ADVERTISEMENT

ಸಂಸ್ಕೃತಿ ಉತ್ಸವಕ್ಕೆ ಕಗ್ಗೋಡ ಸಕಲ ಸಜ್ಜು..!

ಭಾನುವಾರ ದಿನವಿಡಿ ಬಿರುಸಿನ ಸಿದ್ಧತೆ; ಅಂತಿಮ ಸ್ಪರ್ಶ ನೀಡಿದ ಕಲಾವಿದರು, ಕೆಲಸಗಾರರು

ಡಿ.ಬಿ, ನಾಗರಾಜ
Published 23 ಡಿಸೆಂಬರ್ 2018, 16:52 IST
Last Updated 23 ಡಿಸೆಂಬರ್ 2018, 16:52 IST

ಕಗ್ಗೋಡ:ಭಾರತ ವಿಕಾಸ ಸಂಗಮ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ–5ರ ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು, ಭಾನುವಾರ ದಿನವಿಡಿ ಅಂತಿಮ ಹಂತದ ಕೆಲಸಗಳು ಬಿರುಸಿನಿಂದ ನಡೆದವು.

ಉತ್ಸವ ಆರಂಭಕ್ಕೂ ಮುನ್ನಾ ದಿನವೇ 20000ಕ್ಕೂ ಹೆಚ್ಚು ಜನರು ಕಗ್ಗೋಡಗೆ ಭೇಟಿ ನೀಡಿ, ಸಿದ್ಧತೆಗಳನ್ನು ವೀಕ್ಷಿಸಿದರು. ಇದೇ ಸಂದರ್ಭ 12 ಎಕರೆಯಲ್ಲಿನ ವಿವಿಧ ಕೃಷಿ ತಾಕುಗಳ ಬಳಿ ತೆರಳಿ, ಕಣ್ತುಂಬಿಕೊಳ್ಳುವ ಜತೆಯಲ್ಲೇ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಪ್ರಮುಖವಾಗಿ ಗೋಚರಿಸಿತು.

ಕಲಾವಿದರು ಕಲಾಕೃತಿಗಳು, ವೇದಿಕೆಗೆ ಅಂತಿಮ ಸ್ಪರ್ಶ ನೀಡಿದರೆ, ಬೃಹತ್‌ ಮಂಟಪದೊಳಗೆ ಕುರ್ಚಿ ಹಾಕುವ ಕೆಲಸ, ಸೌಂಡ್‌ ಸಿಸ್ಟಂ ಅಳವಡಿಸುವ ಕೆಲಸ ರಾತ್ರಿ ವೇಳೆಗೆ ಪೂರ್ಣಗೊಂಡಿತು. ಮುಖ್ಯ ವೇದಿಕೆಗೆ ಹೊಂದಿಕೊಂಡಂತೆ ನಾಲ್ಕು ಪ್ರಮುಖ ಪ್ರದರ್ಶನ ಮಳಿಗೆ ತೆರೆಯಲಾಗಿದೆ. ಸಮನಾಂತರ ವೇದಿಕೆಯೂ ರೂಪುಗೊಂಡಿದೆ.

ADVERTISEMENT

ಎರಡ್ಮೂರು ದಿನಗಳ ಹಿಂದಷ್ಟೇ ಗಣ್ಯಾತಿಗಣ್ಯರ ಅನುಕೂಲಕ್ಕಾಗಿ ನಿರ್ಮಿಸಿರುವ ಮೂರು ಹೆಲಿಪ್ಯಾಡ್‌ನಿಂದ ಮುಖ್ಯ ವೇದಿಕೆಗೆ ಸಂಪರ್ಕ ಕಲ್ಪಿಸುವ 200 ಮೀಟರ್‌ ಉದ್ದದ ರಸ್ತೆಗೆ ವಿಜಯಪುರದ ಬಂಜಾರಾ ಬಿಪಿ.ಇಡಿ ಮಹಾವಿದ್ಯಾಲಯದ 60 ವಿದ್ಯಾರ್ಥಿಗಳು ಟ್ರ್ಯಾಕ್‌ ಗುರುತಿಸುವ ಕೆಲಸ ನಿರ್ವಹಿಸಿದರು.

