ADVERTISEMENT

ರಾಜಕೀಯ ಮತಭೇಟೆಗಾಗಿ ಮೀಸಲಾತಿ ಅಸ್ತ್ರ- ಎಸ್‌.ಎಂ.ಪಾಟೀಲ ಆರೋಪ

ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 12:23 IST
Last Updated 1 ಏಪ್ರಿಲ್ 2023, 12:23 IST
ಎಸ್‌.ಎಂ.ಪಾಟೀಲ ಗಣಿಹಾರ
ಎಸ್‌.ಎಂ.ಪಾಟೀಲ ಗಣಿಹಾರ   

ವಿಜಯಪುರ: ಮುಸ್ಲಿಮರಿಗೆ ಸಂವಿಧಾನ ದತ್ತವಾಗಿ ಲಭಿಸಿದ್ದ ಮೀಸಲಾತಿಯನ್ನು ಕಿತ್ತುಹಾಕಿ ಮುಸ್ಲಿಮರನ್ನು ಬೀದಿಗಳಿಸಬೇಕು, ಸಮಾಜದಲ್ಲಿ ಅಶಾಂತಿ ಮೂಡಿಸಬೇಕು ಎಂಬ ಬಿಜೆಪಿ ತಂತ್ರ ಕೇವಲ ರಾಜಕೀಯ ಮತಭೇಟೆಗಾಗಿ ನಡೆದಿದೆ ಅಷ್ಟೇ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಮರ ಮೀಸಲಾತಿ ತೆಗೆದು ಲಿಂಗಾಯತ, ಒಕ್ಕಲಿಗರಿಗೆ ಹಂಚಿರುವುದು ಸಂವಿಧಾನಾತ್ಮಕವಾಗಿ ಎಷ್ಟು ಸಮಂಜಸ, ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಿ, ಲಾಭ ಪಡೆಯುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮುಸ್ಲಿಮರ ಮೀಸಲಾತಿ ಕಿತ್ತು, ಲಿಂಗಾಯತ, ಒಕ್ಕಲಿಗರಿಗೆ ಕೊಟ್ಟಿರುವ ಕ್ರಮವನ್ನು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಒಪ್ಪಿಕೊಂಡಿದ್ದು ದುರಾದೃಷ್ಟಕರ, ವಿಷಾದನೀಯ. ಸರ್ಕಾರದ ಈ ನಡೆ ಸಮಾನತೆಯ ಹರಿಕಾರ ಬಸವಣ್ಣನ ತತ್ವಕ್ಕೆ ವಿರೋಧಿಯಾಗಿದೆ ಎಂದರು.

ADVERTISEMENT

ಸರ್ಕಾರದ ನಡೆಯನ್ನು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರೋಧಿಸಿರುವುದು ಸ್ವಾಗತಾರ್ಹ ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಸ್ಲಿಮರ ಮೀಸಲಾತಿ ತೆಗೆದಿರುವುದನ್ನು ಸ್ವಾಗತಿಸಿ, ಮುಸ್ಲಿಮರ ಮೀಸಲಾತಿ ಕಿತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಸಂವಿಧಾನದಲ್ಲಿ ಇಲ್ಲ ಆದರೂ ನೀಡಲಾಗಿತ್ತು ಎಂದು ಹೇಳಿದ್ದಾರೆ. ಹಾಗಾದರೆ, ಇಡಬ್ಲ್ಯೂ ಎಸ್ ಸಂವಿಧಾನ ಬದ್ದವೇ ಎಂದು ಅವರು ಪ್ರಶ್ನಿಸಿದರು.

ಮೀಸಲಾತಿ ಕಳೆದುಕೊಂಡಿರುವ ಮುಸ್ಲಿಮರಿಗೆ ಇಡಬ್ಲ್ಯು ಎಸ್ ನಲ್ಲಿ ಎಷ್ಟು ಮೀಸಲಾತಿ ನೀಡುತ್ತೀರಿ ಎಂಬುದು ಸರ್ಕಾರದ ಸ್ಪಷ್ಟಪಡಿಸಬೇಕು ಎಂದರು.

ಒಡೆದಾಳುವ ಬಿಜೆಪಿ ನೀತಿಯನ್ನು ಲಿಂಗಾಯತ, ಒಕ್ಕಲಿಗರು ವಿರೋಧಿಸಿಬೇಕು, ಈ ಮೀಸಲಾತಿ ಒಪ್ಪಿಕೊಳ್ಳಬಾರದು. ಮುಸ್ಲಿಮರು-ಲಿಂಗಾಯತ, ಒಕ್ಕಲಿಗರ ನಡುವೆ ಗೊಂದಲ, ಘರ್ಷಣೆ ನಡೆಯಲಿ ಎಂಬ ಬಿಜೆಪಿ ಉದ್ದೇಶ ಈಡೇರದು ಎಂದರು.

ಒಳ ಮೀಸಲಾತಿ ವಿಷಯದಲ್ಲೂ ಬಂಜಾರ ಸಮಾಜಕ್ಕೆ ರಾಜ್ಯ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿದರು.

ಬಸವರಾಜ ಬೊಮ್ಮಾಯಿ ಬೊಮ್ಮಾಯಿ ಅವರೊಬ್ಬ ದುರ್ಬಲ ಮುಖ್ಯಮಂತ್ರಿ. ಲವಲವೇಶವೂ ಸಾಮಾಜಿಕ ನ್ಯಾಯ ಎಂಬುದು ಅವರ ಬಳಿ ಇಲ್ಲ. ಮಂಗಳೂರಿನಲ್ಲಿ ಕೊಲೆಯಾದ ಹಿಂದು, ಮುಸ್ಲಿಮರ ವ್ಯಕ್ತಿಗಳಿಗೆ ಪರಿಹಾರ ವಿತರಣೆಯಲ್ಲೇ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಘ, ಪರಿಹಾರ, ಬಿಜೆಪಿಯವರು ಸದಾ ಕಾಲ ಅಧಿಕಾರದಲ್ಲಿ ಇರಲ್ಲ, ಬದಲಾವಣೆ ಆಗಲಿದೆ ಎಂಬ ಅರಿವು ಇರಬೇಕು.
ಮೀಸಲಾತಿ ವಿಷಯದಲ್ಲಿ ಈಗಾಗಲೇ ಕಾನೂನು ಹೋರಾಟ ಆರಂಭವಾಗಿದೆ. ಪಿಐಎಲ್ ದಾಖಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ನಾಗರಾಜ ಲಂಬು, ಅಕ್ರಮ್ ಮಾಶಾಳಕರ, ವಸಂತ ಹೊನಮೋಡೆ, ಎಂ.ಸಿ.ಮುಲ್ಲಾ, ಫಯಾಜ್ ಕಲಾದಗಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

–––––

ಮುಸ್ಲಿಮರ ಮೀಸಲಾತಿ ಕಿತ್ತು, ಒಕ್ಕಲಿಗ, ಲಿಂಗಾಯತರಿಗೆ ಹಂಚಿರುವ ಬಗ್ಗೆ ಕಾಂಗ್ರೆಸ್ ಶಾಸಕರು, ಮುಖಂಡರು ಏಕೆ ಮಾತನಾಡುತ್ತಿಲ್ಲ
–ಎಸ್‌.ಎಂ.ಪಾಟೀಲ ಗಣಿಹಾರ, ಕೆಪಿಸಿಸಿ ವಕ್ತಾರ, ಕೆಪಿಸಿಸಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.