
ಸಿಂದಗಿ: ಅಭಿವೃದ್ಧಿ ವಿಷಯವಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಮಧ್ಯೆ ತಾರತಮ್ಯ ಸಲ್ಲದು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಸಾರಿಗೆ, ನೀರಾವರಿ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ನಮಗೆ ತಾರತಮ್ಯ ಆಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಆರೋಪಿಸಿದರು.
ವಿಜಯಪುರ ನಗರದಲ್ಲಿ ಪಿಪಿಪಿ ಮಾದರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವಿರೋಧಿಸಿ ಕಳೆದ 85 ದಿನಗಳಿಂದ ಪ್ರತಿಭಟನೆ ನಡೆದಿದೆ. ವಿಜಯಪುರದಲ್ಲಿ ಈಗಾಗಲೇ ಎರಡು ವೈದ್ಯಕೀಯ ಕಾಲೇಜುಗಳಿವೆ. ಈಗ ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಮಂಜೂರು ಮಾಡಬಾರದು. ಈ ಕಾಲೇಜನ್ನು ಗ್ರಾಮೀಣ ಭಾಗ ಸಿಂದಗಿ-ಇಂಡಿ ಬಳಿ ಇಲ್ಲವೇ ಸಿಂದಗಿ-ದೇವರಹಿಪ್ಪರಗಿ ಬಳಿ ಮಂಜೂರು ಮಾಡಬೇಕು ಎಂದು ಅವರು ಕೋರಿದರು.
ಬೆಳಗಾವಿ ಸುವರ್ಣ ವಿಧಾನಸೌಧ ವಿಧಾನಸಭೆಯಲ್ಲಿ ಶುಕ್ರವಾರ ಉತ್ತರಕರ್ನಾಟಕ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಅವರು, ಅಲ್ಲಿ ಮಾತನಾಡಿರುವ ವಿಷಯವನ್ನು ದೂರವಾಣಿ ಮುಖಾಂತರ ಪ್ರಜಾವಾಣಿಗೆ ತಿಳಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಿಂದಗಿ ಮತಕ್ಷೇತ್ರದಲ್ಲಿ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಗ್ರಾಮೀಣ ಜನರಿಗೆ ಆರೋಗ್ಯ ಸೌಲಭ್ಯ ದೊರಕಬೇಕು. ಹೀಗಾಗಿ ಹೆಚ್ಚಿನ ಆದ್ಯತೆಗಾಗಿ ಕೇಳಿಕೊಳ್ಳಲಾಗಿದೆ ಎಂದರು.
ನನ್ನ ಮತಕ್ಷೇತ್ರದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಒಟ್ಟು ₹101 ಕೋಟಿ ಬೆಳೆ ಪರಿಹಾರ ಬಿಡುಗಡೆಗೊಳಿಸಿದ್ದಕ್ಕೆ ಅಭಿನಂದಿಸಲಾಗಿದೆ ಎಂದು ತಿಳಿಸಿದರು.
ಸಿಂದಗಿ-ಇಂಡಿ ಭಾಗದಲ್ಲಿ ಒಟ್ಟು ಎಂಟು ಸಕ್ಕರೆ ಕಾರ್ಖಾನೆಗಳಿವೆ. ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ದಾರಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಹೊಲಗಳಿಗೆ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.