ADVERTISEMENT

ಸಾಹೇಬ್ರು ಬಂದ್ರೋ..; ಗುದ್ದಲಿ–ಸನಿಕೆ ಬಿರುಸಾಗಲಿ..!

ಬತ್ತಿದ ಕೆರೆಯಂಗಳಕ್ಕೆ ಸಚಿವ ಆರ್‌.ವಿ.ದೇಶಪಾಂಡೆ ಭೇಟಿ ನೀಡುತ್ತಿದ್ದಂತೆ ಕೇಳಿ ಬಂದ ಮಾತುಗಳಿವು...

ಡಿ.ಬಿ, ನಾಗರಾಜ
Published 20 ಮೇ 2019, 2:28 IST
Last Updated 20 ಮೇ 2019, 2:28 IST
ನಾಗಠಾಣ ಕೆರೆಯಂಗಳದಲ್ಲಿ ಭಾನುವಾರ ಹೂಳೆತ್ತುತ್ತಿದ್ದ ಸುಜ್ಞಾನಿ ಪ್ರಕಾಶ ಹಳ್ಳಿ ಎಂಬಾಕೆ ಬಳಿ, ನಾನು ಯಾರು ಹೇಳು ಎಂದ ಎಂ.ಬಿ.ಪಾಟೀಲಗೆ, ರಾಜು ಆಲಗೂರ ಅಲ್ಲವೇ ಎಂದು ಆಕೆ ಪ್ರತಿಕ್ರಿಯಿಸಿದ್ದಕ್ಕೆ, ಗೃಹ ಸಚಿವರು ಸಹ ನಗೆಗಡಲಲ್ಲಿ ತೇಲಿದ ಪರಿಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ನಾಗಠಾಣ ಕೆರೆಯಂಗಳದಲ್ಲಿ ಭಾನುವಾರ ಹೂಳೆತ್ತುತ್ತಿದ್ದ ಸುಜ್ಞಾನಿ ಪ್ರಕಾಶ ಹಳ್ಳಿ ಎಂಬಾಕೆ ಬಳಿ, ನಾನು ಯಾರು ಹೇಳು ಎಂದ ಎಂ.ಬಿ.ಪಾಟೀಲಗೆ, ರಾಜು ಆಲಗೂರ ಅಲ್ಲವೇ ಎಂದು ಆಕೆ ಪ್ರತಿಕ್ರಿಯಿಸಿದ್ದಕ್ಕೆ, ಗೃಹ ಸಚಿವರು ಸಹ ನಗೆಗಡಲಲ್ಲಿ ತೇಲಿದ ಪರಿಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ನಾಗಠಾಣ (ವಿಜಯಪುರ):

‘ಏಯ್... ಸಾಹೇಬ್ರು ಗಾಡಿಗಳು ಬಂದ್ವೋ. ನಿಮ್‌ ಗುದ್ದಲಿ–ಸನಿಕೆ ಕೊಂಚ ಬಿರುಸಾಗಲಿ ಒಂದ್‌ ಅರ್ಧ ತಾಸು...’

‘ಅಟೆಂಡೆನ್ಸ್‌ ಆ ಮೇಲೆ ತಗಳ್ರೋ. ಈಗ ಎಲ್ರನ್ನೂ ಕೆಲ್ಸಕ್ಕೆ ಹಚ್ರೋ..!’

ADVERTISEMENT

‘ಏಯ್‌... ನಿಮ್‌ ಕೆಲ್ಸ ಬಿರುಸಾಗಿಲ್ವಲ್ರೋ. ಒಂಚೂರ್‌ ನೀರ್‌ ಕುಡ್ಕೊಳ್ರೋ. ಬಡಾ ಬಡಾ ಕೆಲಸ ಮಾಡ್ರೋ...’

‘ಅಕ್ಕೋರೆ ಹಿಂಗ ಕುಂತರೆ ಹೆಂಗ್ರೀ. ಬೇಗ ಬೇಗ ಮೇಲೇಳ್ರೀ. ಜರಾ ಬಿರುಸಾಗಿ ಕೈ ಆಡ್ಸಿ..’

