ADVERTISEMENT

ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆ ನಾಳೆ; ನಿರಾತಂಕ ವ್ಯವಸ್ಥೆ

ವಿಜಯಪುರ ಜಿಲ್ಲೆಯ 41 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ 23,556 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 14:22 IST
Last Updated 16 ಜೂನ್ 2020, 14:22 IST
ಎ.ಆರ್‌.ಜಹಗೀರದಾರ್‌
ಎ.ಆರ್‌.ಜಹಗೀರದಾರ್‌   

ವಿಜಯಪುರ: ಮಾರ್ಚ್‌ 23ಕ್ಕೆ ನಡೆಯಬೇಕಾಗಿದ್ದ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆಯು ಕೋವಿಡ್‌ 19 ಭೀತಿಯ ಹಿನ್ನೆಲೆಯಲ್ಲಿ ಮೂರು ತಿಂಗಳ ಬಳಿಕ ಜೂನ್‌ 18ರಂದು ನಡೆಯಲಿದೆ.

ವಿಜಯಪುರ ನಗರದಲ್ಲಿರುವ 12 ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇರುವ 29 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 42 ಕೇಂದ್ರಗಳಲ್ಲಿಜಿಲ್ಲೆಯ 22,635 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಆರ್‌.ಜಹಗೀರದಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಜಯಪುರಕ್ಕೆ ಬಂದಿರುವ 917 ವಿದ್ಯಾರ್ಥಿಗಳು ಹಾಗೂ ಮಹಾರಾಷ್ಟ್ರದ ನಾಲ್ಕು ವಿದ್ಯಾರ್ಥಿಗಳು ಸಹ ಗುರುವಾರದಂದು ಜಿಲ್ಲೆಯಲ್ಲೇ ಇಂಗ್ಲಿಷ್‌ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ನಿರ್ದೇಶನಾಲಯ ಅನುಮತಿ ನೀಡಿದೆ ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆ ನಡೆಯಲಿದ್ದು, ಕೋವಿಡ್‌ 19 ಹಿನ್ನೆಲೆಯಲ್ಲಿ ಪರೀಕ್ಷಾರ್ಥಿಗಳು ಬೆಳಿಗ್ಗೆ 8.30ರ ಒಳಗಾಗಿ ಆಯಾ ಕೇಂದ್ರಗಳಲ್ಲಿ ಹಾಜರಿರಬೇಕು ಎಂದು ಅವರು ಸೂಚಿಸಿದರು.

ಈ ಮೊದಲು ವಿದ್ಯಾರ್ಥಿಗಳು ಯಾವಾವ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರೋ ಅದೇ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಥರ್ಮಲ್‌ ಸ್ಕ್ಯಾನಿಂಗ್:ಆರಂಭದಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಗುವುದು. ಸ್ಯಾನಿಟೈಜರ್‌ ಸಿಂಪಡಿಸಿದ ಬಳಿಕ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು ಎಂದು ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ನೋಡೆಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇಲಾಖೆಯ ಮನವಿ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಶಾ ಕಾರ್ಯಕರ್ತೆಯರನ್ನು ಪರೀಕ್ಷಾ ಕೇಂದ್ರಕ್ಕೆ ನಿಯೋಜಿಸಿದ್ದು, ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದರು.

200 ವಿದ್ಯಾರ್ಥಿಗಳಿಗೆ ಒಂದು ಥರ್ಮಲ್‌ ಸ್ಕ್ಯಾನರ್‌ ವ್ಯವಸ್ಥೆ ಮಾಡಲಾಗಿದೆ. ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ. ಜನಪ್ರತಿನಿಧಿಗಳು, ದಾನಿಗಳು ಮತ್ತು ಸಂಘ, ಸಂಸ್ಥೆಗಳು ಸ್ಯಾನಿಟೈಜರ್‌, ಮಾಸ್ಕ್‌ಗಳನ್ನು ಪೂರೈಕೆ ಮಾಡಿವೆ ಎಂದು ಹೇಳಿದರು.

ಬಸ್‌ ಸೌಲಭ್ಯ:ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯದೊಳಗೆ ಬರಲು ಮತ್ತು ವಾಪಸ್‌ ತೆರಳಲು ಅನುಕೂಲವಾಗುವಂತೆ ಎಲ್ಲ ಮಾರ್ಗಗಳಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಲಿವೆ. ಈ ಸಂಬಂಧ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಮಾಡಲಾಗಿದ್ದು, ಅವರು ಬಸ್‌ ವ್ಯವಸ್ಥೆ ಮಾಡುವುದಾಗಿ ಖಚಿತಪಡಿಸಿದ್ದಾರೆ. ಅಲ್ಲದೇ, ಖಾಸಗಿ ಕಾಲೇಜುಗಳು ಸಹ ಬಸ್‌ ಸೌಲಭ್ಯ ಕಲ್ಪಿಸಲಿವೆ. ಸ್ವತಃ ವಾಹನಗಳಲ್ಲೂ ಪರೀಕ್ಷಾ ಕೇಂದ್ರಕ್ಕೆ ಬರಲಿದ್ದಾರೆ ಎಂದರು.

ಪರೀಕ್ಷೆ ಮುಗಿದ ಬಳಿಕ ಹಂತ,ಹಂತವಾಗಿ ವಿದ್ಯಾರ್ಥಿಗಳನ್ನು ಹೊರಗಡೆ ಬಿಡಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿ, ಪೋಷಕರು ಪರೀಕ್ಷೆ ದಿನದಂದು ಯಾವುದೇ ಅಡಚಣೆಯಾದರೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಆರ್‌.ಜಹಗೀರದಾರ ಅವರ ಮೊಬೈಲ್‌ ಸಂಖ್ಯೆ 9448315539 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.