ADVERTISEMENT

ಮೆಕ್ಕೆಜೋಳ ಬೆಳೆಗಾರರಿಗೆ ಏಕರೂಪ ನ್ಯಾಯ ಒದಗಿಸಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:23 IST
Last Updated 2 ಡಿಸೆಂಬರ್ 2025, 6:23 IST
ಲಕ್ಷ್ಮೇಶ್ವರ ತಾಲ್ಲೂಕಿನ ರೈತರು ಮೆಕ್ಕೆಜೋಳ ಹಾಳಾಗುವುದನ್ನು ತಡೆಯಲು ರಸ್ತೆಯಲ್ಲೇ ಒಣಗಿಸುತ್ತಿರುವುದು.
ಲಕ್ಷ್ಮೇಶ್ವರ ತಾಲ್ಲೂಕಿನ ರೈತರು ಮೆಕ್ಕೆಜೋಳ ಹಾಳಾಗುವುದನ್ನು ತಡೆಯಲು ರಸ್ತೆಯಲ್ಲೇ ಒಣಗಿಸುತ್ತಿರುವುದು.   

ಮುದೇಬಿಹಾಳ: ಕೇಂದ್ರ ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹2400 ರಂತೆ ಷರತ್ತು ವಿಧಿಸಿ ಕೆಲವೇ ಜಿಲ್ಲೆಗಳ ರೈತರಿಂದ ಮೆಕ್ಕೆಜೋಳ ನೇರ ಖರೀದಿಗೆ ಸರ್ಕಾರ ಹೊರಡಿಸಿರುವ ಆದೇಶವನ್ನು ಈ ಕೂಡಲೇ ವಾಪಸ್ ಪಡೆದು ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಏಕರೂಪ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳುವಂತೆ ರೈತ ಮುಖಂಡ ಅರವಿಂದ ಕೊಪ್ಪ ಮುಖ್ಯಮಂತ್ರಿ ಅವರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಧಾನ್ಯ ಆಧರಿತ ಎಥೆನಾಲ್ ಉತ್ಪಾದಿಸುವ ಡಿಸ್ಟಿಲರಿಗಳನ್ನು ಸಂತೈಸುವ ಭರದಲ್ಲಿ ರೈತರಿಂದ ನೇರ ಖರೀದಿಸಿ ಡಿಸ್ಟಿಲರಿಗಳ ಗೋದಾಮುಗಳಿಗೆ ತಲುಪಿಸಲು ಸರ್ಕಾರವೇ ನೆರವಾಗಲು ಕೈಗೊಂಡ ನಿರ್ಧಾರ ಮತ್ತು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಸಹಕಾರ ಇಲಾಖೆ ಹೊರಡಿಸಿರುವ ಆದೇಶವು ಮೆಕ್ಕೆಜೋಳ ಬೆಳೆಗಾರರಿಗೆ ಮರಣ ಶಾಸನವಾಗಿದೆ ಎಂದು ತಿಳಿಸಿದ್ದಾರೆ.

ವಿಧಿಸುವ ಷರತ್ತುಗಳನ್ನು ಸರಳೀಕರಣಗೊಳಿಸಿ ಎಂ.ಎಸ್.ಪಿ ಅಡಿ ಮಿತಿರಹಿತ ಖರೀದಿ ಪ್ರಕ್ರಿಯೆಗೆ ತುರ್ತುಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಸಹಕಾರ ಇಲಾಖೆಗೆ ಸೂಚಿಸುವ ಮೂಲಕ ರೈತರಲ್ಲಿ ಮನೆ ಮಾಡಿದ ಆತಂಕವನ್ನು ನಿವಾರಿಸಬೇಕು. ಒಂದು ವೇಳೆ ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶ ಮಾಡಿ ರಾಜ್ಯದ ಮೆಕ್ಕೆಜೋಳ ಬೆಳೆಗಾರರ ಹಿತಕಾಪಾಡದಿದ್ದಲ್ಲಿ ಕಾನೂನು ಹೋರಾಟವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.