ವಿಜಯಪುರ: ಇಂಡಿ ತಾಲ್ಲೂಕಿನ ಬಬಲಾದ ಗ್ರಾಮದ ಮಹಿಳೆಯರು ‘ಶಕ್ತಿ’ ಯೋಜನೆಯಡಿ ಸರ್ಕಾರಿ ಬಸ್‌ನಲ್ಲಿ ನಿತ್ಯ ಬೆಂಗಳೂರಿಗೆ ಪ್ರಯಾಣಿಸಿ, ಅಲ್ಲಿ ಹೋಳಿಗೆ ಮಾರಾಟ ಮಾಡಿ ಆದಾಯ ಗಳಿಸುತ್ತಿರುವ ಕುರಿತ ‘ಪ್ರಜಾವಾಣಿ’ ವಿಶೇಷ ವರದಿ ಉಲ್ಲೇಖಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಶಕ್ತಿ ಯೋಜನೆ‘ ಬದುಕು ಕೊಟ್ಟ ಹೋಳಿಗೆ’ ವರದಿಯನ್ನು ‘ಎಕ್ಸ್’ನಲ್ಲಿ ಲಗತ್ತಿಸಿರುವ ಅವರು ಮುಖ್ಯಮಂತ್ರಿ, ‘ಹೋಳಿಗೆ ವ್ಯಾಪಾರ ಮಾಡಿ ಕೈತುಂಬ ಆದಾಯ ಗಳಿಸಿ, ನೆಮ್ಮದಿಯ ಬದುಕು ಕಟ್ಟಿಕೊಂಡ ‘ಒಡಲ ಧ್ವನಿ’ ಸಂಘದ ಮಹಿಳೆಯರ ಕತೆ ಸ್ಫೂರ್ತಿದಾಯಕ‘ ಎಂದಿದ್ದಾರೆ.
‘ಹೆಂಡತಿ ದೇವಸ್ಥಾನಕ್ಕೆ ಹೋದವಳು ತಿಂಗಳಾದಾರೂ ಬರಲಿಲ್ಲ, ‘ಶಕ್ತಿ’ ಯೋಜನೆ ಬಂದ ಮೇಲೆ ಹೆಂಗಸರು ಮನೆಯಲ್ಲೇ ಇರಲ್ಲ... ಎಂಬ ಹೊಟ್ಟೆ ತುಂಬಿದ ಮಂದಿಯ ವ್ಯವಸ್ಥಿತ ಅಪಪ್ರಚಾರಗಳ ಬದಲು ಇಂತಹ ಸುದ್ದಿಗಳು ಹೆಚ್ಚು ಜನರನ್ನು ತಲುಪಬೇಕು, ಆ ಮೂಲಕ ಮತ್ತಷ್ಟು ಮಹಿಳೆಯರು ಬದುಕಿನ ಹೊಸ ಹಾದಿ ಕಂಡುಕೊಳ್ಳುವಂತಾಗಬೇಕು. ಆಗಲೇ ಯೋಜನೆ ಉದ್ದೇಶ ಪೂರ್ಣ ಸಾಕಾರವಾಗಲಿದೆ’ ಎಂದಿದ್ದಾರೆ.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಖುಷಿಯಾಗಿದೆ. ಅವರು ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ನಾವು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಅವರಿಗೆ ಧನ್ಯವಾದ. ‘ಶಕ್ತಿ’ ಯೋಜನೆ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ‘ಒಡಲ ಧ್ವನಿ' ಸಂಘದ ಕಾರ್ಯದರ್ಶಿ ಭುವನೇಶ್ವರಿ ಕಾಂಬಳೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.