ADVERTISEMENT

ಸೋಮೇಶ್ವರ ಜಾತ್ರೆ: ಕಲ್ಲಿಗೆ ತಲೆ ಜಜ್ಜಿಕೊಂಡ ‘ಬಿಂಗಿ’ಗಳು

ಕೃಷ್ಣಾ ತೀರದ ಗಣಿ ಗ್ರಾಮದ ಸೋಮೇಶ್ವರ ಜಾತ್ರೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 5:38 IST
Last Updated 9 ಡಿಸೆಂಬರ್ 2024, 5:38 IST
ಆಲಮಟ್ಟಿ ಸಮೀಪದ ಗಣಿ ಸೋಮೇಶ್ವರ ಜಾತ್ರೆಯಲ್ಲಿ ಬಿಂಗಿಗಳು ಕಲ್ಲಿಗೆ ತಲೆ ಜಜ್ಜಿಕೊಂಡರು
ಆಲಮಟ್ಟಿ ಸಮೀಪದ ಗಣಿ ಸೋಮೇಶ್ವರ ಜಾತ್ರೆಯಲ್ಲಿ ಬಿಂಗಿಗಳು ಕಲ್ಲಿಗೆ ತಲೆ ಜಜ್ಜಿಕೊಂಡರು   

ಆಲಮಟ್ಟಿ: ತಲೆಗೆ ಸಣ್ಣ ಕಲ್ಲು ತಾಗಿದರೂ ರಕ್ತ ಬರುತ್ತದೆ. ಆದರೆ ಇಲ್ಲಿ ‘ಬಿಂಗಿ’ಗಳು ಓಡೋಡಿ ಬಂದು ಬಂಡೆಗೆ ತಲೆಯನ್ನು ಡಿಕ್ಕಿ ಹೊಡೆಸಿದರೂ ಗಾಯವೂ ಇಲ್ಲ, ನೋವು ಆಗಲ್ಲ, ಏನೂ ಆಗುವುದಿಲ್ಲ...

ಇಂತಹ ದೃಶ್ಯ ಕಂಡುಬಂದಿದ್ದು ಸಮೀಪದ ಕೃಷ್ಣಾ ತೀರದ ಗಣಿ ಗ್ರಾಮದಲ್ಲಿ ಭಾನುವಾರ ನಡೆದ ಸೋಮಲಿಂಗೇಶ್ವರ ಜಾತ್ರೆಯಲ್ಲಿ.

ದೇವಸ್ಥಾನದ ಮುಂದೆ ಹಾಕಿರುವ ಬಂಡೆ ಕಲ್ಲಿಗೆ (ಇರಮುಂಡಿ ಕಲ್ಲು) ಬಿಂಗಿಗಳು ತಮ್ಮ ತಲೆಯನ್ನು ಡಿಕ್ಕಿ ಹೊಡೆಸುತ್ತಾರೆ. ಆಗ ಶಬ್ದವೂ ಕೇಳಿಬರುತ್ತದೆ. ಈ ಸಂಪ್ರದಾಯ ತಲೆಮಾರುಗಳಿಂದಲೂ ನಡೆದುಬಂದಿದೆ.

ADVERTISEMENT

ಬಿಂಗಿ ಜನರ ಆಚರಣೆ: ಸೋಮೇಶ್ವರ ದೇವಸ್ಥಾನದ ನಾನಾ ಬಾಬುದಾರರ ವಿವಿಧ ಜಾತಿಗೆ ಸೇರಿದ ಮೂವತ್ತಕ್ಕೂ ಅಧಿಕ ಮನೆತನಗಳಿವೆ. ಈ ಮನೆತನದ ಒಬ್ಬರನ್ನು ‘ಬಿಂಗಿ’ ಎಂದು ಮಾಡಲಾಗುತ್ತದೆ. ‘ಬಿಂಗಿ’ ಆದವರು ಕಠಿಣ ವ್ರತಾಚರಣೆ ಮಾಡಬೇಕು. ಮಾಂಸಾಹಾರ ಹಾಗೂ ಮದ್ಯಪಾನ ನಿಷಿದ್ಧ. ಪ್ರತಿ ಭಾನುವಾರ ದೇವಸ್ಥಾನಕ್ಕೆ ಬಂದು ತಮ್ಮ ಬಾಬುಗಳನ್ನು (ಕೊಳಲು, ಶಂಖ ಊದುವುದು, ಗಂಟೆ ಬಾರಿಸುವುದು ಸೇರಿ ವಿವಿಧ ಸೇವೆ ಸಲ್ಲಿಸುವುದು) ಚಾಚೂತಪ್ಪದೇ ಮಾಡಬೇಕು.

