ADVERTISEMENT

ಸಿಂದಗಿ ಉಪ ಚುನಾವಣೆ: ಸ್ಟ್ರಾಂಗ್ ರೂಂನಲ್ಲಿ ಮತಯಂತ್ರಗಳು ಭದ್ರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2021, 6:35 IST
Last Updated 31 ಅಕ್ಟೋಬರ್ 2021, 6:35 IST
ವಿಜಯಪುರ ಸೈನಿಕ್ ಶಾಲೆಯ ಒಡೆಯರ್ ಹೌಸ್ ನ ಭದ್ರತಾ ಕೊಠಡಿ ಎದುರು ಕಾವಲು ನಿಂತಿರುವ ಅರೆಸೇನಾ ಪಡೆ ಸಿಬ್ಬಂದಿ
ವಿಜಯಪುರ ಸೈನಿಕ್ ಶಾಲೆಯ ಒಡೆಯರ್ ಹೌಸ್ ನ ಭದ್ರತಾ ಕೊಠಡಿ ಎದುರು ಕಾವಲು ನಿಂತಿರುವ ಅರೆಸೇನಾ ಪಡೆ ಸಿಬ್ಬಂದಿ   

ವಿಜಯಪುರ: ಸಿಂದಗಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿದ್ದು, ಮತಯಂತ್ರಗಳನ್ನು ವಿಜಯಪುರ ನಗರದಲ್ಲಿರುವ ಸೈನಿಕ್ ಶಾಲೆಯ ಒಡೆಯರ್ ಹೌಸ್‌ನ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕಣದಲ್ಲಿರುವ ಆರು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ನ. 2ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣಾ ಆಯೋಗ ಮತ ಎಣಿಕೆಗೆ ಸಿದ್ದತೆ ಮಾಡಿಕೊಂಡಿದೆ. ಅಂದು ಮಧ್ಯಾಹ್ನದ ವೇಳೆಗಾಗಲೇ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ.

ಕಳೆದ ಒಂದು ತಿಂಗಳಿಂದ ಹಗಲು, ರಾತ್ರಿ ಚುನಾವಣಾ ಪ್ರಚಾರ, ಸಭೆ, ಸಮಾರಂಭ, ಮತಯಾಚನೆಯಲ್ಲಿ ಸುಸ್ತಾಗಿರುವ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಅವರು ಭಾನುವಾರ ಸ್ವಲ್ಪ ನಿರಾಳವಾಗಿದ್ದರು. ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆದರು.

ADVERTISEMENT

ಶೇ 69.41 ಮತದಾನ: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಒಟ್ಟು 1,20,939 ಪುರುಷ, 1,13,466 ಮಹಿಳಾ ಮತ್ತು 32 ಇತರೆ ಮತದಾರರ ಸೇರಿದಂತೆ 2,34,437 ಮತದಾರರ ಪೈಕಿ 85,859 ಪುರುಷರು, 76,990 ಮಹಿಳಾ ಮತ್ತು 3 ಇತರೆ ಮತದಾರರು ಸೇರಿದಂತೆ 1,62,852 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

2018ರಲ್ಲಿ ನಡೆದಿದ್ದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂದಗಿ ಕ್ಷೇತ್ರದಲ್ಲಿ ಶೇ 70.85 ರಷ್ಟು ಮತದಾನವಾಗಿತ್ತು. ಆದರೆ, ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 69.41ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಶೇ 1.44ರಷ್ಟು ಕಡಿಮೆ ಮತದಾನವಾಗಿದೆ.

ಯಾವ ಅಭ್ಯರ್ಥಿ ಗೆಲ್ಲಬಹುದು ಎಂಬ ಲೆಕ್ಕಾಚಾರ ನಡೆದಿರುವ ಮಧ್ಯೆಯೇ ಅನೇಕರು, ಸೋಲು-ಗೆಲುವಿನ ಕುರಿತು ಬಾಜಿ ಕಟ್ಟತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.