ADVERTISEMENT

ವಿಜಯಪುರ: SBI ಸಿಬ್ಬಂದಿಗೆ ಗನ್ ತೋರಿಸಿ ₹8 ಕೋಟಿ ನಗದು, 50 KG ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 15:25 IST
Last Updated 16 ಸೆಪ್ಟೆಂಬರ್ 2025, 15:25 IST
<div class="paragraphs"><p>ಚಡಚಣ ಪಟ್ಟಣದಲ್ಲಿರುವ ಎಸ್‌ಬಿಐ ಬ್ಯಾಂಕ್</p></div>

ಚಡಚಣ ಪಟ್ಟಣದಲ್ಲಿರುವ ಎಸ್‌ಬಿಐ ಬ್ಯಾಂಕ್

   

ವಿಜಯಪುರ: ನೆರೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಂಗಳವಾರ ಸಂಜೆ 7 ಗಂಟೆಗೆ ಏಳೆಂಟು ಮುಸುಕುದಾರಿ ದರೋಡೆಕೋರರು ಪಿಸ್ತೂಲ್‌ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕಿನ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.

ಅಂದಾಜು ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬ್ಯಾಂಕಿನ ಸಿಬ್ಬಂದಿ, ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ. ಆದರೆ, ಖಚಿತ ಮಾಹಿತಿ ಇನ್ನೂ ಲಭಿಸಿಲ್ಲ.

ADVERTISEMENT

ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಜನ ನಿಬಿಡ ಪ್ರದೇಶದಲ್ಲಿರುವ ಎಸ್‌ಬಿಐ ಶಾಖೆಯ ಸಿಬ್ಬಂದಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳು ಅಣಿಯಾಗುತ್ತಿದ್ದ ವೇಳೆ ಮಿಲಿಟರಿ ಬಣ್ಣದ ಬಟ್ಟೆ ಧರಿಸಿದ್ದ ದರೋಡೆಕೋರರು ಬ್ಯಾಂಕಿನ ಮುಖ್ಯ ದ್ವಾರದ ಮೂಲಕ ಪ್ರವೇಶಿಸಿದ್ದಾರೆ.

ನಾಡ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ, ಬ್ಯಾಂಕ್ ವ್ಯವಸ್ಥಾಪಕ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ, ದರೋಡೆ ಮಾಡಿದ್ದಾರೆ.

ದರೋಡೆಕೋರರು ಘಟನೆ ಬಳಿಕ ಕದ್ದ ಚಿನ್ನಾಭರಣವನ್ನು ವಾಹನಗಳಲ್ಲಿ ಹೇರಿಕೊಂಡು ಮಹಾರಾಷ್ಟ್ರದತ್ತ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು, ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕುತ್ತಿದ್ದಾರೆ. ದರೋಡೆ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನ ಬ್ಯಾಂಕ್‌ ಎದುರು ಜಮಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.