ADVERTISEMENT

ಮಣ್ಣು ರಾಷ್ಟ್ರದ ಸಂಪತ್ತು: ಯತ್ನಾಳ

ವಿಶ್ವ ಮಣ್ಣು ದಿನಾಚರಣೆ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 11:55 IST
Last Updated 5 ಡಿಸೆಂಬರ್ 2022, 11:55 IST
ವಿಜಯಪುರದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿ ಮಾತನಾಡಿದರು
ವಿಜಯಪುರದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿ ಮಾತನಾಡಿದರು   

ವಿಜಯಪುರ:ಮಣ್ಣು ಅತ್ಯಂತ ಶ್ರೇಷ್ಟ ನೈಸರ್ಗಿಕ ಸಂಪನ್ಮೂಲ, ಇದು ರಾಷ್ಟ್ರದ ಸಂಪತ್ತು, ರೈತರು ಇದನ್ನು ಅತೀ ಜಾಣ್ಮೆಯಿಂದ ನಿರ್ವಹಿಸಿ ಉತ್ಪಾದನಾ ಸಾಮರ್ಥ್ಯವನ್ನು ಉನ್ನತ ಮಟ್ಟದಲ್ಲಿ ಇಟ್ಟುಕೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ರೋಟರಿ ಸಂಸ್ಥೆ, ಈಶಾ ಫೌಂಡೇಶನ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ಸರ್ಕಲ್‍ನಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಣ್ಣು ಅಮೂಲ್ಯವಾದ ಸಜೀವ ಸಂಪತ್ತು. ಆದರೆ, ಇಂದು ಎಲ್ಲರೂ ಇಳುವರಿ ಹೆಚ್ಚಿಗೆ ಮಾಡಬೇಕೆನ್ನುವ ಹಂಬಲದಿಂದ ಅಧಿಕ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಮಾಡಿರುವುದರಿಂದ ಭೂಮಿ ಫಲವತ್ತತೆ ಕಡಿಮೆಯಾಗಿದೆ ಮತ್ತು ಬೆಳೆಯ ಇಳುವರಿಯೂ ಕೂಡ ಗಣನೀಯವಾಗಿ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಇಂದಿನ ಯುವಕರು ಯಾವುದೇ ನೌಕರಿಗೆ ಆಸೆ ಪಡದೆ ಹೈನುಗಾರಿಕೆ ಮಾಡಿ, ಸಾವಯವ ಗೊಬ್ಬರವನ್ನು ಕೃಷಿಗೆ ಬಳಸಿ ಹಾಲು ತುಪ್ಪವನ್ನು ಊಟ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳುವದರ ಜೊತೆಗೆ ಸಾವಯವ ಕೃಷಿಯಿಂದ ಭೂಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದರು.

ರೈತರು ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ ಭೂಮಿಗೆ ಯಥೇಚ್ಛವಾಗಿ ಬಳಸಬೇಕು, ಕೃಷಿ ತ್ಯಾಜ್ಯ ವಸ್ತುಗಳನ್ನು ಸುಡದೆ ಮೇಲು ಹೊದಿಕೆಯಾಗಿ ಬಳಸಬೇಕು. ಇದರಿಂದ ಮಣ್ಣಿನ ತೇವಾಂಶ ಕಾಯ್ದುಕೊಳ್ಳುವುದಲ್ಲದೆ, ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳಿಗೆ ಆಶ್ರಯ ನೀಡಿ, ಬೆಳೆಗಳಿಗೆ ಪೋಷಕಾಂಶಗಳು ಲಭಿಸಿ ಇಳುವರಿ ಮಟ್ಟ ಸುಧಾರಿಸಿದಂತಾಗುತ್ತದೆ. ರೈತರು ಮಣ್ಣನ್ನು ಸಂರಕ್ಷಣೆ ಮಾಡಿ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಬಿ. ಬೆಳ್ಳಿ, ಕೃಷಿಗೆ ಉತ್ತಮ ಆರೋಗ್ಯದ ಮಣ್ಣು ಆಧಾರವಾಗಿದೆ. ಆದರೆ, ಏರುತ್ತಿರುವ ಜನಸಂಖ್ಯೆಯಿಂದಾಗಿ ಹಾಗೂ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಮಣ್ಣು, ನೀರು, ಗಾಳಿ ವಿಷವಾಗಿ ಪರಿಣಮಿಸುತ್ತಿದೆ ಹಾಗೂ ಮಣ್ಣಿನ ಫಲವತ್ತತೆ ಮತ್ತು ಕೃಷಿ ಉತ್ಪಾದಕತೆಯ ಮೇಲೆ ದುಷ್ಟರಿಣಾಮ ಬೀರಿ ಮಣ್ಣಿನ ಸುಸ್ಥಿರ ಉತ್ಪಾದಕತೆ ಕುಸಿದು ಹೋಗುತ್ತಿದೆ ಎಂದರು.

