ADVERTISEMENT

ಎಸ್‌ಐಆರ್‌ ವಿರುದ್ಧ ಜನಾಂದೋಲ ಅಗತ್ಯ: ಚಿಂತಕ ಶಿವಸುಂದರ್‌

‘ಎಸ್‌ಐಆರ್: ಪೌರತ್ವದ ಪ್ರಶ್ನೆ- ಹುನ್ನಾರಗಳು’ ಸಂವಾದಗೋಷ್ಠಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:29 IST
Last Updated 12 ಫೆಬ್ರುವರಿ 2026, 6:29 IST
ವಿಜಯಪುರದಲ್ಲಿ ‘ಎಸ್.ಐ.ಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ಬುಧವಾರ ಏರ್ಪಡಿಸಿದ್ದ ಸಂವಾದಗೋಷ್ಠಿಯಲ್ಲಿ ಚಿಂತಕ ಶಿವಸುಂದರ್‌ ಮಾತನಾಡಿದರು
ವಿಜಯಪುರದಲ್ಲಿ ‘ಎಸ್.ಐ.ಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ಬುಧವಾರ ಏರ್ಪಡಿಸಿದ್ದ ಸಂವಾದಗೋಷ್ಠಿಯಲ್ಲಿ ಚಿಂತಕ ಶಿವಸುಂದರ್‌ ಮಾತನಾಡಿದರು   

ವಿಜಯಪುರ: ‘ಭಾರತ ಚುನಾವಣಾ ಆಯೋಗವು ಆರಂಭಿಸಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ವ್ಯಾಪಕ ಜನಾಂದೋಲನದ ಅಗತ್ಯವಿದೆ’ ಎಂದು ಚಿಂತಕ ಶಿವಸುಂದರ್‌ ಹೇಳಿದರು.

ಮೇ ಸಾಹಿತ್ಯ ಮೇಳ ವಿಜಯಪುರ ಬಳಗ, ಲಡಾಯಿ ಪ್ರಕಾಶನ, ದಲಿತ ವಿದ್ಯಾರ್ಥಿ ಪರಿಷತ್ತು, ಎಂ.ಎಂ.ಡಿ.ಸಿ, ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸಿ.ಎನ್.ಎಫ್.ಇ ಸಂಘಟನೆಗಳ ಆಶ್ರಯದಲ್ಲಿ ‘ಎಸ್.ಐ.ಆರ್: ಪೌರತ್ವದ ಪ್ರಶ್ನೆ-ಪ್ರಭುತ್ವದ ಹುನ್ನಾರಗಳು’ ಕುರಿತು ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಾದಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಎಸ್‌ಐಆರ್‌ ಮೂಲಕ ದೇಶದ ಸುಮಾರು 20‌ ಕೋಟಿ‌ ಜನರನ್ನು ಹೊರಗಿಡುವ ಹುನ್ನಾರ ನಡೆದಿದೆ. ಎಸ್. ಐ. ಆರ್‌ನಿಂದ ಹೊರಗುಳಿಯಲಿರುವ 20 ಕೋಟಿ ಜನರು ಸಂಭವನೀಯ ಬಿಜೆಪಿ ವಿರೋಧಿ ಮತದಾರರಾಗಿರುತ್ತಾರೆ’ ಎಂದರು.

ADVERTISEMENT

‘ಎಸ್‌ಐಆರ್‌ಗೆ ಬಲಿ ಪಶುಗಳಾಗುವವರಲ್ಲಿ ಮೊದಲಿಗರು ಎಲ್ಲ ಜಾತಿ, ಧರ್ಮಕ್ಕೆ ಸೇರಿದ ಮಹಿಳೆಯರು, ಬಳಿಕ ಮುಸ್ಲಿಮರು, ದಲಿತರು, ವಲಸೆ ಕಾರ್ಮಿಕರು, ಅನಾಥರು, ಈ ದೇಶದ ಅಂಚಿನಲ್ಲಿರುವ ಜನರು ಎಸ್‌ಆರ್‌ಐನಿಂದ ಹೊರಗುಳಿಯಲಿದ್ದಾರೆ’ ಎಂದರು.

‘ಎಸ್‌ಐಆರ್‌ ಮೂಲಕ ದೇಶದ ಜನಸಾಮಾನ್ಯರ ನಾಗರಿಕತ್ವವನ್ನು ಸಾಯಿಸಲಾಗುತ್ತದೆ. ನಾಗರಿಕತ್ವಕ್ಕೆ ಸಂವಿಧಾನ ರಕ್ಷಣೆಯೇ ಇಲ್ಲದಂತೆ ಮಾಡುವುದು ಇದರ ಹಿಂದಿರುವ ಅತಿ ದೊಡ್ಡ ಹುನ್ನಾರ’ ಎಂದರು.  

‘ಎಸ್‌ಐಆರ್ ರದ್ದಾಗಲೇ ಬೇಕು, ಇಲ್ಲವಾದರೆ ಪ್ರಜಾಪ್ರಭುತ್ವವೇ ರದ್ದಾಗಲಿದೆ. ಈ ಹಿಂದೆ ಎನ್‌ಆರ್‌ಸಿ, ರೈತ ವಿರೋಧಿ ನಾಲ್ಕು ಕಾನೂನುಗಳ ವಿರುದ್ಧ ನಡೆದ ಹೋರಾಟದ ಮಾದರಿಯಲ್ಲಿ ನಾವೆಲ್ಲರೂ ಒಂದಾಗಿ ವಿರೋಧಿಸಬೇಕಾಗಿದೆ. ಇದರ ತಡೆಗೆ ಜನಾಂದೋಲನವೊಂದೇ ದಾರಿ’ ಎಂದು ಹೇಳಿದರು.

