ADVERTISEMENT

ತೀವ್ರ ಉಸಿರಾಟ ತೊಂದರೆ; ಆದ್ಯತೆ ಮೇಲೆ ಚಿಕಿತ್ಸೆ

ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 11:15 IST
Last Updated 4 ಜುಲೈ 2020, 11:15 IST
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿದರು
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಮಾತನಾಡಿದರು   

ವಿಜಯಪುರ: ತೀವ್ರ ಉಸಿರಾಟ ತೊಂದರೆ ಇರುವ ರೋಗಿಗಳಿಗೆ ಆದ್ಯತೆ ಮೇಲೆ ಚಿಕಿತ್ಸೆ ಒದಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡುತ್ತಿರುವುದಕ್ಕೆ ಅಭಿನಂದಿಸಿದರು.

ADVERTISEMENT

ರೋಗಿಗಳ ಗಂಟಲುದ್ರವ ಪರೀಕ್ಷೆ, ರೋಗಿಯ ಆರೋಗ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪರಸ್ಪರ ಸಮನ್ವಯತೆಯಿಂದ ಬಗೆಹರಿಸಿಕೊಳ್ಳಬೇಕು ಎಂದರು.

ಸದ್ಯಕ್ಕೆ ಟ್ರೂನ್ಯಾಟ್ ಮೂಲಕ ಗಂಟಲುದ್ರವ ಪರೀಕ್ಷೆ ಆದಷ್ಟು ಶೀಘ್ರ ವರದಿ ನೀಡಲು ಪ್ರಯತ್ನಿಸಲಾಗುವುದು. ಶೀಘ್ರದಲ್ಲಿಯೇ ಆರ್.ಟಿ.ಪಿ.ಸಿ.ಆರ್ ಮೂಲಕ ಗಂಟಲುದ್ರವ ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆ ಜಾರಿಯಾಗಲಿದ್ದು, ಅಲ್ಲಿಯವರೆಗೆ ವ್ಯವಸ್ಥಿತ ರೀತಿಯಲ್ಲಿ ಕೋವಿಡ್-19 ರೋಗಿಗಳ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.

ಮಹಾರಾಷ್ಟ್ರ ರೀತಿಯಲ್ಲಿ ಬೆಂಗಳೂರಿನಿಂದ ಆಗಮಿಸುವ ವ್ಯಕ್ತಿಗಳ ಕುರಿತು ಸೂಕ್ತ ನಿಗಾ ವಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಉದ್ದೇಶ ಸಹ ಹೊಂದಲಾಗಿದೆ ಎಂದರು.

ಪ್ಲಾಸ್ಮಾ ಥೆರಫಿ ಅಳವಡಿಸುವ ಕುರಿತಂತೆ ಸರ್ಕಾರದ ಮಾರ್ಗಸೂಚಿ, ನಿರ್ದೇಶನಗಳ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಆಗಮಿಸುತ್ತಿರುವ ತೀವ್ರ ಉಸಿರಾಟ ತೊಂದರೆ, ಕೋವಿಡ್-19 ಲಕ್ಷಣ ರೋಗಿಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಸಮನ್ವಯತೆಯಿಂದ ವಿನಿಮಯ ಮಾಡಿಕೊಳ್ಳಲು ಹಾಗೂ ಮಾಹಿತಿ ನೀಡಲು ಸೂಚಿಸಿದರು.

ಹೋಂ ಐಸೋಲೇಶನ್, ಸ್ವ್ಯಾಬ್ ಸಂಗ್ರಹ, ಕೋವಿಡ್ ರೋಗಿಗಳ ಚಿಕಿತ್ಸೆಯನ್ನು ಸರ್ಕಾರದ ನೂತನ ನಿಯಮಾವಳಿ ಅನ್ವಯ ಆಗುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಂದ್ರ ಕಾಪಸೆ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಸೂಕ್ತ ಸಲಹೆ, ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.