ADVERTISEMENT

ನಾಲತವಾಡ: ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರೈತರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:39 IST
Last Updated 12 ನವೆಂಬರ್ 2025, 5:39 IST
<div class="paragraphs"><p>ನಾಲತವಾಡ ಸಮೀಪದ ಸಿದ್ದಾಪುರ (ನಾಗಬೇನಾಳ) ಖಾಸಗಿ ಜಮೀನಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಸ್ಥಾಪಿಸುತ್ತಿದ್ದಾರೆಂದು ಆಕ್ಷೇಪಿಸಿದ ರೈತರು ತಡೆ ನೀಡಿದರು</p></div>

ನಾಲತವಾಡ ಸಮೀಪದ ಸಿದ್ದಾಪುರ (ನಾಗಬೇನಾಳ) ಖಾಸಗಿ ಜಮೀನಿನಲ್ಲಿ ಘನ ತ್ಯಾಜ್ಯ ಘಟಕಕ್ಕೆ ಸ್ಥಾಪಿಸುತ್ತಿದ್ದಾರೆಂದು ಆಕ್ಷೇಪಿಸಿದ ರೈತರು ತಡೆ ನೀಡಿದರು

   

ನಾಲತವಾಡ: ಸಮೀಪದ ಮುಳುಗಡೆ ಪ್ರದೇಶ ಹಳೇ ಸಿದ್ದಾಪುರ ಭಾಗದಲ್ಲಿ ಸಂತ್ರಸ್ತ ರೈತರ ಮಾಲ್ಕಿ ಜಮೀನು ಅತಿಕ್ರಮಿಸಿ ನಾಲತವಾಡ ಪ.ಪಂನವರು ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ಶುಕ್ರವಾರ ಸ್ಥಳಕ್ಕೆ ತೆರಳಿ ವಿವಾದ ಇತ್ಯರ್ಥಗೊಳ್ಳುವವರೆಗೂ ಘಟಕ ನಿರ್ಮಾಣ ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.

ಮುದ್ದೇಬಿಹಾಳದಿಂದ ಸರ್ವೇಯರುಗಳು ಆಗಮಿಸಿ ಸರ್ವೇ ಕಾರ್ಯ ನಡೆಸುತ್ತಿರುವುದನ್ನು ಗಮನಿಸಿದ ರೈತರು, ಈಗಾಗಲೇ ಸರ್ವೇಯರುಗಳು ಮಾಲ್ಕಿ ಜಮೀನಿನ ಹದ್ದುಬಸ್ತು ಗುರುತಿಸಿ ಕಲ್ಲುಗಳನ್ನು ನೆಟ್ಟಿದ್ದಾರೆ. ನಮ್ಮ ಜಮೀನನ್ನು ಘಟಕ ನಿರ್ಮಾಣಕ್ಕೆ ಪ.ಪಂನವರು ಅತಿಕ್ರಮಿಸಿರುವುದು ಖಚಿತವಾಗಿದೆ. ಹೀಗಿರುವಾಗ ಮತ್ತೊಮ್ಮೆ ಏಕೆ ಸರ್ವೇ ನಡೆಸುತ್ತಿದ್ದೀರಿ ಎಂದು ಆಕ್ಷೇಪಿಸಿದರು.

ADVERTISEMENT

‘ಪ.ಪಂ ಮುಖ್ಯಾಧಿಕಾರಿ ರೈತರ ಸರ್ವೇ ಅರ್ಜಿಗೆ ತಕರಾರು ದಾಖಲಿಸಿ ಮತ್ತೊಮ್ಮೆ ಸರ್ವೇ ನಡೆಸುವಂತೆ ಕೋರಿ ಪತ್ರ ಬರೆದಿದ್ದರಿಂದ ಈ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ಮೊದಲಿನ ಸರ್ವೇಯರ್ ಕೂಡ ನಮ್ಮ ಜೊತೆ ಬಂದಿದ್ದಾರೆ. ಸರ್ವೇ ನಂಬರ್ 92ರಲ್ಲಿ ಸರ್ಕಾರದ ಜಮೀನು ಇದೆ. ಸರ್ವೇ ನಂಬರ್ 93ರಲ್ಲಿ ಖಾಸಗಿ ಮಾಲೀಕತ್ವದ ರೈತರ ಜಮೀನು ಇದೆ. ಇವೆರಡನ್ನೂ ಸಸರ್ವೇ ಮಾಡಿದ್ದೇವೆ. ವರದಿಯನ್ನು ಮೇಲಧಿಕಾರಿಗೆ ಸಲ್ಲಿಸುತ್ತೇವೆ. ಅವರು ಅಂತಿಮ ತೀರ್ಮಾನ ಪ್ರಕಟಿಸುತ್ತಾರೆ’ ಎಂದು ಸರ್ವೆ ಸುಪರ್‌ವೈಸರ್ ಹಜೇರಿ ಸ್ಪಷ್ಟಪಡಿಸಿದರು.

