ADVERTISEMENT

ವಿಜಯಪುರ: ಜೆಡಿಎಸ್ ತಲ್ಲಣ, ಕಾಂಗ್ರೆಸ್‌ ಒಡಕು; ಬಿಜೆಪಿ ಗೊಂದಲ

ಸಿಂದಗಿ ವಿಧಾನಸಭಾ ಉಪ ಚುನಾವಣೆ; ಬಿರುಸುಗೊಂಡ ರಾಜಕೀಯ ಚುಟುವಟಿಕೆ

ಬಸವರಾಜ ಸಂಪಳ್ಳಿ
Published 9 ಮಾರ್ಚ್ 2021, 21:33 IST
Last Updated 9 ಮಾರ್ಚ್ 2021, 21:33 IST
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್‌ ಸೇರ್ಪಡೆಯಾದರು
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅಶೋಕ ಮನಗೂಳಿ ಕಾಂಗ್ರೆಸ್‌ ಸೇರ್ಪಡೆಯಾದರು   

ವಿಜಯಪುರ: ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳತೊಡಗಿವೆ. ಜೆಡಿಎಸ್‌ನಲ್ಲಿ ತಲ್ಲಣ, ಕಾಂಗ್ರೆಸ್‌ನಲ್ಲಿ ಒಡಕು ಹಾಗೂ ಬಿಜೆಪಿಯಲ್ಲಿ ಗೊಂದಲ ಕಾಣಿಸಿಕೊಂಡಿದೆ.

ದಿವಂಗತ ಎಂ.ಸಿ.ಮನಗೂಳಿ ಪುತ್ರ ಅಶೋಕ ಮನಗೂಳಿ ಅವರ ರಾಜಕೀಯ ನಡೆ ಜೆಡಿಎಸ್‌ ಅಸ್ವಿತ್ವವನ್ನೇ ಅಲುಗಾಡಿಸಿದೆ. ಜೆಡಿಎಸ್‌ತೊರೆದು ಬೆಂಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್‌ ಸೇರ್ಪಡೆಯಾಗಿರುವುದು ‘ಕೈ‘ ಟಿಕೆಟ್‌ ಆಕಾಂಕ್ಷಿಗಳಾದಶರಣಪ್ಪ ಸುಣಗಾರ, ಮಲ್ಲಣ್ಣ ಸಾಲಿ, ವಿಠಲ ಕೋಳ್ಕೂರ, ಸುಜಾತಾ ಸೋಮನಾಥ ಕಳ್ಳಿಮನಿ ಅವರಲ್ಲಿ ತೀವ್ರ ನಿರಾಶೆ ಮೂಡಿಸಿದೆ.

ಜಿಲ್ಲೆಯ ಪ್ರಭಾವಿ ಕಾಂಗ್ರೆಸ್‌ ನಾಯಕರನ್ನು ಕಡೆಗಣಿಸಿ ಎಚ್‌.ಕೆ.ಪಾಟೀಲ, ಈಶ್ವರ ಖಂಡ್ರೆ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರನ್ನುಅಶೋಕ ಸಂಪರ್ಕಿಸಿ, ಕಾಂಗ್ರೆಸ್‌ ಸೇರ್ಪ‍ಡೆಯಾಗಿರುವುದು ವಿರೋಧಕ್ಕೂ ಕಾರಣವಾಗಿದೆ. ಇದು ಮುಂಬರುವ ಚುನಾವಣೆಯಲ್ಲಿ ಅಡ್ಡ ಪರಿಣಾಮವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ADVERTISEMENT

ನಾಲ್ಕು ದಶಕದಿಂದ ಸಿಂದಗಿ ಕ್ಷೇತ್ರದಲ್ಲಿ ‘ಜೆಡಿಎಸ್‌ ಎಂದರೆ ಮನಗೂಳಿ; ಮನಗೂಳಿ ಎಂದರೆ ಜೆಡಿಎಸ್’‌ ಎಂಬ ಪರಿಸ್ಥಿತಿ ಇತ್ತು. ಅಲ್ಲದೇ, ಉಪ ಚುನಾವಣೆಯಲ್ಲಿ ಅಶೋಕ ಅವರನ್ನೇ ಕಣಕ್ಕಿಳಿಸಲು ತಯಾರಿ ನಡೆದಿತ್ತು. ಆದರೆ, ಇದೀಗ ಅಶೋಕ ಮನಗೂಳಿ ಪಕ್ಷ‌ ತೊರೆದಿರುವುದರಿಂದ ಅಸ್ವಿತ್ವದ ಪ್ರಶ್ನೆ ಎದುರಾಗಿದೆ. ಪಕ್ಷದ ಭವಿಷ್ಯಕ್ಕೆ ಏಟು ಬಿದ್ದಿರುವುದರಿಂದ ಅಶೋಕ ವಿರುದ್ಧ ಸೇಡು ತೀರಿಸಿಕೊಳ್ಳಲು ‌ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈಜೋಡಿಸುವ ಸಾಧ್ಯತೆ ಇದೆ.

