ADVERTISEMENT

ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ: ಸಾವು ಗೆದ್ದ ಸಾತ್ವಿಕ್

ಬಸವರಾಜ ಸಂಪಳ್ಳಿ
Published 5 ಏಪ್ರಿಲ್ 2024, 0:02 IST
Last Updated 5 ಏಪ್ರಿಲ್ 2024, 0:02 IST
<div class="paragraphs"><p>‌ತೆರೆದ ಕೊಳವೆಬಾವಿಯೊಳಗೆ ಬಿದ್ದಿದ್ದ ಮಗು ಸಾತ್ವಿಕ್‌ಗೆ ರಕ್ಷಣಾ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ, ರಕ್ಷಿಸಿ ಹೊರತಂದರು&nbsp;–</p></div>

‌ತೆರೆದ ಕೊಳವೆಬಾವಿಯೊಳಗೆ ಬಿದ್ದಿದ್ದ ಮಗು ಸಾತ್ವಿಕ್‌ಗೆ ರಕ್ಷಣಾ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ, ರಕ್ಷಿಸಿ ಹೊರತಂದರು –

   

ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ವಿಜಯಪುರ: ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದ ತೋಟದ ಮನೆ ಬಳಿ ರೈತ ಸತೀಶ ಮುಜಗೊಂಡ ಎರಡು ದಿನಗಳ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗೆ ತಲೆ ಕೆಳಗಾಗಿ ಬಿದ್ದು, 20 ಗಂಟೆ ಜೀವನ್ಮರಣದ ನಡುವೆ ಹೋರಾಡಿದ 14 ತಿಂಗಳ ಮಗು ಸಾತ್ವಿಕ್ ಕೊನೆಗೂ ಬದುಕಿ ಬಂದ.

ADVERTISEMENT

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಕಾರ್ಯಪಡೆ, ಅಗ್ನಿಶಾಮಕ ದಳ ಮತ್ತು ಪೊಲೀಸ್‌ ಸಿಬ್ಬಂದಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಸಫಲವಾಯಿತು. ಕೈಕಾಲು ಮುದುಡಿಕೊಂಡು ಕಣ್ಣು ಮುಚ್ಚಿ ಅಳುತ್ತಿದ್ದ ಸಾತ್ವಿಕ್‌, ತಂದೆ ಸತೀಶ ಮತ್ತು ತಾಯಿ ಪೂಜಾ ಮಡಿಲು ಸೇರಿದಾಗ ಕಾರ್ಯಾಚರಣೆ ಸ್ಥಳದಲ್ಲಿ ಸಾವಿರಾರು ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಜಯ ಘೋಷ ಮೊಳಗಿದವು. ಎಲ್ಲರ ಮೊಗದಲ್ಲಿ ನಿರಾಳಭಾವ ಮೂಡಿತು.

ಬುಧವಾರ ಸಂಜೆ 5.30ಕ್ಕೆ ಕೊಳವೆ ಬಾವಿಯೊಳಗೆ ಮಗು ಬಿತ್ತು. ನಂತರ 6.30ಕ್ಕೆ ಆರಂಭಗೊಂಡ ಕಾರ್ಯಾಚರಣೆ ಗುರುವಾರ ಮಧ್ಯಾಹ್ನ 1.45ಕ್ಕೆ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯುವುದರ ಮೂಲಕ ಕೊನೆಗೊಂಡಿತು.

ಮಗುವನ್ನು ತಕ್ಷಣವೇ ಆಂಬುಲೆನ್ಸ್‌ನಲ್ಲಿ ಇಂಡಿ ತಾಲ್ಲೂಕು ಆಸ್ಪತ್ರೆಗೆ ಒಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

‘ಇಷ್ಟು ದೀರ್ಘಕಾಲ ಮಗು ಕೊಳವೆ ಬಾವಿಯೊಳಗೆ ಸಿಲುಕಿ, ಸುರಕ್ಷಿತವಾಗಿ ಹೊರ ಬಂದಿರುವುದು ‘ಲಚ್ಯಾಣ ಸಿದ್ದಲಿಂಗ ಮಹಾರಾಜರ ಪವಾಡವೇ ಸರಿ’ ಎಂದು ಅಲ್ಲಿ ಇದ್ದವರು ಮಾತನಾಡಿಕೊಂಡು ಹರ್ಷ ವ್ಯಕ್ತಪಡಿಸಿದರು. ರಕ್ಷಣಾ ಕಾರ್ಯಾಚರಣೆ ವೀಕ್ಷಣೆಗೆ ಜಿಲ್ಲೆಯ ಮೂಲೆಮೂಲೆಗಳಿಂದ ಬಂದಿದ್ದ ಜನರು ಖುಷಿಯಿಂದ ಮನೆಗೆ ಮರಳಿದರು. ಕಾರ್ಯಾಚರಣೆ ಪೂರ್ಣಗೊಂಡು ಮಗು ಸುರಕ್ಷಿತವಾಗಿ ಬದುಕಿ ಬರುವವರೆಗೆ ಎಲ್ಲರೂ ಪ್ರಾರ್ಥಿಸಿದರು.

ಯಶಸ್ವಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ಮತ್ತು ಪೊಲೀಸ್‌ ಸಿಬ್ಬಂದಿಯನ್ನು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಅಭಿನಂದಿಸಿದರು.

ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದ ತೋಟದ ವಸ್ತಿಯ ತೆರೆದ ಕೊಳವೆಬಾವಿಯೊಳಗೆ ಬಿದ್ದಿದ್ದ ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಿದ ಸಾರ್ವಜನಿಕರು  –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಬೃಹತ್‌ ಯಂತ್ರವನ್ನೇ ಏರಿ ಕುಳಿತು ಜನರು ವೀಕ್ಷಿಸಿದರು   ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
 ಮಗುವಿನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ   – ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಮಗುವಿನ ರಕ್ಷಣಾ ಕಾರ್ಯಾಚರಣೆಯನ್ನು ಜನರು ಕುತೂಹಲದಿಂದ ನೋಡಿದರು ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ಇಂಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಗುರುವಾರ ತಾಯಿ ಪೂಜಾ ಅವರು ಮಗು ಸಾತ್ವಿಕ್‌ಗೆ ಆರೈಕೆ ಮಾಡಿದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಜೊತೆಗಿದ್ದರು
ಮಗು ಆರೋಗ್ಯವಾಗಿದೆ. ದೇಹದ ಯಾವುದೇ ಭಾಗಕ್ಕೂ ಗಾಯವಾಗಿಲ್ಲ. ಘಟನೆಯಿಂದ ಸ್ವಲ್ಪ ಗಾಬರಿಯಾಗಿದ್ದು ಹೊರತುಪಡಿಸಿದರೆ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ
- ಟಿ.ಭೂಬಾಲನ್ ಜಿಲ್ಲಾಧಿಕಾರಿ

ಯಶಸ್ವಿಯಾಗಿದ್ದು ಹೇಗೆ?

ತಲೆ ಕೆಳಗಾಗಿ ಬಿದ್ದ ಸಾತ್ವಿಕ್‌ನನ್ನು ಜೀವ ಸಹಿತ ಸುರಕ್ಷಿತವಾಗಿ ಹೊರತರುವುದು ಸವಾಲು ಆಗಿತ್ತು.

ಒಟ್ಟು 265 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ ಮಗು 18 ಅಡಿ ಆಳದಲ್ಲಿ ಸಿಲುಕಿದ್ದನ್ನು ಆರಂಭದಲ್ಲೇ ಖಚಿತ ಪಡಿಸಿಕೊಂಡ ಇಂಡಿ ಅಗ್ನಿ ಶಾಮಕ ದಳದ ಸಿಬ್ಬಂದಿ, ಮತ್ತಷ್ಟು ಆಳಕ್ಕೆ ಜಾರದಂತೆ ಮುನ್ನೆಚ್ಚರಿಕೆ ವಹಿಸಿದರು. ಮಗುವಿನ ಕಾಲಿಗೆ ಪಟ್ಟಿ ಹಾಕಿ, ಬಿಗಿ ಮಾಡಿದರು. ಉಸಿರಾಟಕ್ಕೆ ಅನುಕೂಲ ಆಗುವಂತೆ ವೈದ್ಯರ ತಂಡ ಆಮ್ಲಜನಕದ ವ್ಯವಸ್ಥೆ ಕಲ್ಪಿಸಿತು.

ಬೆಳಗಾವಿ, ಕಲಬುರಗಿಯಿಂದ ಎಸ್‌ಡಿಆರ್‌ಎಫ್‌ ಮತ್ತು ಹೈದರಾಬಾದ್‌ನಿಂದ ಬುಧವಾರ ತಡರಾತ್ರಿ ಬಂದ ಎನ್‌ಡಿಆರ್‌ಎಫ್‌ ಸಿಬ್ಬಂದಿ, ಕೊಳವೆ ಬಾವಿಗೆ ಸಮಾನಾಂತರವಾಗಿ ಮೂರು

ಅಡಿ ಅಂತರದಲ್ಲಿ ಬೃಹತ್‌ ಯಂತ್ರಗಳ ನೆರವಿನಿಂದ ಗುಂಡಿ ತೋಡಿದರು.

ಕೊಳವೆಬಾವಿ ಅವಘಡ ಇದೇ ಮೊದಲಲ್ಲ

ಜಿಲ್ಲೆಯಲ್ಲಿ ಕೊಳವೆಬಾವಿ ಅವಘಡ ಸಂಭವಿಸಿದ್ದು ಇದೇ ಮೊದಲಲ್ಲ.  2008ರಲ್ಲಿ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಬಾಲಕಿ ಕಾಂಚನಾ  ಮತ್ತು 2014ರಲ್ಲಿ ನಾಗಠಾಣ ಸಮೀಪದ ದ್ಯಾಬೇರಿ ಗ್ರಾಮದಲ್ಲಿ ಯಾದಗಿರಿ ಜಿಲ್ಲೆಯಿಂದ ಕೂಲಿಗೆ ಬಂದಿದ್ದ ಹನುಮಂತ ಪಾಟೀಲ ಎಂಬವರ ಮೂರು ವರ್ಷದ ಹೆಣ್ಣು ಮಗು ಅಕ್ಷತಾ ಕೊಳವೆಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದರು. ಆಗ ಜಿಲ್ಲಾಡಳಿತದ ನೇತೃತ್ವದಲ್ಲಿ ವಾರಗಟ್ಟಲೇ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮಕ್ಕಳನ್ನು ಜೀವಂತ ಹೊರತರಲು ಸಾಧ್ಯವಾಗಿರಲಿಲ್ಲ.

ಎಚ್ಚರಿಕೆ:

ತೆರೆದ ಕೊಳವೆಬಾವಿಗಳಿಗೆ ಮಕ್ಕಳು ಬಿದ್ದು ಅವಘಡ ಸಂಭವಿಸಿದ ಬಳಿಕ ಜಿಲ್ಲಾಡಳಿತ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಿತ್ತು. ನೀರು ಬರದೇ ವಿಫಲವಾದ ಕೊಳವೆಬಾವಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಒಂದು ವೇಳೆ ತೆರೆದಿಟ್ಟರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆಯನ್ನೂ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.