ಈಗ ದೇವರ ಕಾರ್ತೀಕೋತ್ಸವದ ಒಂದು ತಿಂಗಳ ಕಾಲ ಈ ಬಾಬುದಾರರು ನಿರಾಹಾರ, ಕೂದಲು ಕತ್ತರಿಸುವುದು ನಿಷಿದ್ಧ ಸೇರಿ ಮತ್ತಷ್ಟು ಕಠಿಣ ಆಚರಣೇ ಮಾಡಬೇಕು ಎನ್ನುತ್ತಾರೆ ಗ್ರಾಮದ ಹಿರಿಯರಾದ ಬಸಪ್ಪ ಪೂಜಾರಿ, ಶೇಖರಪ್ಪ ಬಿಂಗಿ, ನಿಂಗಪ್ಪ.

‘ಭಾನುವಾರ ನಡೆಯುವ ಮೆರವಣಿಗೆಯಲ್ಲಿ ಬಿಂಗಿಗಳೇ ಪ್ರಮುಖ ಆಕರ್ಷಣೆ. ಇವರ ಮೈಯಲ್ಲಿ ದೇವರು ಬಂದು ಅಲುಗು (ಪುರಾತನ ಕಾಲದ ಖಡ್ಗದ ರೀತಿಯ ವಸ್ತು) ಮೈಗೆ ಹೊಡೆದುಕೊಳ್ಳುತ್ತಾರೆ. ಕಬ್ಬಿಣದ ಗುಂಡುಗಳನ್ನು ಬೆನ್ನಿಗೆ ಹೊಡೆದುಕೊಳ್ಳುತ್ತಾರೆ. ಹೀಗೆ ಅಚ್ಚರಿ ಎನಿಸುವ ಅನೇಕ ಸಂಪ್ರದಾಯ ಪಾಲಿಸಲಾಗುತ್ತದೆ. ನಂತರ ದೇವಸ್ಥಾನದಲ್ಲಿನ ಕಲ್ಲಿಗೆ ಈ ಬಿಂಗಿಗಳು ಕನಿಷ್ಠ ಮೂರು ಬಾರಿ ತಲೆ ಜಜ್ಜಿಕೊಳ್ಳುತ್ತಾರೆ. ಗ್ರಾಮದ ಭಕ್ತರು ಮಡಿಯಿಂದ ತಯಾರಿಸಿದ ನೈವೇದ್ಯವನ್ನು ಬಿಂಗಿಗಳಿಗೆ ಅರ್ಪಿಸುವುದು ಸಂಪ್ರದಾಯ. ಇದರಿಂದ ಹರಕೆ ಈಡೇರುತ್ತದೆ ಎನ್ನುವ ಭಾವನೆಯೂ ಭಕ್ತರಲ್ಲಿದೆ’ ಎನ್ನುತ್ತಾರೆ ಗಣಿ ಗ್ರಾಮದ ಸೋಮಶೇಖರ.

ಗ್ರಾಮದ ದೇಶಗತಿ ಮನೆತನದ ಭರತರಾಜ ದೇಸಾಯಿ (ಗಣಿ) ಮನೆತನದಿಂದ ಕಳಸದ ಮೆರವಣಿಗೆ, ಅಲುಗುಗಳೊಂದಿಗೆ ವಿವಿಧ ವಾದ್ಯ ವೈಭವಗಳ ಸಹಿತ ಮೆರವಣಿಗೆ ಜರುಗಿತು.

ವಿಶಿಷ್ಟ ನೈವೇದ್ಯ: ಕರಿಗಡುಬು, ಸಜ್ಜೆ ಹಾಗೂ ಜೋಳದ ರೊಟ್ಟಿ, ಜವಾರಿ ಗೋಧಿಯ ಚಪಾತಿ, ಹೋಳಿಗೆ ಹಾಗೂ ಶುದ್ಧ ದೇಶಿ ಗೋವಿನ ತುಪ್ಪ, ಅವರೆಕಾಳಿನ ಪಲ್ಯೆ, ಮೊಸರು, ಹಾಲು ಕಾರೆಳ್ಳು ಚಟ್ನಿ ಹೀಗೆ ವಿವಿಧ ಬಗೆಯ ಗ್ರಾಮೀಣ ಸೊಗಡಿನ ಆಹಾರ ಪದಾರ್ಥಗಳ ಬುತ್ತಿ ಕಟ್ಟಿಕೊಂಡು ದೇವರಿಗೆ ಹಾಗೂ ಬಿಂಗಿಗಳಿಗೆ ನೈವೇದ್ಯ ಸಮರ್ಪಿಸಲಾಗುತ್ತದೆ.

ಆಲಮಟ್ಟಿ ಸಮೀಪದ ಗಣಿ ಸೋಮೇಶ್ವರ ಜಾತ್ರೆಯಲ್ಲಿ ಕಠಿಣ ವ್ರತಾಚರಣೆ ಪಾಲಿಸಿದ ಬಿಂಗಿಗಳು
ಆಲಮಟ್ಟಿ ಸಮೀಪದ ಗಣಿ ಸೋಮೇಶ್ವರ ಜಾತ್ರೆಯಲ್ಲಿ ಬಿಂಗಿಗಳು ಕಲ್ಲಿಗೆ ತಲೆ ಜಜ್ಜಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.