ಈ ನಡುವೆ, ಜೆಡಿಎಸ್‌ನಿಂದಲೇ ಸಿಂದಗಿ ಪುರಸಭೆ ಅಧ್ಯಕ್ಷರಾಗಿರುವ ಮನಗೂಳಿ ಅವರ ಇನ್ನೊಬ್ಬ ಪುತ್ರ ಡಾ.ಶಾಂತವೀರ ಮನಗೂಳಿ ಅವರ ನಡೆ ಕುತೂಹಲ ಮೂಡಿಸಿದೆ. ಅವರು ಪಕ್ಷದಲ್ಲೇ ಇರುತ್ತಾರೋ ಅಥವಾ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೊ ಅಥವಾ ತಟಸ್ಥರಾಗಿರುತ್ತಾರೊ ಎಂಬುದು ಬಹಿರಂಗವಾಗಬೇಕಿದೆ.

ಬಿಜೆಪಿಯಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ತೀವ್ರವಾಗಿದೆ. ಟಿಕೆಟ್‌ ಆಕಾಂಕ್ಷಿಗಳ ಲಾಭಿ ಪಕ್ಷದ ಮುಖಂಡರಿಗೆ ತಲೆನೋವು ಉಂಟು ಮಾಡಿದೆ.

ಮಾಜಿ ಶಾಸಕ ರಮೇಶ ಭೂಸನೂರ, ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಅಲ್ಲಾಪುರ, ಶಂಭುಲಿಂಗ ಕಕ್ಕಳಮೇಲಿ, ರವೀಂದ್ರ ಲೋಣಿ, ಮುತ್ತು ಶಾಬಾದಿ, ಮಾಜಿ ಸೈನಿಕ ಶಿವನಗೌಡ ಪಾಟೀಲ ಅವರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಅಲ್ಲದೇ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೆಸರೂ ಹರಿದಾಡುತ್ತಿರುವುದರಿಂದ ಬಿಜೆಪಿ ಗೊಂದಲದ ಗೂಡಾಗಿದೆ.

‘ಅಶೋಕ ಸೇರ್ಪಡೆಗೆ ಒಮ್ಮತದ ಸ್ವಾಗತ’
ಜಿಲ್ಲೆಯಲ್ಲಿ ಪಕ್ಷ ಮತ್ತಷ್ಟು ಪ್ರಬಲವಾಗಬೇಕು ಎಂಬ ಕಾರಣಕ್ಕೆಅಶೋಕ ಮನಗೂಳಿಕಾಂಗ್ರೆಸ್‌ ಸೇರ್ಪಡೆಗೆ ಪಕ್ಷದ ಯಾರಿಂದಲೂ ವಿರೋಧ ವ್ಯಕ್ತವಾಗಿಲ್ಲ.ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಎಲ್ಲರೂ ಒಮ್ಮತದಿಂದ ಅವರನ್ನು ಸ್ವಾಗತಿಸಿದ್ದೇವೆ. ಯಾವುದೇ ಭಿನ್ನಮತ ಇಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಶೋಕ ಅವರಿಗೆ ಮುಂದಿನ ಉಪ ಚುನಾವಣೆ ಟಿಕೆಟ್‌ ನೀಡುವ ಭರವಸೆ ನೀಡಿಲ್ಲ.ಟಿಕೆಟ್‌ ಯಾರಿಗೆ ನೀಡಬೇಕು ಎಂಬ ಬಗ್ಗೆ ಕಮಿಟಿ ಮಾಡಿ, ಸಮೀಕ್ಷೆ ನಡೆಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಮಾರ್ಚ್‌ 19ಕ್ಕೆ ಸಿಂದಗಿಯಲ್ಲಿ ಉಪ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆ ಇದೆ. ಡಿ.ಕೆ.ಶಿವಕುಮಾರ್‌, ಸಿದ್ಧರಾಮಯ್ಯ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಇಂದು (ಮಾರ್ಚ್‌ 10) ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ಇದೆ. ಈ ಸಭೆಯಲ್ಲಿ ನಾನು ಸೇರಿದಂತೆ ಪಕ್ಷದ ಮುಖಂಡರಾದ ಮಲ್ಲಣ್ಣ ಸಾಲಿ, ಸುಣಗಾರ, ವಿಠಲ ಕೋಳ್ಕೂರ ಅವರು ಭಾಗವಹಿಸಲಿದ್ದಾರೆ. ಸಣ್ಣಪುಟ್ಟ ಭಿನ್ನಮತವನ್ನು ಬಗೆಹರಿಸಲಾಗುವುದು ಎಂದರು.