ಇದನ್ನು ಆಕ್ಷೇಪಿಸಿದ ರೈತರು, ನಾವು ಹಿಂದೆ ಪ.ಪಂನವರು ಸರ್ವೇ ನಡೆಸುವಾಗ ತಕರಾರು ಕೊಟ್ಟರೆ ಪರಿಗಣಿಸದ ನೀವು, ನಾವು ನಮ್ಮ ಜಮೀನಿನ ಹದ್ದುಬಸ್ತು ಗುರುತಿಸುವಂತೆ ಕೋರಿ ಸರ್ವೇ ಅರ್ಜಿ ಹಾಕಿದ್ದಕ್ಕೆ ಪ.ಪಂನವರು ತಕರಾರು ಕೊಟ್ಟಿದ್ದಾರೆಂದು ಮತ್ತೊಮ್ಮೆ ಸಮೀಕ್ಷೆಗೆ ಬಂದಿದ್ದೀರಿ. ಇದು ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.

ಸ್ಥಳದಲ್ಲಿದ್ದ ಪ.ಪಂ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಅವರೊಂದಿಗೆ ವಾಗ್ವಾದ ನಡೆಸಿದ ರೈತರು, ಖಾಸಗಿ ಜಮೀನನ್ನು ಸರ್ಕಾರಿ ಜಮೀನು ಎಂದು ಸುಳ್ಳು ಹೇಳಿ, ಇದಕ್ಕೆ ಪೂರಕ ದಾಖಲೆ ಸೃಷ್ಟಿಸಿ ₹3.65 ಕೋಟಿ ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಹೊರಟಿದ್ದೀರಿ. ಇಲ್ಲಿ ರೈತರ ಜಮೀನು ಕಬಳಿಕೆಯಾಗಿ ಅನ್ಯಾಯ ಆಗುತ್ತಿರುವುದು ನಿಮಗೆ ಗಮನಕ್ಕಿಲ್ಲವೇ ಎಂದು ಹರಿಹಾಯ್ದರು.

ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿಯವರು ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸರ್ವೇ ನಡೆಸಿ ಕೊಟ್ಟ ನಕ್ಷೆ ಸಹಿತ ದಾಖಲೆ ಪರಿಗಣಿಸಿ ಘಟಕ ನಿರ್ಮಾಣ ಕಾರ್ಯ ಪ್ರಾರಂಭಿಸಿದ್ದೇವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಜಾರಿಕೊಳ್ಳಲು ಯತ್ನಿಸಿದರು.

ನಮಗೆ ಇರುವುದೇ ಸ್ವಲ್ಪ ಜಮೀನು. ಅದರಲ್ಲೇ ಬೇಸಾಯ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ಅದರಲ್ಲಿಯೂ ಕಾಲು ಭಾಗ ಸರ್ಕಾರದ ಹೆಸರಿನಲ್ಲಿ ನಮ್ಮಿಂದ ಕಸಿದುಕೊಂಡರೆ ಬದುಕಿಗೆ ಏನು ಮಾಡಬೇಕು. ನಮಗೆ ನ್ಯಾಯ ಬೇಕು. ಇದಕ್ಕಾಗಿ ನಾವು ಯಾವ ಹಂತಕ್ಕೆ ಹೋಗಲು ಸಿದ್ದರಿದ್ದೇವೆ. ಸರ್ವೇ ಅಂತಿಮ ವರದಿ ಬರುವವರೆಗೂ ಘಟಕದ ಕೆಲಸ ನಿಲ್ಲಿಸಿ ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಶಿವರುದ್ರಯ್ಯ ಹಿರೇಮಠ, ಸಂಗಪ್ಪ ಹವಲ್ದಾರ, ಪರಸಪ್ಪ ಸುಲ್ತಾನಪುರ, ಈರಪ್ಪ ಸುಲ್ತಾನಪುರ, ಬಸವರಾಜ ಲೋಟಗೇರಿ, ಅಂಬ್ರಪ್ಪ ಕರೀಭಾವಿ, ಶಿವಾನಂದ ಉಂಡಿ, ಯಮನಪ್ಪ ಕೋಟಿ, ಮಹಾಂತಪ್ಪ ಹಾವರಗಿ, ಬಸವರಾಜ ಅಂಗಡಿ, ಶಿವು ಅಂಗಡಿ, ಈರಪ್ಪ ಪತ್ತೆಪುರ, ಬಸಪ್ಪ ಪತ್ತೇಪುರ, ಪ್ರಭು ಪತ್ತೇಪುರ, ಮಹಾಂತೇಶ ಪಟ್ಟಣದ, ಈರಪ್ಪ ಕೋಟಿ, ಚಂದ್ರಶೇಖರ ಪಾಟೀಲ, ಜಗದೇವಪ್ಪ ಕೋಟಿ, ಮಲ್ಲಪ್ಪ ಪತ್ತೆಪುರ, ಅಮರೇಗೌಡ ಪಾಟೀಲ, ಅಂಬರೀಷ್ ಚಿತ್ತಾಪುರ, ಚನ್ನಪ್ಪ ಲೊಟಗೇರಿ, ಸಂಗಪ್ಪ ಪತ್ತೆಪುರ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.