ADVERTISEMENT

ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರೆ ಆರಂಭ

ಬೃಹತ್ ಜಾನುವಾರು ಜಾತ್ರೆ, ವಸ್ತು ಪ್ರದರ್ಶನ– ಮಾರಾಟಕ್ಕೆ ಸಕಲ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 2:25 IST
Last Updated 1 ಡಿಸೆಂಬರ್ 2025, 2:25 IST
ಹೊರ್ತಿಯ ಆರಾಧ್ಯ ದೈವ ರೇವಣಸಿದ್ಧೇಶ್ವರರು
ಹೊರ್ತಿಯ ಆರಾಧ್ಯ ದೈವ ರೇವಣಸಿದ್ಧೇಶ್ವರರು   

ಹೊರ್ತಿ: ಉತ್ತರ ಕರ್ನಾಟಕದಲ್ಲಿ ವರ್ಷ ಮೊದಲ ಜಾತ್ರೆ ಆಗಿರುವ 'ಜಾತ್ರೆಗಳ ಹೆಬ್ಬಾಗಿಲು' ಎಂದು ಕರೆಯುವ ಹೊರ್ತಿಯ ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವವು ಭಾನುವಾರದಿಂದ ಆರಂಭವಾಗಿದೆ.

ಈಗಾಗಲೇ ಬೃಹತ್ ಜಾನುವಾರು ಮಾರಾಟ ಮತ್ತು ವಸ್ತು ಪ್ರದರ್ಶನ–ಮಾರಾಟವೂ ನಡೆಯತ್ತಿದ್ದು. ಡಿ.4ರವರೆಗೆ 5ದಿನಗಳವರೆಗೆ ಜರುಗುವ ಜಾತ್ರೆಗೆ ಕರ್ನಾಟಕದ ವಿವಿಧೆಡೆಗಳಿಂದ ಮತ್ತು ಆಂದ್ರಪ್ರದೇಶ, ಮಹಾರಾಷ್ಟ್ರ ಮತ್ತು ವಿವಿಧ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದು ವಿಶೇಷ.

‘ಐದು ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆಯಲಿವೆ. ಇಂಚಗೇರಿ ಮಾರ್ಗದ ರಸ್ತೆ ಅಕ್ಕ-ಪಕ್ಕದ 35 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಜನ ಹಾಗೂ ಜಾನುವಾರುಗಳಿಗೆ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆ ಜಾತ್ರಾ ಸಮಿತಿಯಿಂದ ಮಾಡಲಾಗಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗಾಗಿ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ' ಎಂದು ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಶಿ.ಖೈನೂರ ತಿಳಿಸಿದರು.

ADVERTISEMENT

‘ದೇವಸ್ಥಾನದ ಆವರಣದ ಉತ್ತರಕ್ಕೆ ಈಗಾಗಲೇ ಒಂದು 108 ಅಡಿ ಎತ್ತರದ ರಾಜಗೋಪುರ ನಿರ್ಮಾಣಗೊಂಡಿದೆ. ಈ ದೇವಸ್ಥಾನದ ಇನ್ನೂ ಮೂರು ಕಡೆ ಅಲ್ಲದೇ ಅಲ್ಲದೇ ಬೃಹತ್ ಪ್ರಮಾಣದ ಶಿವಲಿಂಗ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೃಹತ್ ಶಿವಲಿಂಗದಲ್ಲಿ 12ಜ್ಯೋತಿರ್ಲೀಂಗಗಳ ಸ್ಥಾಪನೆ ಮತ್ತು ಸುತ್ತಲೂ ತ್ರಿಕೋಟಿ ಲಿಂಗಗಳ ಸ್ಥಾಪನೆ. ಶಿವಲಿಂಗದ ಇನ್ನೂ ಮೂರು ಕಡೆ 108ಅಡಿ ಎತ್ತರದ ರಾಜಗೋಪುರ ನಿರ್ಮಾಣದ ಗುರಿಹೊಂದಲಾಗಿದೆ’ ಎಂದು ತಿಳಿಸಿದರು.

ಐತಿಹಾಸಿಕ ಹಿನ್ನೆಲೆ: ಹೊರ್ತಿಯ ಪುರಾತನ ಹೆಸರು ಸಿದ್ಧಪುರ ಇದು ಸಿದ್ಧರು ವಾಸಿಸುವ ಪವಿತ್ರ ಕ್ಷೇತ್ರ. ಅನೇಕ ಸಿದ್ದ ಪುರುಷರು ತಪಸ್ಸು ಮಾಡುವಾಗ ಮಾಯಿ ಮಾಳಮ್ಮ ಉಪಟಳದಿಂದ ತಪೋ ಭಂಗ ಉಂಟು ಮಾಡುತ್ತಿದ್ದಾಗ, ಸಿದ್ಧ ಪುರುಷರೆಲ್ಲರೂ ರೇವಣಸಿದ್ಧನನ್ನು ನೆನೆದರು. ರೇವಣಸಿದ್ಧರು ಪ್ರತ್ಯೇಕ್ಷರಾಗಿ ಆದಿಮಾಯೆಯ ಗರ್ವ ಹರಣ ಮಾಡಿ ದುಷ್ಟ ಶಕ್ತಿ ಸಂಹಾರಕರಾಗಿ ಶಿಷ್ಟರಿಗೆ ರಕ್ಷಣೆ ನೀಡಿದರು.