‘ಪಕ್ಷದ ಗೆಲುವಿಗೆ ಕಾರ್ಯತಂತ್ರ’
ಪಕ್ಷ ಯಾರನ್ನೇ ಕಣಕ್ಕಿಳಿಸಿದರೂ ಸುಮಾರು 25 ಸಾವಿರ ವೋಟುಗಳ ಅಂತರದಿಂದ ಗೆಲುವು ಸಾಧಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕುಚಬಾಳ ‘ಪ್ರಜಾವಾಣಿ’ಗೆ ತಿಳಿಸಿದರು.

15 ದಿನಗಳಿಂದ ಕ್ಷೇತ್ರದಾದ್ಯಂತ ಚುನಾವಣೆ ತಂತ್ರಗಳು, ಸಿದ್ಧತೆ ಭರದಿಂದ ನಡೆದಿದೆ. ಬೂತ್‌ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಯಾವುದೇ ಸಮಯದಲ್ಲಿ ಚುನಾವಣೆ ಘೋಷಣೆಯಾದರೂ ಪಕ್ಷದ ಕಾರ್ಯಕರ್ತರ ಪಡೆ ಸನ್ನದ್ಧವಾಗಿದೆ. ಎಂದರು.

‘ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಸಿ.ಸಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪೂರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಚಂದ್ರಶೇಖರ ಕವಟಗಿ ಅವರಿಗೆ ಸಿಂದಗಿ ಉಪ ಚುನಾವಣೆಯ ಹೊಣೆ ವಹಿಸಲಾಗಿದೆ. ಇದರ ಜೊತೆಗೆ ಜಿಲ್ಲೆಯ ಪ್ರಮುಖರಿಗೂ ಚುನಾವಣೆ ಜವಾಬ್ದಾರಿ ವಹಿಸಲಾಗಿದೆ’ ಎಂದು ಹೇಳಿದರು.

‘ಅಶೋಕ ಕಾಂಗ್ರೆಸ್‌ ಸೇರ್ಪಡೆಯಿಂದ ಬಿಜೆಪಿಗೆ ಯಾವುದೇ ಪರಿಣಾಮವಾಗಲ್ಲ. ಪಕ್ಷವು ಬೃಹತ್‌ ಕಾರ್ಯಕರ್ತರ ಪಡೆಯನ್ನು ಹೊಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಗೆಲವಿಗೆ ಶ್ರೀರಕ್ಷೆಯಾಗಲಿದೆ’ ಎಂದು ಹೇಳಿದರು.

‘ಅಸ್ಥಿತ್ವಕ್ಕಾಗಿ ಜೆಡಿಎಸ್‌ ಕಣಕ್ಕೆ’
‘ಸಿಂದಗಿ ಉಪ ಚುನಾವಣೆಯಲ್ಲಿ ಅಶೋಕ ಮನಗೂಳಿ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರಾದ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಪ್ಪಿಗೆ ಸೂಚಿಸಿದ್ದರು. ಮನಗೂಳಿ ಕುಟುಂಬವನ್ನು ಬಹುವಾಗಿ ನಂಬಿದ್ದರು. ಅಗತ್ಯ ಸಿದ್ಧತೆಯೂ ನಡೆದಿತ್ತು. ಆದರೆ, ಅಶೋಕ ಪಕ್ಷ ತೊರೆಯುವ ಮೂಲಕ ದ್ರೋಹ ಎಸಗಿದ್ದಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಷೇತ್ರದಲ್ಲಿ ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಪಡೆ ಇದೆ. ಹೀಗಾಗಿ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದರು.

