ADVERTISEMENT

ವಿಜಯಪುರ | ಶಿವನಾಮ ಸ್ಮರಣೆ; ರಾತ್ರಿಯಿಡೀ ಜಾಗರಣೆ

ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ಶಿವರಾತ್ರಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 20:00 IST
Last Updated 21 ಫೆಬ್ರುವರಿ 2020, 20:00 IST
ವಿಜಯಪುರದಲ್ಲಿರುವ 770 ಲಿಂಗದ ಗುಡಿಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗಗಳ ದರ್ಶನ ಪಡೆದರು
ವಿಜಯಪುರದಲ್ಲಿರುವ 770 ಲಿಂಗದ ಗುಡಿಯಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವಲಿಂಗಗಳ ದರ್ಶನ ಪಡೆದರು   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಮಹಾ ಶಿವರಾತ್ರಿ ಅಂಗವಾಗಿ ಭಕ್ತರು ಶಿವನ ದೇವಸ್ಥಾನಗಳಲ್ಲಿ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.

ಭಕ್ತರು ನಸುಕಿನಿಂದಲೇ ಸರತಿ ಸಾಲಿನಲ್ಲಿ ನಿಂತು ಶಿವ ದರ್ಶನ ಪಡೆದು ಪುನೀತರಾದರು. ಶಿವ ದೇವಸ್ಥಾನ ಸೇರಿದಂತೆ ಇತರ ದೇವಸ್ಥಾನಗಳಲ್ಲೂ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಲಿಂಗ ಪೂಜೆ, ರುದ್ರಾಭಿಷೇಕ ನೆರವೇರಿಸಲಾಯಿತು. ಶಿವನ ದೇವಸ್ಥಾನಗಳಲ್ಲಿ ಸಹಸ್ರ ನಾಮಾವಳಿ, ತ್ರಿಕಾಲ ಪೂಜೆಗಳು ಜರುಗಿದವು.

ನಗರ ಹೊರವಲಯದಲ್ಲಿರುವ ಶಿವಗಿರಿ, ಜೋರಾಪುರ ಪೇಟೆಯಲ್ಲಿರುವ ಶಂಕರಲಿಂಗ ದೇವಸ್ಥಾನ, ಅಡವಿ ಶಂಕರಲಿಂಗ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, 770 ಲಿಂಗದ ಗುಡಿ, ಸುಂದರೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಕಡೆ ಭಕ್ತರು ಸರತಿ ಸಾಲಿನಲ್ಲಿ ನಿಂತು, ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಶಿವನ ದರ್ಶನಕ್ಕೆ ಬಂದಿದ್ದ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ರಾತ್ರಿಯಿಡೀ ಶಿವ ಸ್ತುತಿ, ಧ್ಯಾನ ಮತ್ತು ಭಜನಾ ಕಾರ್ಯಕ್ರಮಗಳು ಜರುಗಿದವು.

ಜ್ಯೋತಿರ್ಲಿಂಗ ದರ್ಶನ: ನಗರದ ದರ್ಗಾ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ 12 ಜ್ಯೋತಿರ್ಲಿಂಗ ಹಾಗೂ ಬೃಹತ್ ಶಿವಲಿಂಗ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಶಿವಲಿಂಗ ದರ್ಶಣ ಬಳಿಕ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಶಿವನ ದೇವಸ್ಥಾನಗಳ ಎದುರು ತೆಂಗಿನಕಾಯಿ, ಕರ್ಪೂರ, ವಿಭೂತಿ, ಊದಿನಕಡ್ಡಿ, ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.