ಮಾಳಮ್ಮ ಮಾಯೆಯಲ್ಲಿದ್ದ ಅಹಂಕಾರವನ್ನು ತೊಲಗಿಸಿ ಆಕೆಗೆ ಶಿವತತ್ವ ಭೋಧನೆ ನೀಡುವದರ ಮೂಲಕವಾಗಿ ತಪ್ಪಿನ ಅರಿವನ್ನು ಮೂಡಿಸಿದರು. ಅವರಲ್ಲಿರುವ ಶಕ್ತಿಯ ಮೂಲಕವಾಗಿ ಭಕ್ತಿ ಭಾವವನ್ನು ಮೂಡಿಸುವದರೊಂದಿಗೆ ಪರಮ ಭಕ್ತಳಾಗಿ ಸ್ವೀಕರಿಸಿದರು.

ಅಲ್ಲದೆ ಅವಳಿಗಾಗಿ ದೇವಸ್ಥಾನದ ಎದುರಿನ ಬೆಟ್ಟದಲ್ಲಿ ನೆಲೆಸುವಂತೆ ಅವಕಾಶವನ್ನು ಕಲ್ಪಿಸಿದರು. ಆದ್ದರಿಂದ ಆ ಬೆಟ್ಟಕ್ಕೆ ಮಾಳಮ್ಮನ ಗುಡ್ಡ ಎಂದು ಕರೆಯುವರು.

ಅಂದಿನಿಂದ ಇಂದಿನವರೆಗೆ ಶ್ರಾವಣ ಮಾಸದ ಮೂರನೆಯ ಸೋಮವಾರ ಹಾಗೂ ಛಟ್ಟಿ ಅಮವಾಸ್ಯೆಯ 11ನೆಯ ದಿನ ರೇವತಿ ನಕ್ಷತ್ರದಂದು (ಡಿ.1ರಂದು) ರೇವಣಸಿದ್ಧೇಶ್ವರರು ಭಕ್ತರಿಗೆ ದರ್ಶನ ನೀಡುವುದಕ್ಕಾಗಿ ನಂದಿಕೋಲ-ಪಲ್ಲಕ್ಕಿ ಮೆರವಣಿಗೆಯೊಂದಿಗೆ ಗುಡ್ಡದ ಮೇಲಿರುವ ಪರಮ ಭಕ್ತಳೆನಿಸಿಕೊಂಡ ಮಾಳಮ್ಮನ ದರ್ಶನದ ದಿನಕ್ಕೆ ದೇವರು ಗುಡ್ಡ ಏರುವ ದಿನದಂದು ಹೊರ್ತಿಯ ಜಾತ್ರೆಯು ಆದ್ದೂರಿಯಾಗಿ ನಡೆಯುತ್ತದೆ.

ಹೊರ್ತಿಯ ಶ್ರೀರೇವಣಸಿದ್ಧೇಶ್ವರ ಹಳೆ ಗುಡಿಯ ಆವರಣದಲ್ಲಿ108ಅಡಿ ಎತ್ತರದ ರಾಜಗೋಪುರ ಮತ್ತು ಪಕ್ಕದಲ್ಲಿರುವ 12ಶತಮಾನದ ಹೊರ್ತಿ ರೇವಣಸಿದ್ದೇಶ್ವರ ದೇವಾಲಯದ ವಿಹಂಗಮ ದೃಶ್ಯ.
ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಹಳೆ ಗುಡಿಯ ಆವರಣದಲ್ಲಿ ಭರದಿಂದ ನಡೆದಿರುವ136 ಅಡಿ ಎತ್ತರದ ಬೃಹತ್ ಶಿವಲಿ೦ಗ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ನಡೆದಿದೆ.
ಹೊರ್ತಿ ಗ್ರಾಮದ ಆರಾಧ್ಯ ದೇವ ರೇವಣಸಿದ್ಧೇಶ್ವರರ ಜಾತ್ರಾ ಮಹೋತ್ಸವವು ಭಾನುವಾರದಿಂದ ಆರಂಭಗೊಂಡಿದ್ದು ಡಿ.4ರವರೆಗೆ 5ದಿನಗಳವರೆಗೆ ನಡೆಯಲಿದೆ
ಅಣ್ಣಪ್ಪ ಶಿ.ಖೈನೂರ ಶ್ರೀ ರೇವಣಸಿದ್ಧೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.