‘ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದ ಅತೃಪ್ತರು ಜೆಡಿಎಸ್‌ನಿಂದ ಸ್ಪರ್ಧಿಸಲು ಬಯಸಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಕೈ’ ಹಿಡಿದ ಅಶೋಕ ಮನಗೂಳಿಗೆ ಸಿಂದಗಿ ಟಿಕೆಟ್‌?
ಬೆಂಗಳೂರು:
ಸಿಂದಗಿ ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದ ದಿವಂಗತ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಿದರು. ಈ ಕ್ಷೇತ್ರಕ್ಕೆ ಶೀಘ್ರದಲ್ಲಿ ಉಪ ಚುನಾವಣೆ ಘೋಷಣೆಯಾಗಲಿದ್ದು, ಅಶೋಕ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆ ಇದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ‍ಕ್ಷದ ಧ್ವಜ ನೀಡಿ ಅಶೋಕ ಅವರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್‌ , ‘ನಿಧನರಾಗುವ 15 ದಿನ ಮೊದಲು ನಮ್ಮನ್ನು ಭೇಟಿ ಮಾಡಿದ್ದ ಮನಗೂಳಿ, ಮಗನನ್ನು ನಿಮ್ಮ ತೆಕ್ಕೆಗೆ ಹಾಕ್ತಿದ್ದೇನೆ ಎಂದು ಹೇಳಿ ಹೋಗಿದ್ದರು. ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರುತ್ತೇನೆ ಎಂದು ಅಶೋಕ ಕೂಡಾ ಹೇಳಿದ್ದರು. ಅಲ್ಲಂ ವೀರಭದ್ರಪ್ಪ ನೇತೃತ್ವದ ಪಕ್ಷ ಸೇರ್ಪಡೆ ಸಮಿತಿಯ ಶಿಫಾರಸಿನಂತೆ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ’’ ಎಂದರು.

‘ಎಂ.ಸಿ ಮನಗೂಳಿ ಅವರನ್ನೂ ಕಾಂಗ್ರೆಸ್‌ಗೆ ಬರುವಂತೆ ನಾನು ಆಹ್ವಾನಿಸಿದ್ದೆ. ಸಿಂದಗಿಗೆ ನೀರಿನ ವ್ಯವಸ್ಥೆ ಮಾಡಿದವನೇ ನಾನು. ಈ ಕ್ಷೇತ್ರದ ಉಪಚುನಾವಣೆ ಗೆಲ್ಲಲೇಬೇಕು. ಅಭ್ಯರ್ಥಿ ಯಾರು ಎನ್ನುವುದನ್ನು ಇನ್ನು ಮುಂದೆ ತೀರ್ಮಾನ ಮಾಡುತ್ತೇವೆ. ನಾಳೆಯೇ ವಿಧಾನಸಭೆ ವಿಸರ್ಜಿಸಿದರೂ ನಮ್ಮ‌ ಪಕ್ಷ ಅಧಿಕಾರಕ್ಕೆ ಬರಲಿದೆ. ಈಗಲೇ ಗುದ್ದಾಡುವುದು ಬೇಡ. ಅಧಿಕಾರ ಬಂದಾಗ ಎಲ್ಲರೂ ಹಂಚಿಕೊಳ್ಳೋಣ’ ಎಂದು ಪಕ್ಷದ ನಾಯಕರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

‘ಐದಾರು ಜಿಲ್ಲೆಗಳಿಗೆ ಮಾತ್ರ ಜೆಡಿಎಸ್‌ ಸೀಮಿತವಾಗಿದೆ. ಅದೊಂದು ಪ್ರಾದೇಶಿಕ ಪಕ್ಷ’ ಎಂದು ಮತ್ತೊಮ್ಮೆ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ‘ಅಶೋಕ ಅವರು ಜಿಲ್ಲೆಯ ಎಲ್ಲರ ಜೊತೆ ಹೋಗಬೇಕು. ನಮ್ಮವರೂ ಅವರಿಗೆ ಸಹಕಾರ ನೀಡಬೇಕು’ ಎಂದರು.

ಸಿಂದಗಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಅಶೋಕ ಮಾತನಾಡಿ, ‘ನಮ್ಮ‌ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುತ್ತೇನೆ. ನಾಯಕರ ಮಾರ್ಗದರ್ಶನದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ‌ ಕಟ್ಟುತ್ತೇನೆ. ತಂದೆಯವರು ಮೈತ್ರಿ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದರು’ ಎಂದು ನೆನಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.