ಶೈಕ್ಷಣಿಕ ಪ್ರವಾಸಕ್ಕಾಗಿ ವಿವಿಧ ಜಿಲ್ಲೆಗಳಿಂದ ಬಂದಿರುವ ಮಕ್ಕಳ ತಂಡವೂ ಸಿಂದಗಿ–ವಿಜಯಪುರ ರಸ್ತೆಯಲ್ಲಿ ಚಲಿಸುವ ಸಂದರ್ಭ, ಕಗ್ಗೋಡಗೆ ಭೇಟಿ ನೀಡಿ ಉತ್ಸವದ ಸಿದ್ಧತೆ ಕಣ್ತುಂಬಿಕೊಂಡಿತು. ದಾಸೋಹದಲ್ಲಿ ಊಟ ಸವಿದು ಸಂತೃಪ್ತಿಯಿಂದ ಪ್ರವಾಸ ಮುಂದುವರೆಸಿದ್ದು ಕಾಣಿಸಿತು.

120X60 ಅಡಿ ಉದ್ದಗಲದ ವೇದಿಕೆ

‘300X700 ಅಡಿ ಉದ್ದಗಲದ ಬೃಹತ್‌ ಪೆಂಡಾಲ್‌ ಹಾಕಲಾಗಿದೆ. ಮೂರು ಮಂಟಪದವರು ಕೂಡಿ ಇದನ್ನು ನಿರ್ವಹಿಸುತ್ತಿದ್ದೇವೆ. ಇದರೊಳಗೆ 50000 ಜನರು ಆಸೀನರಾಗಬಹುದು. 40000ದಿಂದ 45000 ಕುರ್ಚಿ ಹಾಕುತ್ತೇವೆ’ ಎಂದು ಪುಂಡಲಿಂಗೇಶ್ವರ ಮಂಟಪದ ಸಿಯಾರ್ ಬೆಣ್ಣೇಶ್ವರ ತಿಳಿಸಿದರು.

‘ಮುಖ್ಯ ಮಂಟಪಕ್ಕೆ ಸಮನಾಂತರವಾಗಿ 80X140 ಅಡಿ ಉದ್ದಗಲದ ಪರ್ಯಾಯ ಮಂಟಪವನ್ನು ನಿರ್ಮಿಸಿದ್ದೇವೆ. ಇಲ್ಲಿ 1000 ಕುರ್ಚಿ ಹಾಕಿದ್ದೇವೆ’ ಎಂದು ಅವರು ಹೇಳಿದರು.

‘ಉತ್ಸವದ ಅಂಗಳದಲ್ಲಿ ಒಟ್ಟು 155 ಹಾರ್ನ್‌, 30 ಲೈನ್‌ ಏರಿಯಾ ಸೌಂಡ್‌ ಬಾಕ್ಸ್‌ ಅಳವಡಿಸಿದ್ದೇವೆ. ಧ್ವನಿ ಸುಮಧುರವಾಗಿ ಕೇಳಲಿಕ್ಕೆ ಅಗತ್ಯ ತಂತ್ರಜ್ಞಾನ ಬಳಸಿದ್ದೇವೆ’ ಎಂದು ರೋಣದ ಸೌಂಡ್‌ಸಿಸ್ಟಂನ ಬಸವರಾಜ ಮುದಕವಿ ಮಾಹಿತಿ ನೀಡಿದರು.

‘ಮುಖ್ಯ ವೇದಿಕೆ 120X60 ಅಡಿ ಉದ್ದಗಲವಿದೆ. ವೇದಿಕೆಯ ಹಿಂಭಾಗದಲ್ಲಿ ಆಲಮಟ್ಟಿ ಜಲಾಶಯ ಚಿತ್ರಣದ ಬೃಹತ್‌ ಕ್ಯಾನ್ವಾಸ್‌ ಮೇಲೆ ಪ್ರತಿಬಿಂಬಿತಗೊಳ್ಳಲಿದೆ. ಬಸವೇಶ್ವರ, ಅಲ್ಲಮಪ್ರಭು, ಅಕ್ಕಮಹಾದೇವಿ, ಕೂಡಲಸಂಗಮದ ಐಕ್ಯ ಮಂಟಪ, ಶ್ರೀಶೈಲ ಕೊಳ್ಳದ ಪ್ರತಿಬಿಂಬ, ಆಲಮಟ್ಟಿ ಜಲಾಶಯದ ಪ್ರತಿಕೃತಿಯನ್ನು ರಚಿಸಿ, ಉತ್ಸವದ ಅಂಗಳದ ವಿವಿಧೆಡೆ ಪ್ರತಿಷ್ಠಾಪಿಸಿದ್ದೇವೆ’ ಎಂದು ಬೆಂಗಳೂರಿನ ಮಂಟಪ ಸಂಸ್ಥೆಯ ಪ್ರಕಾಶ್‌ ಶೆಟ್ಟಿ ತಿಳಿಸಿದರು.

