ADVERTISEMENT

13 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾದ ನಿವೃತ್ತ ಯೋಧ!

ಇಂಗಳೇಶ್ವರ ಗ್ರಾಮದ ಪಿಎಸ್ಐ ಬಸವರಾಜ ಬಾಗೇವಾಡಿ ಯಶೋಗಾಥೆ

ಬಸವರಾಜ ಎಸ್.ಉಳ್ಳಾಗಡ್ಡಿ
Published 5 ಡಿಸೆಂಬರ್ 2025, 6:13 IST
Last Updated 5 ಡಿಸೆಂಬರ್ 2025, 6:13 IST
ಬಸವರಾಜ ಬಾಗೇವಾಡಿ
ಬಸವರಾಜ ಬಾಗೇವಾಡಿ   

ಬಸವನಬಾಗೇವಾಡಿ: ಸೈನ್ಯಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕವೂ ಒಂದಲ್ಲ‌, ಎರಡಲ್ಲ ಬರೋಬ್ಬರಿ 13 ವಿವಿಧ ಸರ್ಕಾರಿ ಹುದ್ದೆಗಳಿಗೆ‌ ನೇಮಕಗೊಂಡು ಕೊನೆಗೆ ಪಿಎಸ್ಐ ಹುದ್ದೆ ಆಯ್ಕೆ ಮಾಡಿಕೊಂಡು ತರಬೇತಿ ಪಡೆಯುತ್ತಿರುವ ತಾಲ್ಲೂಕಿನ ಇಂಗಳೇಶ್ವರ ಗ್ರಾಮದ ನಿವೃತ್ತ ಯೋಧ ಬಸವರಾಜ ಬಾಗೇವಾಡಿ ಅವರ ಯಶೋಗಾಥೆ ಇಡೀ ಬಸವನಾಡಿನ ಯುವ ಸಮೂಹಕ್ಕೆ ಸ್ಪೂರ್ತಿಯಾಗಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿದ ಬಸವರಾಜ ಅವರು ಕುಟಂಬದವರೊಂದಿಗೆ ಕೂಲಿ ಮಾಡುತ್ತಲೇ ಪಿಯುಸಿ ಶಿಕ್ಷಣ ಪೂರೈಸಿ ತಮ್ಮ‌ 19 ನೇ ವಯಸ್ಸಿನಲ್ಲಿ ಪ್ರಥಮ‌ ಪ್ರಯತ್ನದಲ್ಲೇ ಭಾರತೀಯ ಸೇನೆಗೆ ಸೇರಿ, 17 ವರ್ಷ ಸೇವೆ ಸಲ್ಲಿಸಿದರು.  ಸೇನೆಯಲ್ಲಿರುವಾಗಲೇ ಬಾಹ್ಯ ಅಭ್ಯರ್ಥಿಯಾಗಿ ಬಿ.ಎ. ಪದವಿ ಪೂರೈಸುತ್ತಾರೆ. 2019ರಲ್ಲಿ ನಿವೃತ್ತಿಯಾಗಿ ಗ್ರಾಮಕ್ಕೆ ಮರಳಿದ ಬಳಿಕ ತಾಯ್ನಾಡಿನಲ್ಲಿ ಸೇವೆ ಸಲ್ಲಿಸಬೇಕೆಂಬ ತುಡಿತದಲ್ಲಿ ವಿಜಯಪುರ ನಗರದ ಆರ್ಯಭಟ ಕರಿಯರ್ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ‌ ತರಬೇತಿ ಪಡೆದು, ಸಿವಿಲ್‌ ಪೊಲೀಸ್ ಹುದ್ದೆಗೆ ಅಯ್ಕೆಯಾಗಿದ್ದಾರೆೆ.

ಸುಮಾರು ಎರಡೂವರೆ ವರ್ಷ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಲೇ ವಿವಿಧ ಸರ್ಕಾರಿ ಇಲಾಖೆಗಳ‌ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು‌ ಬರೆದು 12 ಸರ್ಕಾರಿ ಹುದ್ದೆಗಳಿಗೆ ಆಯ್ಕೆಗೊಂಡಿದ್ದಾರೆ.

