ADVERTISEMENT

ರಸ್ತೆ ಮೇಲೆ ಚರಂಡಿ ನೀರು: ಸರಿಪಡಿಸಲು ನಿವಾಸಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 13:31 IST
Last Updated 18 ಏಪ್ರಿಲ್ 2025, 13:31 IST
ಮುದ್ದೇಬಿಹಾಳ ಪಟ್ಟಣದ ಮಹೆಬೂಬ್ ನಗರ ವ್ಯಾಪ್ತಿಯಲ್ಲಿ ರಸ್ತೆ ಮೇಲೆಯೇ ಒಳಚರಂಡಿ ನೀರು ಹರಿದಿರುವುದನ್ನು ತೋರಿಸಿದ ನಿವಾಸಿಗಳು
ಮುದ್ದೇಬಿಹಾಳ ಪಟ್ಟಣದ ಮಹೆಬೂಬ್ ನಗರ ವ್ಯಾಪ್ತಿಯಲ್ಲಿ ರಸ್ತೆ ಮೇಲೆಯೇ ಒಳಚರಂಡಿ ನೀರು ಹರಿದಿರುವುದನ್ನು ತೋರಿಸಿದ ನಿವಾಸಿಗಳು   

ಮುದ್ದೇಬಿಹಾಳ: ‘ಪಟ್ಟಣದ ನಾಲತವಾಡಕ್ಕೆ ಹೋಗುವ ಮಹೆಬೂಬ್ ನಗರ ಮೂಲಕ ಹಾಯ್ದು ಹೋಗುವ ಮುಖ್ಯರಸ್ತೆಯಲ್ಲಿನ ಮ್ಯಾನ್‌ಹೋಲ್‌ನಿಂದ ನಿತ್ಯವೂ ದುರ್ವಾಸನೆಯುಕ್ತ ಕೊಳಚೆ ನೀರು ರಸ್ತೆಯ ಮೇಲೆ ಹರಿದಾಡಿ, ಅಲ್ಲಿ ತಿರುಗಾಡಲೂ ಆಗದಷ್ಟು ದುರ್ವಾಸನೆ ಹರಡಿದೆ. ಇದರ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಉರ್ದು ಪ್ರಾಥಮಿಕ, ಪ್ರೌಢಶಾಲೆ ಹಾಗೂ ಮಸೀದಿಗೆ ಹೋಗುವ ರಸ್ತೆಯಲ್ಲಿ ನೀರು ತುಂಬಿ ಹರಿದು, ಸುತ್ತಲಿನ ಪ್ರದೇಶದಲ್ಲಿ ದುರ್ವಾವಾಸನೆ ಹರಡುತ್ತಿದೆ.

ನಿವಾಸಿ ಅಬ್ದುಲ್‌ಅಜೀಜ ಜಾಲಗಾರ ಮಾತನಾಡಿ, ‘ಸಾಕಷ್ಟು ಬಾರಿ ಪುರಸಭೆಯ ಅಧಿಕಾರಿಗಳಿಗೆ ಈ ಸಮಸ್ಯೆಯ ಬಗ್ಗೆ ಹೇಳಿದರೂ ಏನೂ ಪ್ರಯೋಜನ ಆಗುತ್ತಿಲ್ಲ. ವಾರ್ಡಿನ ಸದಸ್ಯರನ್ನಂತೂ ನಾವು ಚುನಾವಣೆ ನಂತರ ನೋಡಲೇ ಇಲ್ಲ. ನಮ್ಮ ಗೋಳು ಯಾರಿಗೆ ಹೇಳಬೇಕು ತಿಳಿಯುತ್ತಿಲ್ಲ’ ಎಂದು ದೂರಿದರು.

ADVERTISEMENT

ಮುಖಂಡ ಅಲ್ಲಾಭಕ್ಷ ಟಕ್ಕಳಕಿ ಮಾತನಾಡಿ, ‘ನಾವು ಕಳೆದ ಆರು ತಿಂಗಳಿಂದ ಈ ಸಮಸ್ಯೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತಲೇ ಬಂದಿದ್ದರೂ ಅಧಿಕಾರಿಗಳು ಕುಂಟುನೆಪ ಹೇಳುತ್ತ ಕಾಲ ಹರಣ ಮಾಡುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ ಪುರಸಭೆ ಎದುರಿಗೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ನಿವಾಸಿ ಮಹಿಬೂಬ ಹಿಪ್ಪರಗಿ ಮಾತನಾಡಿ, ‘ವರ್ಷದ ಹಿಂದೆ ಇಲ್ಲಿನ ನಿವಾಸಿಗಳು, ಮುಖಂಡರ ಹೋರಾಟದಿಂದ ಒಂದನೇ ಹಂತದ ಡಾಂಬರೀಕರಣ ಮಾಡಿದ್ದಾರೆ. ಈಗ ಎರಡನೇ ಹಂತದ ಡಾಂಬರೀಕರಣ ಮಾಡುತ್ತಿದ್ದು, ಡಾಂಬರೀಕರಣಕ್ಕಿಂತ ರಸ್ತೆಯ ಮೇಲೆ ಕೊಳಚೆ ನೀರು ಹರಿಯುವುದನ್ನು ಸರಿಪಡಿಸಿ ಕಾಮಗಾರಿ ಪ್ರಾರಂಭಿಸಿ ಎಂದರೂ ಅಧಿಕಾರಿಗಳು ಕಳಪೆ ಗುಣಮಟ್ಟದ ಕಾಮಗಾರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ಗಾಲಿದ ಜಮಖಂಡಿ, ಮೌಸೀನ್ ಪಠಾಣ, ಆಶಿಫ್ ಹಳ್ಳೂರ, ರಾಜು ತೆಗ್ಗಿನಮನಿ, ಮಹಿಬೂಬ ಕೋಳೂರ, ದಾದಾ ನಾಯ್ಕೋಡಿ, ಮುಜ್ಜು ಹುನಕುಂಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.