ADVERTISEMENT

ಇಬ್ಬರು ಬಾಲಕಿಯರ ಅನುಮಾನಾಸ್ಪದ ಸಾವು: ಪ್ರೀತಿಯ ನೆಪದಲ್ಲಿ ಅತ್ಯಾಚಾರ, ಕೊಲೆ ಆರೋಪ

ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2021, 17:08 IST
Last Updated 23 ಮೇ 2021, 17:08 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಜಯಪುರ: ಬಸವನ ಬಾಗೇವಾಡಿ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯರ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಭಾನುವಾರ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂದು ಗ್ರಾಮದ ಯುವಕನ ಹೆಸರನ್ನು ಉಲ್ಲೇಖಿಸಿ ಬಾಲಕಿಯರ ಪೋಷಕರು ಬಸವನ ಬಾಗೇವಾಡಿ ಠಾಣೆಯಲ್ಲಿ ಮೇ 14ರಂದು ದೂರು ದಾಖಲಿಸಿದ್ದರು.

ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿ, ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದರು.

ADVERTISEMENT

ಇನ್ನೊಂದೆಡೆ, ಎರಡು ಬೇರೆ ಕೋಮಿಗೆ ಸೇರಿದ ಹುಡುಗ ಮತ್ತು ಹುಡುಗಿಯರ ನಡುವಿನ ಪ್ರೇಮ ಪ್ರಕರಣವಿದು. ಇದನ್ನು ವಿರೋಧಿಸಿ ಮರ್ಯಾದೆಗೇಡು ಹತ್ಯೆ ಮಾಡಲಾಗಿದೆ ಎಂದೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

‘ಬಾಲಕಿಯರ ಮೇಲೆ ಅತ್ಯಾಚಾರ ನಡೆದಿಲ್ಲ ಮತ್ತು ಕೊಲೆಯೂ ಆಗಿಲ್ಲ. ಇದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯು ದೃಢಪಡಿಸಿದೆ’ ಎಂದು ಉನ್ನತ ಪೊಲೀಸ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಕರಣದ ವಿವರ: ಮೇ 12ರಂದು ಊರಿನಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಮೇ 14ರಂದು ನೆರೆಯ ತಾಲ್ಲೂಕಿನ ಗ್ರಾಮದ ಬಳಿಯಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು.

‘ಐದಾರು ತಿಂಗಳಿಂದ ಬಾಲಕಿಯೊಬ್ಬಳ ಹಿಂದೆ ಬಿದ್ದಿದ್ದ ಆರೋಪಿಯೊಬ್ಬ ಪ್ರೀತಿಸುವಂತೆ ಪೀಡಿಸಿ ಕಿರುಕುಳ ನೀಡಿದ್ದ. ಮೇ 12ರಂದು ಆ ಬಾಲಕಿಯ ಜೊತೆ ಮತ್ತೊಬ್ಬ ಬಾಲಕಿ (ಹತ್ತಿರದ ಸಂಬಂಧಿ)ಯನ್ನು ಪುಸಲಾಯಿಸಿ, ಇಬ್ಬರನ್ನು ಕರೆದುಕೊಂಡು ಹೋಗಿ, ಅತ್ಯಾಚಾರ ಎಸಗಿ, ಕೊಲೆ ಮಾಡಿ ಬಾಲಕಿಯರ ಕೈಗಳನ್ನು ಕಟ್ಟಿ ಬಾವಿಗೆ ಎಸೆದಿದ್ದಾನೆ’ ಎಂದು ಆರೋಪಿಸಿ ಬಸವನ ಬಾಗೇವಾಡಿ ಠಾಣೆಗೆ ಬಾಲಕಿಯರ ಪೋಷಕರು ದೂರು ನೀಡಿದ್ದರು.

ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗವು ವಿಜಯಪುರ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು.

ಮೂವರ ಬಂಧನ: ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಶನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನು‍ಪಮ್‌ ಅಗರವಾಲ್‌ ತಿಳಿಸಿದ್ದಾರೆ.

ಪರಿಹಾರ ವಿತರಣೆ
ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಸಂತ್ರಸ್ತರ ಕುಟುಂಬದವರಿಗೆ ತಲಾ ₹ 4,12,250 ಮೊತ್ತದ ಚೆಕ್‌ ಅನ್ನು ಈಗಾಗಲೇ ವಿತರಿಸಲಾಗಿದೆ.

***

ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
–ಅನುಪಮ್‌ ಅಗರವಾಲ್‌,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.