ಬರ ಪರಿಹಾರ ಕಾಮಗಾರಿಗಳ ವೀಕ್ಷಣೆಗಾಗಿ ವಿಜಯಪುರ ಜಿಲ್ಲೆಗೆ ಭಾನುವಾರ ಭೇಟಿ ನೀಡಿದ್ದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ, ಗೃಹ ಸಚಿವ ಎಂ.ಬಿ.ಪಾಟೀಲ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್‌ಕರ್‌ ನೇತೃತ್ವದ ಅಧಿಕಾರಿಗಳ ತಂಡದ ಸಾಲು ಸಾಲು ವಾಹನಗಳು ಗ್ರಾಮದ ಕೆರೆಯಂಗಳ ಪ್ರವೇಶಿಸುತ್ತಿದ್ದಂತೆ, ಸ್ಥಳದಲ್ಲಿದ್ದ ಸರ್ಕಾರಿ ಸಿಬ್ಬಂದಿಯಿಂದ ಕೇಳಿ ಬಂದ ಮಾತುಗಳಿವು.

ಕೆರೆಯಿಂದ ಅನತಿ ದೂರದಲ್ಲೇ ವಾಹನಗಳ ಸರತಿ ಸಾಲು ಗೋಚರಿಸುತ್ತಿದ್ದಂತೆ, ಸ್ಥಳೀಯ ಅಧಿಕಾರಿಗಳ ಸಮೂಹ ಎಚ್ಚೆತ್ತುಕೊಂಡು, ಕೆರೆ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದ ನರೇಗಾ ಕೂಲಿ ಕಾರ್ಮಿಕರಿಗೆ ಮೇಲಿನಂತೆ ಹುಕುಂ ಹೊರಡಿಸಿತು.

ನಿರುತ್ತರಿಗಳಾದ ಅಧಿಕಾರಿ ಸಮೂಹ..!

ಹೂಳೆತ್ತುವ ಕಾಮಗಾರಿ ನಡೆದಿದ್ದ ಕೆರೆಯಂಗಳಕ್ಕೆ ಸಚಿವತ್ರಯರು ತಮ್ಮ ಸರ್ಕಾರಿ ವಾಹನಗಳಲ್ಲಿ ಬಂದಿಳಿದರು. ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಹೆಜ್ಜೆ ಹಾಕಿದರು. ಇವರ ಬೆನ್ನಿಗೆ ಅಧಿಕಾರಿ ವರ್ಗವೂ ಸಾಥ್‌ ನೀಡಿತು.

ಈ ಕೆರೆಯ ಹೂಳನ್ನು ಯಾವಾಗ ತೆಗೆದಿದ್ದೀರಿ ಎಂದು ಸಚಿವ ದೇಶಪಾಂಡೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಯಾರೊಬ್ಬರೂ ಉತ್ತರಿಸುವ ಗೋಜಿಗೆ ಹೋಗದೆ ನಿರುತ್ತರಿಗಳಾದರು.

ಸಚಿವರ ಸನಿಹದಲ್ಲೇ ಇದ್ದ ನಾಗಠಾಣ ಗ್ರಾಮದ ಸುಜ್ಞಾನಿ ಪ್ರಕಾಶ ಹಳ್ಳಿ ‘ಸಿದ್ದರಾಮಯ್ಯ ಸರ್ಕಾರ ಇದ್ದಾಗ 2016ರಲ್ಲಿ ಒಮ್ಮೆ ಹೂಳು ತೆಗೆದಿದ್ದೆವು’ ಎಂದಷ್ಟೇ ಪ್ರತಿಕ್ರಿಯಿಸಿದರು.

ಕೆರೆಯ ವಿಸ್ತೀರ್ಣ ಎಷ್ಟಿದೆ ? ಎಂದು ದೇಶಪಾಂಡೆ ಕೇಳುತ್ತಿದ್ದಂತೆ ಅಧಿಕಾರಿಗಳು ಮತ್ತೊಮ್ಮೆ ನಿರುತ್ತರಿಗಳಾದರು. ಸುತ್ತಲೂ ನೆರೆದಿದ್ದ ಯುವ ಕೂಲಿಕಾರರಲ್ಲೊಬ್ಬಾತ, ‘ಏಯ್ ನಮ್ಮಪ್ಪ ಆ ಕಡೆ ಅವ್ನೇ. ಅವ್ನ ಕರೀರೋ. ಕೆರೆಯ ಇತಿಹಾಸ ಹೇಳ್ತಾವ್ನೇ’ ಅನ್ನುತ್ತಿದ್ದಂತೆ, ಮೂರ್ನಾಲ್ಕು ಮಂದಿ ಯುವಕರ ತಂಡ ಹಿರಿಯರೊಬ್ಬರನ್ನು ಕರೆ ತರಲು ಮುಂದಾಯಿತು.

