ಚಡಚಣ: ರಾಜ್ಯದ ಗಡಿ ಅಂಚಿನಲ್ಲಿರುವ ಚಡಚಣ ಪಟ್ಟಣವು ಪ್ರಮುಖ ವ್ಯಾಪಾರಿ ಕೇಂದ್ರ. ಆದರೆ, ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿ, ದಶಕ ಕಳೆದರೂ ದುರಸ್ತಿ ಭಾಗ್ಯ ಕಂಡಿಲ್ಲ.
ರಾಜ್ಯದ ವಿವಿಧ ನಗರಗಳಿಗೆ ಹೋಗಬೇಕಾದರೆ ಸುಮಾರು 30 ಹಳ್ಳಿಗಳ ಜನರು ಚಡಚಣದ ಮೂಲಕವೇ ಹಾಯ್ದು ಹೋಗಬೇಕು. ಆದರೆ, ಈ ತಾಲ್ಲೂಕಿನ ಬಹುತೇಕ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲ ತಗ್ಗು, ಗುಂಡಿಗಳಿಂದ ಕೂಡಿವೆ. ಈ ರಸ್ತೆಗಳ ಮೂಲಕ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಗುಂಡಿ ತಪ್ಪಿಸಲು ಹೋಗಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ.
ಹಲವು ಗ್ರಾಮಗಳ ಗ್ರಾಮಸ್ಥರು ಸುತ್ತುವರೆದು ಚಡಚಣ ಪಟ್ಟಣಕ್ಕೆ ಆಗಮಿಸಬೇಕಾಗಿದೆ. ಇನ್ನೂ ತಾಲ್ಲೂಕಿನ ಹಲವಾರು ಗ್ರಾಮಗಳ ಜನರು ವ್ಯಾಪಾರ ವಹಿವಾಟಿಗಾಗಿ ನೆರೆ ಮಹಾರಾಷ್ಟ್ರದ ಜತ್, ಮಂಗಳವೇಡೆ, ಸೋಲಾಪುರ ಶಹರಗಳತ್ತ ಮುಖ ಮಾಡುತ್ತಿದ್ದಾರೆ.
ಪಟ್ಟಣದಲ್ಲಿ ರಾಜ್ಯ-ಅಂತರ ರಾಜ್ಯದಲ್ಲಿಯೇ ಹೆಸರುವಾಸಿಯಾದ ಬಾಹುಬಲಿ ಮುತ್ತಿನ ಜವಳಿ ಅಂಗಡಿ, ಸರಾಫ್ ಬಜಾರ, ಕಿರಾಣಿ ಅಂಗಡಿಗಳು ಇವೆ. ಜಾನುವಾರು ಸಂತೆ ಪ್ರಸಿದ್ಧವಾಗಿದೆ. ಪ್ರತಿ ದಿನ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುವ ಈ ಪಟ್ಟಣದಿಂದ ಸರ್ಕಾರಕ್ಕೆ ಹೆಚ್ಚು ತೆರಿಗೆ ಪಾವತಿಯಾಗುತ್ತದೆ.
ಚಡಚಣದಿಂದ ಹತ್ತಳ್ಳಿ –ಉಮರಾಣಿಗೆ ಸಂಪರ್ಕಿಸುವ ರಸ್ತೆ, ಚಡಚಣದಿಂದ ಗೋಡಿಹಾಳ, ಲೋಣಿ, ಏಳಗಿ, ಹಲಸಂಗಿ ರಸ್ತೆ, ಶಿರಾಡೋಣದಿಂದ ರೇವತಗಾಂವ ಗ್ರಾಮದವರೆಗಿನ ರಸ್ತೆ, ಚಡಚಣ-ನೀವರಗಿಯಿಂದ ಉಮರಜ ಗ್ರಾಮದ ವರೆಗಿನ ರಸ್ತೆ, ಚಡಚಣದಿಂದ ಕಂಚನಾಳ, ಕೆರೂರ, ತದ್ದೇವಾಡಿ, ಮರಗೂರ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿವೆ.
ಚಡಚಣದಿಂದ ಮಹಾರಾಷ್ಟ್ರದ -ಸೊಡ್ಡಿ, ಸೋನಗಿ, ಸಲಗರ, ಉಮದಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಕಿತ್ತು ಹೋಗಿದ್ದರೂ ಸಂಬಂಧಿಸಿದ ಇಲಾಖೆಯಾಗಲಿ, ಜನಪ್ರತಿನಿಧಿಗಳಾಗಲಿ ಈ ರಸ್ತೆ ದುರಸ್ತಿಗೆ ಮುಂದಾಗದಿರುವುದು ದುರದೃಷ್ಟಕರ.
ಲೋಣಿ(ಬಿಕೆ) ಗ್ರಾಮದಿಂದ ಚಡಚಣ ವರೆಗಿನ ಸುಮಾರು 10 ಕಿ.ಮೀ ರಸ್ತೆ ಸಂಪೂರ್ಣವಾಗಿ ಕಿತ್ತು ಹೋಗಿರುವುದರಿಂದ ಬರಡೋಲ ಮಾರ್ಗವಾಗಿ ಸುಮಾರು 17 ಕಿ.ಮೀ ಸುತ್ತುವರೆದು ಬರುವ ಪರಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಸ್ತೆ ದುರಸ್ತಿಗೊಳಿಸಬೇಕು-ಜಗದೀಶ ಜಿತ್ತಿ ಗ್ರಾ.ಪಂ.ಮಾಜಿ ಸದಸ್ಯ ಲೋಣಿ(ಬಿ.ಕೆ)
ಚಡಚಣ ತಾಲ್ಲೂಕಿನ ಬಹುತೇಕ ರಸ್ತೆಗಳೆಲ್ಲ ಕಿತ್ತು ಹೋಗಿವೆ. ವಾಹನ ಚಾಲಕರು ಗುಂಡಿ ತಪ್ಪಿಸಲು ಅಡ್ಡಾದಿಡ್ಡಿಯಾಗಿ ಸಂಚರಿಸುವುದರಿಂದ ಅಫಗಾತಗಳು ಹೆಚ್ಚುತ್ತಿವೆರಾಜು ಗೋರೆ. ಶಿರಾಡೋಣ
ಚಡಚಣ ಪಟ್ಟಣಕ್ಕೆ ಸಂಪರ್ಕಿಸುವ ಹದಗೆಟ್ಟ ರಸ್ತೆಗಳ ದುರಸ್ಥಿ ಡಾಂಬರೀಕರಣಕ್ಕಾಗಿ ಕ್ರೀಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ತಕ್ಷಣ ರಸ್ತೆಗಳ ದುರಸ್ತೆ ಕೈಗೊಳ್ಳಲಾಗುವುದು.ವಿಠ್ಠಲ ಕಟಕದೋಂಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.