ADVERTISEMENT

ನಾಗಠಾಣ ಮೀಸಲು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ: ರಮೇಶ ಜಿಗಜಿಣಗಿ

ಪಕ್ಷದ ತೀರ್ಮಾನಕ್ಕೆ ಬದ್ಧ; ಸಂಸದ ರಮೇಶ ಜಿಗಜಿಣಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 12:36 IST
Last Updated 28 ಏಪ್ರಿಲ್ 2022, 12:36 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತನಿದ್ದೇನೆ. ಈ ಸಂಬಂಧ ಸಚಿವ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸುತ್ತೇನೆ.ಪಕ್ಷದ ತೀರ್ಮಾನಕ್ಕೆ ಬದ್ಧನಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ರಾಜ್ಯ ರಾಜಕಾರಣಕ್ಕೆ ಹೋಗು ಎಂದರೆ ಹೋಗುತ್ತೇನೆ. ಇಲ್ಲವೇ ಮನೆಯಲ್ಲೇ ಇರು ಎಂದರೆ ತೋಟದಲ್ಲಿ ಇರುತ್ತೇನೆ ಎಂದರು.

ಗೋವಿಂದಕಾರಜೋಳ ನನ್ನ ಸಹೋದರ ಇದ್ದಂತೆ. ಅವರು ರಾಜ್ಯ ರಾಜಕಾರಣದಲ್ಲಿ ನನ್ನ ಎತ್ತರಕ್ಕೆ ಬೆಳೆಯಲಿ ಎಂಬ ಸಲುವಾಗಿಯೇ ನಾನು ಕಳೆದ 25 ವರ್ಷಗಳಿಂದ ರಾಜ್ಯ ರಾಜಕಾರಣಕ್ಕೆ ತಲೆ ಹಾಕಲಿಲ್ಲ. ಸ್ಟೋರ್‌ ಕೀಪರ್ ಆಗಿದ್ದ ವ್ಯಕ್ತಿಯನ್ನು ರಾಜಕೀಯವಾಗಿ ಬೆಳೆದು ನಿಂತಿದ್ದಾರೆ ಎಂದರೆ ಅದೇ ನನಗೆ ದೊಡ್ಡ ಖುಷಿ. ಅವರ ಹಾಗೂ ನನ್ನ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ ಎಂದರು.

ADVERTISEMENT

ಈ ರಾಜ್ಯದಲ್ಲಿ ಶೇ 1, 2ರಷ್ಟು ಜನಸಂಖ್ಯೆ ಇರುವವರು ಮುಖ್ಯಮಂತ್ರಿ ಆಗಿರುವಾಗ ಶೇ 20, 30ರಷ್ಟು ಜನಸಂಖ್ಯೆ ಇರುವ ದಲಿತ ಸಮುದಾಯದವರು ಏಕೆ ಮುಖ್ಯಮಂತ್ರಿಯಾಗಬಾರದು. ದಲಿತರೊಬ್ಬರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬುದು ನನ್ನ ಆಶಯ. ಯಾವುದೇ ಪಕ್ಷದಿಂದ ಆದರೂ ಆಗಲಿ ಎಂದು ಅವರು ಹೇಳಿದರು.

ಜವಳಿ ಪಾರ್ಕ್‌ ಸ್ಥಾಪನೆ:

ಜಿಲ್ಲೆಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಈ ಸಂಬಂಧ ಕೇಂದ್ರ ಜವಳಿ ಇಲಾಖೆಯ ಹಿರಿಯ ಅಧಿಕಾರಿಗಳು ಮುಳುವಾಡ ಕೈಗಾರಿಕಾ ಪ್ರದೇಶಕ್ಕೆ ನೀಡಿ ಭೂಮಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಮೇ 4ರಂದು ಸಭೆ ಇದೆ. ಜಿಲ್ಲೆಯಲ್ಲಿ ಜವಳಿ ಪಾರ್ಕ್‌ ಆರಂಭ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸದರ ಆದರ್ಶ ಗ್ರಾಮಗಳಿಗೆ ಅಗತ್ಯ ಅನುದಾನ ಸಿಗದ ಕಾರಣ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಸಂಸದನಾಗಿ ಜಿಲ್ಲೆಗೆ ವಿಮಾನ ನಿಲ್ದಾಣ, ರೈಲ್ವೆ ಮಾರ್ಗ, ರೈಲ್ವೆ ಮೇಲ್ಸೇತುವೆ, ಎನ್‌ಟಿಪಿಸಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ಎಲ್ಲಿಯೂ ನನ್ನ ಹೆಸರು ಹಾಕಿಕೊಂಡಿಲ್ಲ.ಈ ಹಿಂದೆ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಯಾವ ಸಂಸದರು ಇಷ್ಟೊಂದು ಅನುದಾನ ತಂದಿಲ್ಲ ಎಂದು ಸಮರ್ಥಿಸಿಕೊಂಡರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹೆದ್ದಾರಿ ಅಭಿವೃದ್ಧಿಗೆ ಅನುದಾನ