ಈಶಾ ಫೌಂಡೇಶನ್ ಸಂಚಾಲಕ ಬಸವರಾಜ ಬಿರಾದಾರ ಮಾತನಾಡಿ, ವರ್ಷದಿಂದ ವರ್ಷಕ್ಕೆ ಮಣ್ಣು ತನ್ನ ಜೀವವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿದೆ. ಇನ್ನು ಕೇವಲ 60 ವರ್ಷಗಳಲ್ಲಿ ಮಣ್ಣು ನಶಿಸಿ ಹೋಗುವುದು ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಇದನ್ನು ಮನಗಂಡು ಸದ್ಗುರು ಅವರು ಜಗತ್ತಿನ ಜಗತ್ತಿನಾದ್ಯಂತ ಬೈಕಿನಲ್ಲಿ ಸಂಚರಿಸಿ, ಮಣ್ಣು ಉಳಿಸಿ ಅಂದೋಲನವನ್ನು ಆರಂಭಿಸಿ ಜಗತ್ತಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ ಎಂದರು.

ಮಣ್ಣು ಪರೀಕ್ಷೆ ಮಹತ್ವ, ಪೋಷಕಾಂಶಗಳ ಮಹತ್ವ, ಮಣ್ಣು ಆರೋಗ್ಯ ಕಾರ್ಡ್ ಯೋಜನೆ, ಹಸಿರೆಲೆ ಗೊಬ್ಬರಗಳ ಮಹತ್ವ ಕುರಿತು ಕೃಷಿ ವಿಜ್ಞಾನ ಕೇಂದ್ರ ತಜ್ಞರು ಹಾಗೂ ಕೃಷಿ ಇಲಾಖೆಗಳ ಅಧಿಕಾರಿಗಳು ಉಪನ್ಯಾಸ ನೀಡಿದರು.

ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲಾಯಿತು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರೂಪ ಎಲ್., ಉಪ ಕೃಷಿ ನಿರ್ದೇಶಕ ಪಕಾಶ ಚಹ್ವಾಣ, ಕೆವಿಕೆ ಮುಖ್ಯಸ್ಥೆ ಶುಭಾ ಎಸ್., ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ದೊಡ್ಡಮನಿ, ಕೃಷಿ ಅಧಿಕಾರಿ ಜೆ. ಬಿ. ದಶವಂತ, ಮುಖಂಡರಾದ ಎಂ. ಎಸ್. ರುದ್ರಗೌಡರ, ಸಿದ್ದೇಶ್ವರ ಸಂಸ್ಥೆಯ ಸಂಗು ಸಜ್ಜನ, ರೋಟರಿ ಸಂಸ್ಥೆ ಅಧ್ಯಕ್ಷ ರುದ್ರಗೌಡ ಪಾಟೀಲ, ಕೃಷ್ಣಾ ಗುನ್ನಾಳಕರ, ಜಿ.ಎಸ್. ಕುಲಕರ್ಣಿ ಪ್ರಗತಿಪರ ರೈತರಾದ ಶಿವಾನಂದ ಮಂಗಾನವರ, ಎಸ್. ಟಿ. ಪಾಟೀಲ, ಕಾಶಿರಾಯಗೌಡ ಬಿರಾದಾರ, ಮಹಾಂತೇಶ ಗುಬ್ಬೆವಾಡ, ಶ್ರೀಶೈಲ ಆಳೂರ ಇದ್ದರು.

ನಾವೆಲ್ಲರೂ ಇಂದಿನ ದಿನ ಪ್ರತಿಜ್ಞೆ ಕೈಗೊಂಡು, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಮಣ್ಣನ್ನು ಸುಸ್ಥಿತಿಯಲ್ಲಿಟ್ಟು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಬೇಕಾಗಿದೆ

–ಬಸನಗೌಡ ಪಾಟೀಲ ಯತ್ನಾಳ,ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.