ADVERTISEMENT

ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವ: ಬೆಳ್ಳಿ ತೇರು ಎಳೆಯಲಿರುವ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:18 IST
Last Updated 24 ನವೆಂಬರ್ 2025, 4:18 IST
ಬೆಳ್ಳಿ ತೇರು
ಬೆಳ್ಳಿ ತೇರು   

ಸಿಂದಗಿ: ಪಟ್ಟಣದ ಸಾರಂಗಮಠ-ಗಚ್ಚಿನಮಠದ ವೀರಭದ್ರೇಶ್ವರ ಹಾಗೂ ಭದ್ರಕಾಳಿ ಅಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ನ.25ರಂದು ಮಧ್ಯಾಹ್ನ 2 ಗಂಟೆಗೆ ಸಾರಂಗಮಠದಿಂದ ಗಚ್ಚಿನಮಠದ ವರೆಗೆ 1 ಕಿ.ಮೀ ದೂರದವರೆಗೆ ಮಹಿಳೆಯರು ಬೆಳ್ಳಿ ತೇರು ಎಳೆಯುತ್ತಾರೆ.

ತೇರಿನಲ್ಲಿ ವೀರಭದ್ರೇಶ್ವರ ಮತ್ತು ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿ ಪ್ರತಿಷ್ಠಾಪನೆಗೊಂಡಿರುತ್ತದೆ. ಮಹಿಳೆಯರೆ ಬೆಳ್ಳಿ ತೇರು ಎಳೆಯುವುದು ಉತ್ತರಕರ್ನಾಟಕ ಭಾಗದಲ್ಲಿ ಇದೊಂದು ವೈಶಿಷ್ಟ್ಯವಾಗಿದೆ. ಈ ತೇರಿಗೆ ಹರಕೆ ತೇರು ಎಂದು ಕರೆಯಲಾಗುತ್ತದೆ. ನಾಡಿನ ವಿವಿಧ ಭಾಗಗಳಿಂದ ಮಹಿಳೆಯರು ಇಷ್ಟಾರ್ಥ ಸಿದ್ಧಿಗಾಗಿ ತೇರು ಎಳೆಯಲು ಪಾಲ್ಗೊಳ್ಳುತ್ತಾರೆ.

ಈ ಬೆಳ್ಳಿ ತೇರನ್ನು ಮಹಿಳೆಯರು ಎಳೆಯುವ ಕಾರ್ಯ 2018 ರಿಂದ ಪ್ರಾರಂಭಗೊಂಡಿದೆ. 120 ಕೆ.ಜಿ ತೂಕದ ಈ ಬೆಳ್ಳಿ ತೇರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗೋಪಾಡಿ ಗ್ರಾಮದ ಶಿಲ್ಪಿಗಳಾದ ಪ್ರಭಾಕರ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಸಹೋದರರು ನಿರ್ಮಿಸಿದ್ದಾರೆ. ನವೆಂಬರ್ 24ರಂದು ಬೆಳಿಗ್ಗೆ 9 ಗಂಟೆಗೆ ಸಾರಂಗಮಠದಿಂದ ಹೊರಡುವ ವೀರಭದ್ರೇಶ್ವರ, ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವವು ತಾಯಿ ನೀಲಗಂಗಾದೇವಿ ದೇವಸ್ಥಾನ ರಸ್ತೆ ಮಾರ್ಗವಾಗಿ ಊರನ ಹಿರಿಯಮಠದಿಂದ ಗಚ್ಚಿನಮಠ ತಲುಪುವುದು. ಅಂದೇ ಸಂಜೆ 5 ಗಂಟೆಗೆ ಗಚ್ಚಿನಮಠದಲ್ಲಿ ಕಾರ್ತಿಕೋತ್ಸವ ನಡೆಯುವುದು.

ADVERTISEMENT

ನಂತರ ಗಚ್ಚಿನಮಠದಿಂದ ಸಾರಂಗಮಠದಲ್ಲಿನ ಸೋಮೇಶ್ವರ, ದಾನಮ್ಮದೇವಿ ದೇವಸ್ಥಾನಕ್ಕೆ ಮರಳುವ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಕೈಯಲ್ಲಿ ದೀಪ ಹಿಡಿದುಕೊಂಡು ಸಾಗುವರು. ಸಂಜೆ 6.30ಗಂಟೆಗೆ ಭದ್ರಕಾಳಿ ಅಮ್ಮನವರ ಕಲ್ಯಾಣ ಮಹೋತ್ಸವ ಹಾಗೂ ವೀರ ವೀರಾಗಿಣಿ ಅಕ್ಕಮಹಾದೇವಿ ಪುರಾಣ-ಪ್ರವಚನ ಮಹಾಮಂಗಲ ನಡೆಯಲಿದೆ ಎಂದು ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.