
ಸಿಂದಗಿ: ನೂತನ ಮಹಾತ್ಮ ಗಾಂಧಿ ವೃತ್ತ, ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಚಕ್ರ, ನಗರಸಭೆ ಕಾರ್ಯಾಲಯ, ಸರ್ಕಾರಿ ಆಸ್ಪತ್ರೆಗೆ ಅತ್ಯಾಧುನಿಕ ಹೈಟೆಕ್ ಆ್ಯಂಬುಲನ್ಸ್, ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ, ಚಿಕ್ಕಮಕ್ಕಳ ಐಸಿಯು ವಾರ್ಡ್ ಸೇರಿದಂತೆ ಐದು ಪ್ರಮುಖ ಕಾರ್ಯಕ್ರಮಗಳು ಜ. 26ರಂದು ಸಂಜೆ 5ಕ್ಕೆ ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಹಮ್ಮಿಕೊಳ್ಳುವ ಸಾರ್ವಜನಿಕ ಸಮಾರಂಭದಲ್ಲಿ ಉದ್ಘಾಟನೆಯಾಗಲಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೃಹತ್ ಆಕಾರದ ಧ್ಯಾನಾಸಕ್ತ ಮಹಾತ್ಮಗಾಂಧಿ ಪುತ್ಥಳಿ, 18 ಅಡಿ ಎತ್ತರದ ರಾಷ್ಟ್ರೀಯ ಲಾಂಛನ ಅಶೋಕ ಚಕ್ರ ಸ್ತಂಭ, ₹ 45 ಲಕ್ಷ ವೆಚ್ಚದ ಆ್ಯಂಬುಲನ್ಸ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟನೆಗೊಳಿಸುವರು ಎಂದು ಹೇಳಿದರು.
ಸೊನ್ನ ಮಠದ ಶಿವಾನಂದ ಸ್ವಾಮೀಜಿ, ಸಿಂದಗಿ ಧಮ್ಮ ವಿಜಯ ಬುದ್ಧ ವಿಹಾರದ ಸಂಘಪಾಲ ಬಂತೇಜಿ, ಸುಕ್ಷೇತ್ರ ಹುಲಜಂತಿ ಪಟ್ಟದ ಪೂಜಾರಿ ಮಾಳಿಂಗರಾಯ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸುವರು.
ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ: ಜ. 27 ಮತ್ತು 28ರಂದು ಎಚ್.ಜಿ.ಕಾಲೇಜು ಮೈದಾನದಲ್ಲಿ ದಿವಂಗತ ಮಾಜಿ ಸಚಿವ ಎಂ.ಸಿ. ಮನಗೂಳಿ ಅವರ 5ನೆಯ ಸ್ಮರಣೆ ಅಂಗವಾಗಿ ವಾಲಿಬಾಲ್ ಸಂಸ್ಥೆ ಕರ್ನಾಟಕ ಮತ್ತು ಎಂ.ಸಿ.ಮನಗೂಳಿ ಪ್ರತಿಷ್ಠಾನದ ಸಹಯೋಗದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ‘ಆಧುನಿಕ ಭಗೀರಥ ಕಪ್’ ವಾಲಿಬಾಲ್ ಟೂರ್ನಿ ನಡೆಯಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯ ಮಟ್ಟದ ಕರ್ನಾಟಕ ಪೊಲೀಸ್ ತಂಡ, ಎ.ಎಸ್.ಪಿ ಬೆಂಗಳೂರು, ಕರ್ನಾಟಕ ಪೋಸ್ಟಲ್, ಸ್ಪೋರ್ಟ್ಸ್ ಹಾಸ್ಟೆಲ್, ಎಸ್.ಡಿ.ಎಂ ಉಜಿರೆ, ಸೌಥ್ ಸೆಂಟ್ರಲ್ ರೈಲ್ವೆ ಹುಬ್ಬಳ್ಳಿ ಹೀಗೆ ಆರು ಪ್ರತಿಷ್ಠಿತ ವಾಲಿಬಾಲ್ ತಂಡಗಳು ಭಾಗವಹಿಸಲಿವೆ.
ಜ. 27 ರಂದು ಸಂಜೆ 4ಕ್ಕೆ ಆರು ತಂಡದ ಆಟಗಾರರನ್ನು ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಿಂದ ಮೆರವಣಿಗೆಯ ಮುಖಾಂತರ ಆಟದ ಮೈದಾನಕ್ಕೆ ಸ್ವಾಗತಿಸಲಾಗುವುದು. ಟೂರ್ನಿಯನ್ನು ಮಾಜಿ ಶಾಸಕ ಶರಣಪ್ಪ ಸುಣಗಾರ ಉದ್ಘಾಟಿಸುವರು.
ಜ. 28ರಂದು ರಾತ್ರಿ 9ಕ್ಕೆ ಟೂರ್ನಿ ಸಮಾರೋಪ, ಬಹುಮಾನ ಸಮಾರಂಭದಲ್ಲಿ ಸಚಿವ ಶಿವಾನಂದ ಪಾಟೀಲ ಪಾಲ್ಗೊಳ್ಳುವರು. ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ₹ 1 ಲಕ್ಷ, ದ್ವಿತೀಯ ಬಹುಮಾನ ₹ 75 ಸಾವಿರ, ತೃತಿಯ ಬಹುಮಾನ ₹ 50 ಸಾವಿರ ಹಾಗೂ 4ನೇ ಬಹುಮಾನ ₹ 25 ಸಾವಿರ ನಗದು ಜೊತೆಗೆ ‘ಆಧುನಿಕ ಭಗೀರಥ ಕಪ್’ ನೀಡಲಾಗುವುದು.
ಮುಂಬರುವ ದಿನಗಳಲ್ಲಿ ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಪುತ್ಥಳಿ, ಸ್ವಾಮಿ ವಿವೇಕಾನಂದ ಪುತ್ಥಳಿ, ನವೀಕರಣಗೊಂಡ ಟಿಪ್ಪು ಸುಲ್ತಾನ್ ವೃತ್ತ ಹಾಗೂ ಕೆರೆಯ ಕೆಳಗಿನ ಸಿಂದಗಿ ಸಿರಿ ಪೂಜ್ಯ ಶಾಂತವೀರ ಉದ್ಯಾನದಲ್ಲಿ ಗದಗ ತೋಂಟದ ಡಾ.ಸಿದ್ಧಲಿಂಗ ಶ್ರೀಗಳ ಪುತ್ಥಳಿ ಅನಾವರಣ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಳ್ಳಲಿವೆ ಎಂದು ಶಾಸಕ ಮನಗೂಳಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಕಾಂಗ್ರೆಸ್ ಮುಖಂಡರಾದ ವೈ.ಸಿ.ಮಯೂರ, ಪ್ರವೀಣ ಕಂಟಿಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.