ADVERTISEMENT

ಕೈಕೊಟ್ಟ ಸ್ಯಾಟ್ಸ್‌ ಸರ್ವರ್‌: ಸಕಾಲಕ್ಕೆ ಸಿಗದ ವರ್ಗಾವಣೆ ಪತ್ರ, ಅಂಕಪಟ್ಟಿ

ಬಸವರಾಜ ಸಂಪಳ್ಳಿ
Published 14 ಜೂನ್ 2025, 5:12 IST
Last Updated 14 ಜೂನ್ 2025, 5:12 IST
ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ ವೆಬ್‌ಸೈಟ್‌ 
ಶಿಕ್ಷಣ ಇಲಾಖೆಯ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ ವೆಬ್‌ಸೈಟ್‌    

ವಿಜಯಪುರ: ವಿದ್ಯಾರ್ಥಿಗಳ ವರ್ಗಾವಣೆ ಪತ್ರವನ್ನು ಆನ್‌ಲೈನ್‌ ಮೂಲಕವೇ ನೀಡುವ ಮತ್ತು ದಾಖಲಾತಿ ಮಾಡಿಕೊಳ್ಳಲು ಇರುವ ಶಿಕ್ಷಣ ಇಲಾಖೆಯ ‘ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ’ಯು (ಎಸ್‌ಎಟಿಎಸ್‌) ಸರ್ವರ್‌ ಸಮಸ್ಯೆಯಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮ ವರ್ಗಾವಣೆ ಪತ್ರ (ಟಿಸಿ),  ಅಂಕಪಟ್ಟಿ ಲಭಿಸದೇ ರಾಜ್ಯದಾದ್ಯಂತ ವಿದ್ಯಾರ್ಥಿಗಳು, ಪೋಷಕರು ನಿತ್ಯ ಶಾಲೆಗಳಿಗೆ ಅಲೆದಾಡುವಂತಾಗಿದೆ.

ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ–ಪೋಷಕರ ಸಮಗ್ರ ಮಾಹಿತಿ, ಪಠ್ಯಪುಸ್ತಕ ವಿತರಣೆ, ಬಿಸಿಯೂಟ ಹಾಜರಾತಿ, ವಿದ್ಯಾರ್ಥಿ ವೇತನ, ಶೂ-ಸಾಕ್ಸ್‌ ವಿತರಣೆ, ಜಾತಿ- ಆದಾಯ ಪ್ರಮಾಣ ಪತ್ರ ವಿವರ, ಅಂಗವೈಕಲ್ಯದ ವಿವರ, ಬ್ಯಾಂಕ್‌ ಖಾತೆ ವಿವರವನ್ನು ಸ್ಯಾಟ್ಸ್‌ನಲ್ಲಿ ದಾಖಲಿಸಲು ಸಾಧ್ಯವಾಗದೇ ಶಿಕ್ಷಣ ಇಲಾಖೆ ಸಿಬ್ಬಂದಿಗೆ ಅಡಚಣೆಯಾಗಿದೆ.

ಶಿಕ್ಷಣ ಇಲಾಖೆ, ಶಾಲಾ ಮುಖ್ಯ ಶಿಕ್ಷಕರು ಮತ್ತು ಪೋಷಕರು– ವಿದ್ಯಾರ್ಥಿಗಳ ಮಾಹಿತಿ ಪಡೆಯಲು ಅನುಕೂಲ ಆಗುವ ದೃಷ್ಟಿಯಿಂದ ‘ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆ’ಯನ್ನು ಜಾರಿಗೆ ತರಲಾಗಿದೆ. ಈ ಕಾರಣಕ್ಕೆ ‘ಸ್ಯಾಟ್ಸ್‌’ ಅನ್ನು ಶಿಕ್ಷಣ ಇಲಾಖೆಯ ಹೆಮ್ಮೆ, ‘ಶಿಕ್ಷಣ ಕಿರಣ’ ಎಂದೂ ಶಿಕ್ಷಣ ಇಲಾಖೆಯೇ ತನ್ನ ವೆಬ್‌ಸೈಟ್‌ನಲ್ಲಿ ಬಣ್ಣಿಸಿದೆ. ಆದರೆ, ಕಳೆದ ಒಂದು ತಿಂಗಳಿನಿಂದ ಸರ್ವರ್‌ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗೇ ‘ಸ್ಯಾಟ್ಸ್‌’ ಸಂಕಷ್ಟ ಉಂಟು ಮಾಡಿದೆ ಎಂಬ ಆರೋಪ ಕೇಳಿಬಂದಿದೆ. 