‘ಎಸ್ಐಆರ್. ಹೆಸರಲ್ಲಿ ದೇಶದ 145 ಕೋಟಿ ಜನರ ಮೇಲೆ ಮೋದಿ ಸರ್ಕಾರ ಎಫ್. ಐ. ಆರ್ ಹಾಕುತ್ತಿದೆ. ಸರ್ಕಾರ ಕೇಳುವ ದಾಖಲಾತಿ ಸಲ್ಲಿಸಿ ನಮ್ಮ ಪೌರತ್ವ ಸಾಬೀತು ಮಾಡಿಕೊಳ್ಳಬೇಕು ಎಂದು ಮೋದಿ‌ ಸರ್ಕಾರ ಹೇಳುತ್ತಿದೆ. ಹೀಗಾಗಿ ಇದು ಕೇವಲ ಮತಪಟ್ಟಿ ಪರಿಷ್ಕರಣೆ ಅಲ್ಲ, ನಾಗರಿಕತ್ವ ಪರಿಷ್ಕರಣೆ’ ಎಂದು ಆರೋಪಿಸಿದರು.

‘ಎಸ್‌ಐಆರ್‌ ಆರಂಭಿಕ ಪ್ರಕ್ರಿಯೆಯಾಗಿ ನಡೆಯುವ ಮ್ಯಾಪಿಂಗ್‌, ಮ್ಯಾಚಿಂಗ್‌ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳ ಜೊತೆ ಆರ್‌ಎಸ್‌ಎಸ್‌, ಬಿಜೆಪಿ ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಕೆಲವು ಕಡೆ ಆರ್‌ಎಸ್‌ಎ, ಬಿಜೆಪಿಸ್‌ ಕಾರ್ಯಕರ್ತರೇ ಬಿಎಲ್‌ಒಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಸಾಬೀತಾಗಿದೆ’ ಎಂದು ಆರೋಪಿಸಿದರು.

‘ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ಕೇಳುವ ದಾಖಲೆಗಳನ್ನು ಸಲ್ಲಿಸುವುದು ಜನಸಾಮಾನ್ಯರಿಗೆ ‘ಅಗ್ನಿ ಪರೀಕ್ಷೆ’ಯಾಗಿದೆ. ಆಯೋಗ ಕೇಳುವ ಬಹುತೇಕ ದಾಖಲಾತಿಗಳು ಜನಸಾಮಾನ್ಯರ ಬಳಿ ಇರುವುದಿಲ್ಲ. ಜನರ ಬಳಿ ಇರುವ ದಾಖಲೆಗಳನ್ನು ಆಯೋಗ ಒಪ್ಪುವುದಿಲ್ಲ’ ಎಂದರು.

ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಫಾದರ್ ಕೆವಿನ್, ಬಿ. ಭಗವಾನ್ ರೆಡ್ಡಿ, ಎಂ.ಸಿ.ಮುಲ್ಲಾ, ರಾಜಶೇಖರ ಯಡಹಳ್ಳಿ, ಕೆ.ಎಫ್‌. ಅಂಕಲಗಿ, ಪ್ರೇಮಾ ಕೋಳಿ, ಸುರೇಖಾ ರಜಪೂತ, ಶ್ರೀನಾಥ ಪೂಜಾರಿ, ಬಸವರಾಜ ಸೂಳಿಭಾವಿ, ಅನಿಲ ಹೊಸಮನಿ, ಯೂಸುಫ್ ನೇವಾರ ಇದ್ದರು.

ಎಸ್‌ಐಆರ್‌ ಮೂಲ ಉದ್ದೇಶವೇನೆಂದರೆ ಈ ದೇಶದಲ್ಲಿ ಮತದಾನ ಹಕ್ಕು ಯಾರಿಗೆ ಇರಬೇಕು ಈ ದೇಶ ಯಾರಿಗೆ ಸೇರಬೇಕು ಎಂದು ನಿರ್ಣಯಿಸುವ ದೊಡ್ಡ ಷಡ್ಯಂತ್ರ ಒಳಗೊಂಡಿದೆ
-ಶಿವಸುಂದರ್‌ ಚಿಂತಕ ಬೆಂಗಳೂರು
ಎಸ್‌ಐಆರ್‌ ಬಗ್ಗೆ ಕಾಂಗ್ರೆಸ್ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಸಿಎಂ ಆದಿಯಾಗಿ ಎಲ್ಲರಿಂದ ಪ್ರತಿರೋಧ ವ್ಯಕ್ತವಾಗಬೇಕು ಕಾಂಗ್ರೆಸ್ ಉಳಿಯಬೇಕು ಎಂದಾದರೆ ಎಸ್‌ಐಆರ್ ವಿರುದ್ಧ ಹೋರಾಟ ರೂಪಿಸಬೇಕು 
-ಎಸ್.ಎಂ.ಪಾಟೀಲ ಗಣಿಹಾರ ಅಹಿಂದ ಮುಖಂಡ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.