ADVERTISEMENT

‘ಒಳಹೊಡತ’ದ ಬೇಗುದಿಯಲ್ಲಿ ಕಾಂಗ್ರೆಸ್‌, ಬಿಜೆಪಿ

ಸಿಂದಗಿ ವಿಧಾನಸಭೆ ಉಪ ಚುನಾವಣಾ ಅಖಾಡ

ಬಸವರಾಜ ಸಂಪಳ್ಳಿ
Published 9 ಅಕ್ಟೋಬರ್ 2021, 15:43 IST
Last Updated 9 ಅಕ್ಟೋಬರ್ 2021, 15:43 IST
ಪ್ರೊ.ರಾಜು ಅಲಗೂರ
ಪ್ರೊ.ರಾಜು ಅಲಗೂರ   

ವಿಜಯಪುರ: ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಟಿಕೆಟ್‌ ಹಂಚಿಕೆ, ನಾಮಪತ್ರ ಸಲ್ಲಿಕೆ ಮುಗಿದು ಅಖಾಡ ರಂಗೇರುತ್ತಿರುವ ಹೊತ್ತಿನಲ್ಲೇ ಬಿಜೆಪಿ, ಕಾಂಗ್ರೆಸ್‌ನಲ್ಲಿ ‘ಒಳ ಹೊಡತ’ ನೀಡಲು ತೆರೆಮರೆಯಲ್ಲಿ ಕಸರತ್ತು ನಡೆದಿದೆ.

ಅಶೋಕ ಮನಗೂಳಿ ಮೂಲತಃ ಕಾಂಗ್ರೆಸ್‌ ಅಲ್ಲ. ಅದೇ ರೀತಿ ರಮೇಶ ಭೂಸನೂರ ಕೂಡ ಮೂಲ ಬಿಜೆಪಿಗರಲ್ಲ. ಹೀಗಾಗಿ ಎರಡೂ ಪಕ್ಷಗಳಲ್ಲಿ ಹತ್ತಾರು ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದವರು ಈಗಾಗಲೇ ಹಲವು ಬಾರಿ ವಿರೋಧ ದಾಖಲಿಸಿದ್ದಾರೆ. ಇಷ್ಟಾದರೂ ಎರಡು ಪಕ್ಷಗಳ ವರಿಷ್ಠರು ವಿರೋಧವನ್ನು ಲೆಕ್ಕಿಸಿದೇ ಹೊರಗಿನವರಿಗೆ ಮಣಿ ಹಾಕಿರುವುದರಿಂದ ‘ಮೂಲ’ ಪಕ್ಷದವರಿಂದ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರ ನಡೆದಿದೆ.

ಕಾಂಗ್ರೆಸ್‌ ಅತೃಪ್ತರು ಬಿಜೆಪಿ ಅಭ್ಯರ್ಥಿಗೆ ಹಾಗೂ ಬಿಜೆಪಿ ಅತೃಪ್ತರು ಕಾಂಗ್ರೆಸ್‌ ಅಭ್ಯರ್ಥಿಗೆ, ಇನ್ನು ಕೆಲವರು ಜೆಡಿಎಸ್ ಅಭ್ಯರ್ಥಿಗೆ ಸಹಕರಿಸಲಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಜೊತೆಗೆ ಜಿಲ್ಲೆಯ ಬಿಜೆಪಿಯ ಮೂವರು ಶಾಸಕರು ಹಾಗೂ ಕಾಂಗ್ರೆಸ್‌ನ ಮೂವರು ಶಾಸಕರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿಯೇ ಮತಯಾಚಿಸುತ್ತಾರೆಯೇ? ಇಲ್ಲವೇ? ಎಂಬುದು ಯಕ್ಷಪ್ರಶ್ನೆಯಾಗಿದೆ.

ADVERTISEMENT

ಜಾತಿ ಲೆಕ್ಕಾಚಾರ:

ಹಿಂದುಳಿದ ವರ್ಗ, ಜಾತಿಗಳಿಗೆ ಸೇರಿದ ಮತದಾರರು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಈ ವರ್ಗಗಳಿಗೆ ಸೇರಿದ ಮುಖಂಡರನ್ನು ಪರಿಗಣಿಸದೇ ಲಿಂಗಾಯತ ಗಾಣಿಗ ಸಮಾಜಕ್ಕೆ ಸೇರಿದ ರಮೇಶ ಭೂಸನೂರ ಅವರಿಗೆ ಬಿಜೆಪಿ ‌ಮತ್ತು ಪಂಚಮಸಾಲಿ ಸಮಾಜಕ್ಕೆ ಸೇರಿದ ಅಶೋಕ ಮನಗೂಳಿ ಅವರಿಗೆ ಕಾಂಗ್ರೆಸ್‌ ಮಣೆ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನೊಂದೆಡೆ ಅಲ್ಪಸಂಖ್ಯಾತರ ಮತಗಳನ್ನು ಕೇಂದ್ರೀಕರಿಸಿ ಜೆಡಿಎಸ್‌ ಪಕ್ಷವು ಅಭ್ಯರ್ಥಿಯನ್ನು ಕಣಿಳಿಸಿರುವುದು ಕಾಂಗ್ರೆಸ್‌ ಪಾಲಿಗೆ ಮುಳುವಾಗಿದೆ. ಈ ನಡುವೆ ಹಿಂದುಳಿದ ವರ್ಗಗಳ ಮತದಾರರ ವಿಶ್ವಾಸ ಗಳಿಸಲು ಯಾವ ಅಭ್ಯರ್ಥಿ ಶಕ್ತರಾಗುತ್ತಾರೋ ಅವರಿಗೆ ಗೆಲುವು ಸುಲಭವಾಗಲಿದೆ.

****

ಕಾಂಗ್ರೆಸ್‌ ಟಿಕೆಟ್‌ ವಂಚಿತ ಅತೃಪ್ತರೊಂದಿಗೆ ವರಿಷ್ಠರು ಮಾತನಾಡಿ ಸರಿಪಡಿಸಿದ್ದಾರೆ. ಟಿಕೆಟ್‌ ಆಕಾಂಕ್ಷಿಗಳೇ ಚುನಾವಣೆ ಮುಂಚೂಣಿಯಲ್ಲಿ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಪಕ್ಷದಲ್ಲಿ ಯಾವುದೇ ಅತೃಪ್ತಿ, ಅಸಮಾಧಾನ ಇಲ್ಲ

–ಪ್ರೊ.ರಾಜು ಅಲಗೂರ, ಅಧ್ಯಕ್ಷ, ಕಾಂಗ್ರೆಸ್‌ ಜಿಲ್ಲಾ ಘಟಕ

****

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದವರೂ ನಾಮಪತ್ರ ಸಲ್ಲಿಸುವ ವೇಳೆ ಪಾಲ್ಗೊಂಡಿದ್ದರು. ಅತೃಪ್ತಿ ಎಂಬುದೇ ಇಲ್ಲ. ಎಲ್ಲರೂ ಪಕ್ಷದ ಶಿಸ್ತಿನ ಶಿಫಾಯಿಗಳಾಗಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಸೇರಿ ಶ್ರಮಿಸಲಿದ್ದೇವೆ.

-ಆರ್‌.ಎಸ್‌.ಪಾಟೀಲ ಕುಚಬಾಳ, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.