ADVERTISEMENT

ಈ ಮೊದಲು ಶಾಲೆಯ ಯಾವುದೇ ಶಿಕ್ಷಕರು, ಸಿಬ್ಬಂದಿ ಸ್ಯಾಟ್ಸ್‌ ವ್ಯವಸ್ಥೆಯಲ್ಲಿ ಸುಲಭವಾಗಿ ಲಾಗಿನ್‌ ಆಗಬಹುದಿತ್ತು. ಆದರೆ, ಇದು ದುರ್ಬಳಕೆ ಆಗುವ ಸಾಧ್ಯತೆಯಿರುವ ಕಾರಣಕ್ಕೆ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೇವಲ ಶಾಲೆಯ ಮುಖ್ಯ ಶಿಕ್ಷಕರು ಮಾತ್ರ ಲಾಗಿನ್ ಆಗುವಂತೆ ನಿರ್ಬಂಧ ವಿಧಿಸಿದೆ. 

ಸ್ಯಾಟ್ಸ್‌ ಲಾಗಿನ್‌ ಆಗಬೇಕಾದರೆ ಶಾಲಾ ಮುಖ್ಯ ಶಿಕ್ಷಕರ ಮೊಬೈಲ್‌ ಫೋನ್‌ಗೆ ಒಟಿಪಿ ಬರುತ್ತದೆ. ಆ ಒಟಿಪಿ ಬಳಸಿ ಲಾಗಿನ್‌ ಆಗಬೇಕು. ಇದು ಮುಖ್ಯ ಶಿಕ್ಷಕರಿಗೆ ಕೆಲಸ ಒತ್ತಡ ಹೆಚ್ಚಿಸಿದೆ. ಕಿರಿಕಿರಿ ಉಂಟು ಮಾಡುತ್ತಿದೆ. ಅಲ್ಲದೇ, ಒಟಿಪಿ ಹಾಕಿದರೂ ಲಾಗಿನ್‌ ಆಗದೇ ವಿಳಂಬವಾಗುತ್ತಿದೆ. ಪರಿಣಾಮ ದಿನಕ್ಕೆ ಒಂದೆರಡು ವಿದ್ಯಾರ್ಥಿಗಳಿಗೂ ವರ್ಗಾವಣೆ ಪತ್ರ, ಅಂಕಪಟ್ಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಸರ್ವರ್‌ ಸಮಸ್ಯೆಯಿಂದ ಸ್ಯಾಟ್ಸ್‌ ತೆರೆದುಕೊಳ್ಳದೇ, ವಿಳಂಬವಾಗುತ್ತಿರುವುದರಿಂದ ಶಾಲಾ ಶಿಕ್ಷಕರು, ಶಾಲಾ ಸಿಬ್ಬಂದಿ ಮತ್ತು ಪೋಷಕರ ನಡುವೆ ಶಾಲಾ ಆವರಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳು ವಿಳಂಬವಾಗುತ್ತಿದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವರ್ಗಾವಣೆ ಪತ್ರ ಕೋರಿ ಅರ್ಜಿ ಸಲ್ಲಿಸಿದ ಕಾರಣ ಸರ್ವರ್‌ ನಿಧಾನವಾಗಿದೆ. ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
- ಟಿ.ಎಸ್‌.ಕೊಲ್ಹಾರ ಉಪನಿರ್ದೇಶಕಿ ಶಾಲಾ ಶಿಕ್ಷಣ ಇಲಾಖೆ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.