ಕೇಂದ್ರ ಭೂ ಸಾರಿಗೆ ಇಲಾಖೆ ಜಿಲ್ಲೆಯಲ್ಲಿ ಹಾದುಹೋಗಿರುವ 240 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ₹ 1718.62 ಕೋಟಿ ಅನುದಾನ ಮೀಸಲಿಟ್ಟಿದೆ ಎಂದು ಜಿಗಜಿಣಗಿ ತಿಳಿದರು.

ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಾಶ್ಯಾಳ-ಕರ್ಜಗಿ-ಇಂಡಿ- ಅಥರ್ಗಾ– ವಿಜಯಪುರ ಮತ್ತು ಕನಮಡಿ-ತಿಕೋಟಾ ರಸ್ತೆ ಸೇರಿದಂತೆ ಒಟ್ಟು 134 ಕಿ.ಮಿ ರಸ್ತೆ ನಿರ್ಮಾಣ ಶೀಘ್ರ ಆರಂಭವಾಗಲಿದೆ ಎಂದರು.

ಸಿದ್ದಾಪುರ-ಆರಕೇರಿ ಭೂತನಾಳ, ವಿಜಯಪುರ-ತೆಲಸಂಗ ಕ್ರಾಸ್, ವಿಜಯಪುರ-ಹುಬ್ಬಳ್ಳಿ 56 ಕಿ.ಮೀ ಹಾಗೂ ಮೇಲ್ಸೇತುವೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ರಸ್ತೆ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ಹಿಂದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರು ದ್ವಿಪಥ, ಚತುಷ್ಪಥ, ಪಟ್ಪಥ ಅಭಿವೃದ್ಧಿಗೆ ಚಾಲನೆ ನೀಡಿದ್ದರು. ನಂತರ ಆಡಳಿತಕ್ಕೆ ಬಂದ ಸರ್ಕಾರಗಳು ಈ ಬಗ್ಗೆ ತಾತ್ಸಾರ ಭಾವನೆ ಹೊಂದಿದ್ದವು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಜಾಲವನ್ನೇ ನಿರ್ಮಿಸುತ್ತಿದ್ದಾರೆ ಎಂದು ತಿಳಿಸಿದರು.

ಮನವಿ ಪುರಸ್ಕರಿಸಿದ ಗಡ್ಕರಿ:

ಹಿಂದುಳಿದ ವಿಜಯಪರ ಜಿಲ್ಲೆಯ ಅಭಿವೃದ್ಧಿಗೆ ವ್ಯಾಪಾರ ವಹಿವಾಟಿಗೆ ಈ ರಸ್ತೆ ಅಭಿವೃದ್ಧಿ ಮಹತ್ವಪೂರ್ಣವಾಗಿದ್ದು ಪ್ರಥಮ ಬಾರಿಗೆ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳಿಗೆ ಕೇಂದ್ರ ಸಚಿವ ನೀತಿನ್‌ ಗಡ್ಕರಿ ಪುರಸ್ಕರಿಸಿರುವುದು ಸಂತಸ ತರಿಸಿದೆ ಎಂದರು.

* ಭ್ರಷ್ಟಾಚಾರದ ಬಗ್ಗೆ ಗೌಡಪ್ಪಗಳು ಏನೇನೋ ಸುಮ್ಮನೆ ಮಾತನಾಡುತ್ತಾರೆ.ಎಲ್ಲರ ಇತಿಹಾಸವೂ ನನಗೆ ಗೊತ್ತಿದೆ. ಸಮಯ ಬಂದರೆ ಗಾಂಧಿವೃತ್ತದಲ್ಲಿ ದೊಡ್ಡ ಸ್ಟೇಜ್ ಹಾಕಿ ಎಲ್ಲರ ಜಾತಕ ಬಿಚ್ಚಿಡಬೇಕಾಗುತ್ತದೆ.

–ರಮೇಶ ಜಿಗಜಿಣಗಿ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.