6000 ಸ್ವಯಂ ಸೇವಕರು

‘ಉತ್ಸವ ನಡೆಯಲಿರುವ ಎಂಟು ದಿನವೂ ಸಕ್ರಿಯವಾಗಿ ಸೇವೆ ಸಲ್ಲಿಸಲು ಈಗಾಗಲೇ 6000 ಸ್ವಯಂ ಸೇವಕರು ಸಜ್ಜಾಗಿದ್ದಾರೆ. ಇವರನ್ನೆಲ್ಲಾ ಹಲ ತಂಡಗಳಾಗಿ ವಿಭಜಿಸಿದ್ದು, ಒಂದೊಂದು ತಂಡ ತಮಗೊಪ್ಪಿಸಿದ ಕೆಲಸ ನಿರ್ವಹಿಸಲಿದೆ.

ಭದ್ರತೆ, ಸ್ವಚ್ಛತೆ, ಮಂಟಪದೊಳಗೆ ಶಿಸ್ತು ಕಾಯ್ದುಕೊಳ್ಳುವಿಕೆ, ದಾಸೋಹದ ವ್ಯವಸ್ಥೆಗಾಗಿ ಪ್ರತ್ಯೇಕ ತಂಡಗಳಿವೆ. ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿಯ 1500 ವಿದ್ಯಾರ್ಥಿಗಳು ಎಂಟು ದಿನವೂ ಬೆಳಿಗ್ಗೆ 11ರಿಂದ ರಾತ್ರಿ 11ರವರೆಗೆ ನಿರಂತರವಾಗಿ ದಾಸೋಹದಲ್ಲಿ ಸೇವೆ ಸಲ್ಲಿಸಲಿದ್ದಾರೆ’ ಎಂದು ಅಕಾಡೆಮಿಯ ಸಂಸ್ಥಾಪಕ, ಭಾರತ ವಿಕಾಸ ಸಂಗಮದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್‌.ಎಂ.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘80 ಬಾಣಸಿಗರ ತಂಡ ಸ್ವಯಂ ಪ್ರೇರಿತವಾಗಿ ದಾಸೋಹ ಮನೆಯಲ್ಲಿದೆ. ಈಗಾಗಲೇ ಅಡುಗೆ ಆರಂಭಗೊಂಡಿದೆ. ಅಗತ್ಯ ದಿನಸಿ, ಕಾಯಿಪಲ್ಲೆ ಎಲ್ಲಕ್ಕೂ ನಿತ್ಯವೂ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆಹಾರ ಧಾನ್ಯಗಳನ್ನು ಪರೀಕ್ಷಿಸಿದ್ದೇವೆ’ ಎಂದು ದಾಸೋಹದ ನಿರ್ವಹಣೆಯ ಹೊಣೆ ಹೊತ್ತಿರುವ ಸುಧೀರ ಚಿಂಚಲಿ ಹೇಳಿದರು.

ಸಾಲು ಸಾಲು ಮಳಿಗೆ

ಉತ್ಸವದ ಆವರಣ ಪ್ರವೇಶಿಸುತ್ತಿದ್ದಂತೆ ರಸ್ತೆ ಬದಿಯ ಎರಡೂ ಕಡೆ ಸಾಲು ಸಾಲು ಮಳಿಗೆ ನಿರ್ಮಿಸಲಾಗಿದೆ. ಆರಂಭದಲ್ಲೇ ಭಾರತ ವಿಕಾಸ ಸಂಗಮದ ಕಚೇರಿಯಿದೆ. ಪಕ್ಕದಲ್ಲೇ ಹಣ ಪಾವತಿ ಕೇಂದ್ರವಿದೆ. ವಿಚಾರಣಾ ಕೇಂದ್ರ, ವಸತಿ ನೋಂದಣಿ, ಬಸ್‌, ರೈಲು, ವಿಮಾನ ಟಿಕೆಟ್‌ ಬುಕ್ಕಿಂಗ್‌ ಕೌಂಟರ್ ಸಹ ಇದೇ ಸಾಲಿನಲ್ಲಿದೆ. ಅದರ ಮಗ್ಗುಲಲ್ಲೇ ವಿಶ್ರಾಂತಿಗಾಗಿ ಬೃಹತ್‌ ಪೆಂಡಾಲ್‌ ಹಾಕಲಾಗಿದೆ.

