ADVERTISEMENT

ನಿರ್ಬಂಧದ ನಡುವೆಯೇ ಹೊಸ ವರ್ಷಾಚರಣೆ ಸಂಭ್ರಮ

2021ಕ್ಕೆ ವಿದಾಯ; 2022ಕ್ಕೆ ಸರಳ ಸ್ವಾಗತ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 15:20 IST
Last Updated 31 ಡಿಸೆಂಬರ್ 2021, 15:20 IST
ವಿಜಯಪುರ ನಗರದ ಬೇಕರಿಯೊಂದರಲ್ಲಿ ಶುಕ್ರವಾರ ಹೊಸ ವರ್ಷಾಚರಣೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬಗೆಬಗೆಯ ಕೇಕ್‌ಗಳನ್ನು ಜನರು ಖರೀದಿಸಿರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಬೇಕರಿಯೊಂದರಲ್ಲಿ ಶುಕ್ರವಾರ ಹೊಸ ವರ್ಷಾಚರಣೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಬಗೆಬಗೆಯ ಕೇಕ್‌ಗಳನ್ನು ಜನರು ಖರೀದಿಸಿರು–ಪ್ರಜಾವಾಣಿ ಚಿತ್ರ   

ವಿಜಯಪುರ: ಕೋವಿಡ್‌ ನಿರ್ಬಂಧ, ರಾತ್ರಿ ಕರ್ಫ್ಯೂ ನಡುವೆಯೇ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೊಸ ವರ್ಷ 2022 ಅನ್ನು ಚುಮುಚುಮು ಚಳಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.

2021ರ ಸಿಹಿ–ಕಹಿ ಘಟನೆಗಳಿಗೆ ವಿದಾಯ ಹೇಳಿ, 2022ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು.

ವರ್ಷದ ಕಡೆಯ ದಿನವಾಗಿದ್ದ ಶುಕ್ರವಾರಬೇಕರಿ, ವೈನ್‌ಶಾಪ್‌,ಮಾಂಸದ ಅಂಗಡಿಗಳಲ್ಲಿ ವ್ಯಾಪಾರ, ವಹಿವಾಟು ಜೋರಾಗಿತ್ತು.ಆಪ್ತರು, ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ರಾತ್ರಿ 12 ಆಗುತ್ತಲೇಕೇಕ್‌ ಕತ್ತರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಮನೆಯಲ್ಲೇ ಸಂಭ್ರಮಿಸಿದರು. ಬಗೆಬಗೆಯ ಭಕ್ಷ್ಯ, ಭೋಜನವನ್ನು ಮನೆಯಲ್ಲಿ ತಯಾರಿಸಿ, ಸವಿದರು. ಇನ್ನು ಕೆಲವರು ನಗರ, ಪಟ್ಟಣದ ಹೊರವಲಯದಲ್ಲಿ ಇರುವ ಹೊಲ, ತೋಟದ ಮನೆಗಳಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಸಂಭ್ರಮಿಸಿದರು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ನೇಹಿತರೊಡಗೂಡಿ ಹೊಸ ವರ್ಷವನ್ನು ಸ್ವಾಗತಿಸಿದರು.

ADVERTISEMENT

ರಾತ್ರಿ 10ರ ವರೆಗೂ ನಗರದ ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲೂ ಹೊಸ ವರ್ಷದ ಪಾರ್ಟಿಗಳು ಸೀಮಿತವಾಗಿ ನಡೆದವು. ಕರ್ಫ್ಯೂ ಹಿನ್ನೆಲೆಯಲ್ಲಿ 10 ಬಳಿಕ ಬಾಗಿಲು ಮುಚ್ಚಲಾಗಿತ್ತು. ಕೋವಿಡ್‌ ಪರಿಣಾಮ ಹಿಂದಿನ ಅದ್ಧೂರಿಯಾಗಲಿ, ರಸ್ತೆಗಳ ಮೇಲೆ ಸಂಭ್ರವವಾಗಲಿ ಕಂಡುಬರಲಿಲ್ಲ. ನಗರ, ‍ಪಟ್ಟಣಗಳ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುವ ಮೂಲಕ ರಾತ್ರಿಕರ್ಫ್ಯೂ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದ್ದರು.

ಡಿಜೆ, ಸಂಗೀತ ಕಾರ್ಯಕ್ರಮ ಆಯೋಜನೆಗಳಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಸಂಪೂರ್ಣ ನಿರ್ಬಂಧ ವಿಧಿಸಿದ್ದ ಕಾರಣ ಜಿಲ್ಲೆಯಾದ್ಯಂತ ಎಲ್ಲಿಯೂ ದೊಡ್ಡ ಮಟ್ಟದಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳಾಗಲಿ, ತುಂಡು, ಗುಂಡು ಪಾರ್ಟಿಗಳು ನಡೆಯಲಿಲ್ಲ. ಕೇವಲ ಮನೆ, ಕುಟುಂಬ, ಸ್ನೇಹಿತರು ಸೇರಿದಂತೆ ಬೆರಳೆಣಿಕೆ ಮಂದಿಗೆ ಹೊಸ ವರ್ಷಾಚರಣೆ ಸೀಮಿತವಾಗಿತ್ತು. ವ್ಯಾಪಾರ, ವಹಿವಾಟು ಹೇಳಿಕೊಳ್ಳುವಂತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.