ನೌಕರರ ಮುಖಂಡರಾದ ಚಂದ್ರಶೇಖರ ಘಂಟೆಪ್ಪಗೋಳ ಮಾತನಾಡಿ, ಕೇಂದ್ರ ಸರ್ಕಾರವು ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು ಮತ್ತು ದೂರಸಂಪರ್ಕ ಮತ್ತು ಗಣಿಗಾರಿಕೆಯ ಮೂಲಸೌಕರ್ಯ ವಲಯದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಕಂಪನಿಗಳು ಕಡಿಮೆ ಬೆಲೆಗೆ ಲೂಟಿ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಎಸ್.ಕೆ.ಎಂ. ಮುಖಂಡ ಬಿ.ಭಗವಾನರೆಡ್ಡಿ ಮಾತನಾಡಿ, ಅಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಸ್ಕೀಮ್ ಕಾರ್ಮಿಕರು ಸೇರಿದಂತೆ ಎಲ್ಲಾ ಕಾರ್ಮಿಕರಿಗೆ ರಾಷ್ಟ್ರೀಯ ಕನಿಷ್ಠ ವೇತನ ₹26 ಸಾವಿರ ಪ್ರತಿ ತಿಂಗಳು ನೀಡಬೇಕು ಎಂದು ಆಗ್ರಹಿಸಿದರು.
ಅಸಂಘಟಿತ ಕಾರ್ಮಿಕರು ಮತ್ತು ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರಿಗೆ ಕನಿಷ್ಠ ₹9000 ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸಬೇಕು. ಮನೆ ಆಧಾರಿತ ಕಾರ್ಮಿಕರು, ವ್ಯಾಪಾರಿಗಳು, ಚಿಂದಿ ಆಯುವವರು, ಗೃಹ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರು, ಕೃಷಿ ಕಾರ್ಮಿಕರು, ಅಂಗಡಿ ಕಾರ್ಮಿಕರು, ಲೋಡಿಂಗ್/ಅನ್‍ಲೋಡಿಂಗ್ ಕಾರ್ಮಿಕರು, ಗಿಗ್ ಕಾರ್ಮಿಕರು, ಬೀಡಿ ಕಾರ್ಮಿಕರು, ರಿಕ್ಷಾ ಎಳೆಯುವವರು, ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರು, ಮೀನುಗಾರಿಕೆ ಸಮುದಾಯ ಇತ್ಯಾದಿ ಕಾರ್ಮಿಕರನ್ನು ನೋಂದಾಯಿಸಬೇಕು ಮತ್ತು ಪಿಂಚಣಿ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆಯಲ್ಲಿ ಪೋರ್ಟಬಿಲಿಟಿ ನೀಡಬೇಕು ಎಂದು ಆಗ್ರಹಿಸಿದರು. ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಜಿ.ಜಿ. ಗಾಂಧಿ, ಲಕ್ಮಣ ಹಂದ್ರಾಳ, ಸುರೇಶ ಜೀಬಿ, ಮಾದೇವಿ ಧರ್ಮಶೆಟ್ಟಿ, ದ್ಯಾಮಣ್ಣ ಬಿರಾದಾರ, ಲಿಂಗಮ್ಮ ಮಠ, ಸುನಂದಾ ನಾಯಕ, ಅಂಬಿಕಾ ಹೊಳಿಸಂಖ, ಚಾಂದ್ ಮಮದಾಪೂರ, ಶಶಿಕಲಾ ಮ್ಯಾಗೇರಿ, ಕಾಶೀಬಾಯಿ ಜನಗೊಂಡ ಇದ್ದರು.
ವಿಮೆಯಲ್ಲಿ ಶೇ 100 ಎಫ್‍ಡಿಐ, ಅಂಚೆ ಕಾಯಿದೆಗೆ ತಿದ್ದುಪಡಿ, ಬಾಹ್ಯಾಕಾಶ ಸೇರಿದಂತೆ ರಕ್ಷಣಾ ಉತ್ಪಾದನೆ-ಸಂಶೋಧನೆ, ಅಭಿವೃದ್ಧಿಯಲ್ಲಿ ಖಾಸಗಿ ಕಾರ್ಪೊರೇಟರ್‌ಗಳಿಗೆ ಅವಕಾಶ ನೀಡುವುದು ಖಂಡನೀಯಚಂದ್ರಶೇಖರ ಘಂಟೆಪ್ಪಗೋಳ, ಎಐಟಿಯುಸಿ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.