ಕೆರೆ ಯಾವಾಗ ತುಂಬಿತ್ತು ಎಂದು ಸಚಿವರು ಪ್ರಶ್ನಿಸುತ್ತಿದ್ದಂತೆ, ‘ನಮ್‌ ಭಾಗಕ್ಕೆ ಮಳೆಯೇ ಆಗಿಲ್ಲ. ಕೆರೆಗೆ ನೀರ್‌ ಒಗಿಸ್ರೀ. ಇಲ್ದಿದ್ರೇ ಇಲ್ಲಿಂದ ಹೋಗಾಕ ನಿಮ್ಮನ್‌ ಬಿಡಲ್ಲ’ ಎಂದು ಸುಜ್ಞಾನಿ ತಮ್ಮ ಬೇಡಿಕೆ ಸಲ್ಲಿಸಿದರು.

ಮಧ್ಯ ಪ್ರವೇಶಿಸಿದ ಗೃಹ ಸಚಿವ ಎಂ.ಬಿ.ಪಾಟೀಲ ‘ಇಲ್ಲಿ ನೀರಿನ ಹೈರಾಣ ಭಾಳ ಐತ್ರಿ. ಎರಡ್‌ ದಿನದಲ್ಲಿ ನೀರ್‌ ಬಿಡ್ತೀವಿ’ ಎನ್ನುತ್ತಿದ್ದಂತೆ ನೆರೆದಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿತು.

ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ‘ನಮ್‌ ಎಂ.ಬಿ. ಹೇಳಿದ್ದಾನೆ. ಮುಂದಿನ ವರ್ಷ ಈ ಕೆರೆ ಸಂಪೂರ್ಣ ತುಂಬ್ತೀವಿ. ರೇಷನ್‌ ನಿಮಗೆಲ್ಲಾ ಸರಿಯಾಗಿ ಸಿಗುತ್ತಿದೆಯಾ ? ನಿಮ್‌ ಮಕ್ಕಳು ಶಾಲೆಗೆ ಹೋಗ್ತಿದ್ದಾರಾ ? ಊರಲ್ಲಿ ಕುಡಿಯುವ ನೀರಿಗೆ ತ್ರಾಸಿಲ್ವಾ ಎಂದು ಪ್ರಶ್ನಿಸಿದರು.

ನೀರಿನ ಸಮಸ್ಯೆ ಐತ್ರಿ ಎಂದು ಒಂದಿಬ್ಬರು ಹೇಳುತ್ತಿದ್ದಂತೆ, ದೇಶಪಾಂಡೆ ಪಿಡಿಒ ಕರೆಸಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಆರ್,ರಾಠೋಡ ಸಚಿವರ ಎದುರಿಗೆ ಬಂದು ಕೂಲಿಕಾರರನ್ನು ಕೇಳುತ್ತಿದ್ದಂತೆ ಎಲ್ರೂ ಸಮಸ್ಯೆಯಿಲ್ಲ ಎಂದು ಉತ್ತರಿಸಿದರು.

ನಾ ಯಾರ್ ಗೊತ್ತಾ..?

ಕೆರೆಗೆ ನೀರು ತುಂಬುವ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ.ಪಾಟೀಲ ಕೆರೆಯಂಗಳದಲ್ಲೇ ನೆರೆದಿದ್ದವರಿಗೆ ಮಾಹಿತಿ ಒದಗಿಸುತ್ತಿದ್ದರು. ಈ ಸಂದರ್ಭ ಸುಜ್ಞಾನಿ ಪ್ರಕಾಶ ಹಳ್ಳಿ ಎಂಬಾಕೆ ನಮ್ಮೂರ ಕೆರೆಗೆ ನೀರು ತುಂಬುವಲ್ಲಿ ನಮ್‌ ಸೋಮು ಭಾಳ ಶ್ರಮಪಟ್ಟವ್ನೇ ಎಂದರು.

ಆಗ ಎಂ.ಬಿ.ಪಾಟೀಲ ಯವ್ವಾ ನೀರು ತುಂಬಿಸಿದ್ದು ನಾನು ಎನ್ನುತ್ತಿದ್ದಂತೆ, ಸುಜ್ಞಾನಿ ಮೊದಲು ನಮ್ಮ ಸೋಮು. ಆಮೇಲೆ ನೀವು ಎಂದರು.

ಪಾಟೀಲ ನಾ ಯಾರು ಹೇಳು ಎಂದು ಪ್ರಶ್ನಿಸುತ್ತಿದ್ದಂತೆ, ಸುಜ್ಞಾನಿ ರಾಜು ಆಲಗೂರ ಎಂದು ಉತ್ತರಿಸಿದರು. ಮೌನಕ್ಕೆ ಶರಣಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಸೇರಿದಂತೆ, ಸ್ವತಃ ಎಂ.ಬಿ.ಪಾಟೀಲ, ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.