ಈ ಮಳಿಗೆಗಳ ಎದುರು ಭಾಗದಲ್ಲೇ ಸ್ವದೇಶಿ ಭಂಡಾರ, ಜ್ಞಾನ ಭಂಡಾರ, ಗೃಹ ಕೈಗಾರಿಕೆ ಭಂಡಾರ, ಪುಸ್ತಕ ಮಳಿಗೆ ಸುಸಜ್ಜಿತವಾಗಿ ತಲೆ ಎತ್ತಿವೆ. ಒಂದೊಂದು ಮಳಿಗೆಯಲ್ಲೂ ತಲಾ 131 ಮಳಿಗೆಗೆ ಅವಕಾಶವಿದ್ದು, ಈಗಾಗಲೇ ಭರ್ತಿಯಾಗಿವೆ.

24X7 ಆರೋಗ್ಯ ಚಿಕಿತ್ಸೆ

‘ಜಿಲ್ಲಾ ಆರೋಗ್ಯ ಇಲಾಖೆ 24X7 ಚಿಕಿತ್ಸೆ ನೀಡಲು ಎರಡು ತಾತ್ಕಾಲಿಕ ಘಟಕ ಆರಂಭಿಸಿದೆ. ಎರಡು ಆಂಬುಲೆನ್ಸ್‌ ಸೇವೆ ಒದಗಿಸಿದೆ. ಬೆಳಿಗ್ಗೆ 8ರಿಂದ ರಾತ್ರಿ 8, ರಾತ್ರಿ 8ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಎರಡು ಪಾಳಿಯಲ್ಲಿ ತಲಾ 10 ಮಂದಿ ಸಿಬ್ಬಂದಿ ಚಿಕಿತ್ಸೆ ನೀಡಲಿದ್ದಾರೆ.

ಎರಡು ಘಟಕಗಳಲ್ಲಿ ತಲಾ ಇಬ್ಬರು ವೈದ್ಯರು ನಿರಂತರವಾಗಿ ಕೆಲಸ ನಿರ್ವಹಿಸಲಿದ್ದಾರೆ. ಇದರ ಜತೆಗೆ ವಿವಿಧ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ. ಉತ್ಸವ ನಡೆಯುವ ಎಂಟು ದಿನವೂ ನಿತ್ಯ ನೂರು ಸಿಬ್ಬಂದಿ ಕಗ್ಗೋಡದಲ್ಲಿಯೇ ಕೆಲಸ ನಿರ್ವಹಿಸಲಿದ್ದಾರೆ’ ಎಂದು ಡಿಎಚ್‌ಒ ಮಹೇಂದ್ರ ಕಾಪಸೆ ತಿಳಿಸಿದರು.

ಪೊಲೀಸ್ ಹೊರಠಾಣೆ

‘ಕಗ್ಗೋಡದಲ್ಲಿನ ಗೋಶಾಲೆಗೆ ಹೊಂದಿಕೊಂಡಂತಿರುವ ಹಟ್‌ ಒಂದನ್ನೇ ವಿಜಯಪುರ ಗ್ರಾಮೀಣ ಪೊಲೀಸ್‌ ಹೊರಠಾಣೆಯನ್ನಾಗಿ ಪರಿವರ್ತಿಸಲಾಗಿದೆ. ಭದ್ರತೆಗಾಗಿ 8 ಡಿವೈಎಸ್‌ಪಿ, 25 ಇನ್ಸ್‌ಪೆಕ್ಟರ್ಸ್‌, 60 ಪಿಎಸ್‌ಐ, 800 ಹೆಡ್‌ ಕಾನ್‌ಸ್ಟೆಬಲ್‌, ಕಾನ್‌ಸ್ಟೆಬಲ್‌, 500 ಹೋಂ ಗಾರ್ಡ್, 8 ಕೆಎಸ್‌ಆರ್‌ಪಿ ಪ್ಲಾಟೂನ್ಸ್‌, 6 ಜಿಲ್ಲಾ ಸಶಸ್ತ್ರ ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕ್ಕಂ ಮಾಹಿತಿ ನೀಡಿದರು.

ಭದ್ರತೆಗಾಗಿ ಜಿಲ್ಲೆಯ ಪೊಲೀಸರ ಜತೆಗೆ ಉತ್ತರ ವಲಯದ ವಿವಿಧ ಜಿಲ್ಲೆಗಳ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.