ಆಲಮೇಲ: ರುಕುಂಪುರ ರಸ್ತೆ ಅತಿಕ್ರಮಣ ತೆರವಿಗಾಗಿ ಪ್ರಗತಿಪರ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಧರಣಿ ಶನಿವಾರ 4ನೇ ದಿನ ಪೂರೈಸಿತು.
ಶನಿವಾರ ಪ್ರತಿಭಟನೆ ನಿರತರು ಅರೆಬೆತ್ತಲೆಯಾಗಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಪ್ರಮುಖ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತ ನಡೆದರು.
ಅರೆಬೆತ್ತಲೆ ಮೆರವಣಿಗೆಯಲ್ಲಿ ಬಸವರಾಜ ತೆಲ್ಲೂರ, ಪ್ರಭು ವಾಲಿಕಾರ, ಸಂಜೀವಕುಮಾರ ಯಂಟಮಾನ, ಹರೀಶ ಯಂಟಮಾನ, ಶಿವಾನಂದ ಜಗತಿ, ಶ್ರೀಶೈಲ ಭೋವಿ, ಶಿವಾನಂದ ತಳವಾರ, ಸೋಮನಾಥ ಮೇಲಿನಮನಿ, ಬಸವರಾಜ ಹೂಗಾರ, ಅಪ್ಪು ಶೆಟ್ಟಿ, ಚಂದು ಹಳೀಮನಿ, ಶಿವಕುಮಾರ ಮೇಲಿನಮನಿ ಮೊದಲಾದವರು ಭಾಗವಹಿಸಿದ್ದರು.
ಮಾಜಿ ಶಾಸಕ ಭೇಟಿ: ಸತ್ಯಾಗ್ರಹ ಟೆಂಟ್‌ಗೆ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಬೆಂಬಲ ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ನಿಮ್ಮ ಹೋರಾಟದಲ್ಲಿ ನಾನೂ ಕೈಗೋಡಿಸುತ್ತೇನೆ, ಎಲ್ಲ ರೀತಿಯ ಸಹಕಾರ ನೀಡುವೆ ಎಂದರು.
ಜಿಲ್ಲಾಧಿಕಾರಿಗೆ ಮನವಿ: ಶುಕ್ರವಾರ ಧರಣಿ ನಿರತ ಮುಖಂಡರ ಒಂದು ತಂಡ ಆಲಮೇಲ ದೇಶಮುಖರಾದ ನಿರಂಜನ ಶಂಕರರಾವ್ ದೇಶಮುಖ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಆನಂದ ಅವರನ್ನು ಭೇಟಿ ಮಾಡಿತು.
ಪೀರಗಾಲೀಬಸಾಬ ಉರುಸ್ ನ ವೈಶಿಷ್ಟ, ದರ್ಗಾರಸ್ತೆ ಅತಿಕ್ರಮಣ ಹಾಗೂ ದಾನರೂಪದಲ್ಲಿ ಜಾಗ ನೀಡಿದ ಎಲ್ಲ ವಿವರಗಳನ್ನು ಜಿಲ್ಲಾಧಿಕಾರಿಗೆ ವಿವರಿಸಿದರು. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಪ್ರಭು ವಾಲಿಕಾರ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.