ಚಡಚಣ: ಜಾತಿ, ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಹಿಂದು ಸಮಾಜವನ್ನು ಒಡೆಯುವ ಸಮಾಜ ಘಾತುಕ ಶಕ್ತಿಗಳ ನಡುವೆ ಹಿಂದುಗಳು ಒಗ್ಗಟ್ಟಾಗಿ ಜಾಗೃತಗೊಳ್ಳಬೇಕು ಎಂದು ಆರ್.ಎಸ್.ಎಸ್ ನ ಕರ್ನಾಟಕ ಉತ್ತರ ಪ್ರಾಂತ ಬೌದ್ಧಿಕ ಪ್ರಮುಖ ರಾಮಚಂದ್ರ ಏಕಡೆ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಾಗೂ ವಿಜಯದಶಮಿ ನಿಮಿತ್ಯ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಲಾದ ಆರ್.ಎಸ್.ಎಸ್.ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ಜ್ಯಾತ್ಯತೀತ ಸಂಘ, ನಾವು ಹಿಂದು, ನಾವು ಒಂದು ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜದಲ್ಲಿನ ದ್ವೇಷ, ಅಸೂಯೆ, ಮೇಲು ಕೀಳು ಎಂಬ ಭಾವನೆಯನ್ನು ಅಳಿಸಿ, ದೇಶ ಮೊದಲು ಎಂಬ ಭಾವನೆಯನ್ನು ಮೂಡಿಸುತ್ತಿದೆ ಎಂದರು.
ಸಂಘ ಆಪತ್ಕಾಲದಲ್ಲಿ ಸಮಾಜ ಹಾಗೂ ಜನರ ರಕ್ಷಣೆಯೊಂದಿಗೆ ದೇಶದ ರಕ್ಷಣೆಯಲ್ಲಿ ಪಾಲ್ಗೊಳ್ಳುತ್ತದೆ,ಕುಟುಂಬ ವರ್ಧನೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಂದೋಲನ, ನಾಗರಿಕ ಶಿಷ್ಟಾಚಾರ ಹಾಗೂ ಪರಿಸರ ಕಾಳಿಜಿಯ ಧ್ಯೇಯವನ್ನಿಟ್ಟುಕೊಂಡಿದೆ, ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಆರ್.ಎಸ್.ಎಸ್ ಗೆ ಸೇರ್ಪಡೆಯಾಗಬೇಕು ಎಂದರು.
ಸಾನಿಧ್ಯ ವಹಿಸಿದ ಹಾವಿನಾಳ ಚರಂತಿಮಠದ ವಿಜಯಮಹಾಂತೇಶ ಶಿವಾಚಾರ್ಯ ಮಾತನಾಡಿ, ನಾವು ಈಗ ಬಹು ಸಂಖ್ಯಾತರು, ಒಂದು ವೇಳೆ ಅನ್ಯ ಕೋಮಿನವರು ಬಹುಸಂಖ್ಯಾತರಾದರೆ ನಮ್ಮ ಸ್ಥಿತಿ ಏನು, ಅದಕ್ಕಾಗಿ ಮುಂದಿನ ಪಿಳಿಗೆ ಕನಿಷ್ಟ ನಾಲ್ಕು ಮಕ್ಕಳನ್ನಾದರೂ ಹೆರಬೇಕು ಎಂದರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಪ್ರಮೂಖ ಬೀದಿಗಳಲ್ಲಿ ಆರ್.ಎಸ್.ಎಸ್‌ನ ಗಣವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು. ಪಥ ಸಂಚಲನದಲ್ಲಿ ಸುಮಾರು 1500 ಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಂಡಿದ್ದರು
ಆರ್.ಎಸ್.ಎಸ್ ನ ಚಡಚಣ ತಾಲ್ಲೂಕು ಕಾರ್ಯನಿರ್ವಾಹಕ ಸಂಜೀವ ಜಾಲಗೇರಿ, ಉಮೇಶ ಕಾರಜೋಳ, ಸಂಜೀವ ಐಹೊಳಿ, ಕಾಮತುಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಭೀಮಾಶಂಕರ ಬಿರಾದಾರ, ವಿರಾಜ ಪಾಟೀಲ, ಶಿವಾನಂದ ಮಕಣಾಪೂರ, ರಾಘವೇಂದ್ರ ಕಾಪಸೆ, ಚಂದು ನಿರಾಳೆ, ರಾಮ ಅವಟಿ, ರಾಜು ಝಳಕಿ, ನಾಗರಾಜ ನಿರಾಳೆ, ರಮೇಶ ಜತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.