ADVERTISEMENT

ಒಮ್ಮೆ ಡಿಎಆರ್ ಪೊಲೀಸ್, ಮೂರು‌ ಬಾರಿ ಸಿವಿಲ್ ಪೊಲೀಸ್, ಒಮ್ಮೆ ಎಫ್.ಡಿ.ಎ, ಎರಡು‌ ಬಾರಿ ಎಸ್.ಡಿ.ಎ, ಆರ್.ಆರ್.ಬಿ ಎನ್‌ಟಿಪಿಸಿಯಲ್ಲಿ ಸ್ಟೇಶನ್ ಮಾಸ್ಟರ್, ಮೂರು‌ ಬಾರಿ ತಲಾಟಿ ಹುದ್ದೆಗಳ ಆಯ್ಕೆ ಬಳಿಕ ಗೊಂದಲಕ್ಕೀಡಾಗಿದ್ದ ಅವರು ಪಿಎಸ್ಐ ನೇಮಕಾತಿ ಮರು ಪರೀಕ್ಷೆಯಲ್ಲಿ ಆಯ್ಕೆಗೊಂಡು ಕಳೆದ 10 ತಿಂಗಳಿಂದ ಮೈಸೂರಿನಲ್ಲಿ  ತರಬೇತಿ ಪಡೆಯುತ್ತಿದ್ದಾರೆ. ಇದಲ್ಲದೇ, ಇತ್ತೀಚೆಗೆ ಪ್ರಕಟವಾದ 402 ಪಿಎಸ್ಐ ಹುದ್ದೆಗಳ ಪರೀಕ್ಷೆಯ ಅಂತಿಮ ಆಯ್ಕೆ ಪಟ್ಟಿಯಲ್ಲಿಯೂ ಹೆಸರು ಗಿಟ್ಟಿಸಿಕೊಂಡು ಒಟ್ಟು 13 ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಎಲ್ಲರೂ ಹುಬ್ಬೇರಿಸುವಂತೆ ಸಾಧಿಸಿ ಯುವಕರಿಗೆ ಸ್ಪೂರ್ತಿಯಾಗಿ, ಗ್ರಾಮಕ್ಕೆ‌ ಕೀರ್ತಿ ತಂದಿದ್ದಾರೆ.

‘ನನ್ನ ಸಾಧನೆಗೆ ಬಾಲ್ಯದಿಂದಲೂ ನನಗೆ ಬೆನ್ನೆಲುಬಾಗಿ ನಿಂತವರು ತಂದೆ–ತಾಯಿ, ಸಹೋದರರು ಸೇರಿದಂತೆ ಇಡೀ ಕುಟುಂಬ. ಅಲ್ಲದೇ, ಕೋವಿಡ್ ಪರಿಸ್ಥಿತಿಯಲ್ಲೂ ನನಗೆ ಮನೆಗೆ ಕರೆದು ಸ್ಪರ್ಧಾತ್ಮಕ ತರಬೇತಿ ನೀಡಿ ಪ್ರೋತ್ಸಾಹಿಸಿದ ಆರ್ಯಭಟ ಅಕಾಡೆಮಿಯ ಅನಿಲ್ ಸರ್ ಹಾಗೂ ಶಿಕ್ಷಕ ಬಳಗವನ್ನು ಎಂದಿಗೂ ಮರೆಯುವಂತಿಲ್ಲ. ಬಡತನ ಕೇವಲ ನೋವನ್ನಷ್ಟೇ ನೀಡುವುದಿಲ್ಲ, ಅನುಭವದ ಪಾಠಗಳನ್ನು ನೀಡಿ ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಪರಿವರ್ತಿಸಿ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ. ಸತತ ಪರಿಶ್ರಮ, ಅಚಲ ವಿಶ್ವಾಸದಿಂದ ಪ್ರಯತ್ನಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ’ ಎಂಬುದು ಸಾಧಕ ಬಸವರಾಜ ಬಾಗೇವಾಡಿ ಅವರ ಅನುಭವದ ಮಾತುಗಳು.

ಬಸವರಾಜ ಬಾಗೇವಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.